ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ್ದೇಬಿಹಾಳ | ಪಂಚಾಯಿತಿ ಆವರಣದಲ್ಲೇ ಧೂಳು ಹಿಡಿದ ಡಸ್ಟ್‌ಬಿನ್‌

ಶಂಕರ ಈ.ಹೆಬ್ಬಾಳ
Published 8 ನವೆಂಬರ್ 2023, 4:32 IST
Last Updated 8 ನವೆಂಬರ್ 2023, 4:32 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ಗ್ರಾಮೀಣ ಪ್ರದೇಶದ ಜನರಲ್ಲಿ ಸ್ವಚ್ಛತೆಯ ಅರಿವು ಮೂಡಿಸಲು ಸ್ವಚ್ಛಭಾರತ ಮಿಷನ್ ಯೋಜನೆಯಡಿ ಮನೆ ಮನೆಗಳಿಗೂ ವಿತರಿಸಲು ಖರೀದಿಸಲಾದ ಡಸ್ಟ್ ಬಿನ್‌ಗಳಿಗೇ ‘ಡಸ್ಟ್’ ಹಿಡಿದಿರುವ ಸಂಗತಿ ತಾಲ್ಲೂಕಿನ ಹಿರೇಮುರಾಳ ಗ್ರಾಮ ಪಂಚಾಯಿತಿಯಲ್ಲಿ ಬೆಳಕಿಗೆ ಬಂದಿದೆ.

ಜಿಲ್ಲಾ ಪಂಚಾಯಿತಿಯಿಂದ ಪೂರೈಕೆಯಾಗಿರುವ ಡಸ್ಟ್‌ಬಿನ್‌ಗಳನ್ನು ಹಿರೇಮುರಾಳ ಗ್ರಾಮ ಪಂಚಾಯಿತಿಯ ಕೆಳಗಿನ ಕೊಠಡಿಯಲ್ಲಿ ಹಾಗೂ ಪಂಚಾಯಿತಿ ಹಿಂಭಾಗದಲ್ಲಿ ಶೇಖರಿಸಿ ಇಡಲಾಗಿದ್ದು, ಧೂಳು ಹಿಡಿದಿದೆ. ಮಳೆ ಸಂದರ್ಭದಲ್ಲಿ ರಾಡಿ ನೀರೆಲ್ಲ ಇದರಲ್ಲಿ ತುಂಬಿ ವಿತರಣೆಗೂ ಮುನ್ನವೇ ಹಳೆಯದಾಗಿವೆ.

‘ಹಿರೇಮುರಾಳ ಗ್ರಾಮ ಪಂಚಾಯಿತಿಯು ಅರಸನಾಳ, ನೆರಬೆಂಚಿ, ಹಿರೇಮುರಾಳ, ಆರೇಮುರಾಳ, ಗೋನಾಳ ಎಸ್.ಎಚ್., ವಣಕ್ಯಾಳ, ಜಂಗಮುರಾಳ ಗ್ರಾಮಗಳನ್ನು ಒಳಗೊಂಡಿದೆ. ಹಿರೇಮುರಾಳ ಹಾಗೂ ಆರೇಮುರಾಳ ಗ್ರಾಮಗಳನ್ನು ಹೊರತುಪಡಿಸಿ ಇನ್ನುಳಿದ ಗ್ರಾಮಗಳಿಗೆ ಡಸ್ಟ್‌ಬಿನ್‌ಗಳನ್ನು ವಿತರಿಸಲಾಗಿದೆ. ಸದ್ಯ ಇರುವ 260 ಡಸ್ಟ್‌ಬಿನ್‌ಗಳು ಎರಡೂ ಗ್ರಾಮಗಳಿಗೆ ಸಾಕಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಮತ್ತಷ್ಟು ಡಸ್ಟ್‌ಬಿನ್‌ಗಳನ್ನು ಖರೀದಿಸಿ ಎರಡೂ ಗ್ರಾಮಗಳಿಗೆ ಹಂಚಬೇಕಾಗಿದೆ. ಹೀಗಾಗಿ ಗ್ರಾಮ ಪಂಚಾಯ್ತಿಯಲ್ಲಿ ಕೆಲವು ಡಸ್ಟ್‌ಬಿನ್‌ಗಳನ್ನು ಶೇಖರಿಸಿ ಇಡಲಾಗಿದೆ’ ಎನ್ನುವುದು ಗ್ರಾಮ ಪಂಚಾಯ್ತಿ ಅಧಿಕಾರಿಗಳ ಮಾತು.

ಪ್ರತಿ ಕುಟುಂಬದ ಸದಸ್ಯರಿಗೆ ತಲಾ ಎರಡು ಡಬ್ಬಗಳನ್ನು ಕೊಡಲಾಗುತ್ತಿದೆ. ಅದರಲ್ಲಿ ಹಸಿ ಕಸ, ಒಣ ಕಸ ಎಂದು ವಿಂಗಡಿಸಿ, ಪಂಚಾಯಿತಿಯಿಂದ ಕಸ ಸಂಗ್ರಹಕ್ಕೆ ಬರುವ ವಾಹನಕ್ಕೆ ಕೊಡಬೇಕು. ಕೆಲವೆಡೆ ಇದು ಸಮರ್ಪಕ ಅನುಷ್ಠಾನವಾದರೆ,  ಆದರೆ ಮತ್ತೆ ಕೆಲವಡೆ ಡಬ್ಬಗಳಿಗೆ ಧೂಳು ಮೆತ್ತಿಕೊಂಡಿವೆ.

‘ಡಸ್ಟ್‌ಬಿನ್‌ಗಳನ್ನು ಜಿಲ್ಲಾ ಪಂಚಾಯಿತಿಯಿಂದಲೇ ನೇರವಾಗಿ ಖರೀದಿಸಿಕೊಡಲಾಗಿದ್ದು ₹3 ಲಕ್ಷ ವರೆಗೂ ವೆಚ್ಚವಾಗಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಡಸ್ಟ್‌ಬಿನ್‌ಗಳು ಜನರ ಕೈಗೆ ಸಿಗದೆ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿಯೇ ಧೂಳು ಹಿಡಿಯುತ್ತಿವೆ’ ಎನ್ನುತ್ತಾರೆ ಸಾರ್ವಜನಿಕರು.

ಹಿರೇಮುರಾಳ ಗ್ರಾಮ ಪಂಚಾಯಿತಿ ಆವರಣದಲ್ಲಿರುವ ಡಸ್ಟ್‌ಬಿನ್‌ಗಳ ವಿತರಣೆಗೆ ಅಧಿಕಾರಿಗಳು ಮುಂದಾಗಬೇಕು. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸಬೇಕು
ಬಿ.ಬಿ.ಪಾಟೀಲ್, ಹಿರೇಮುರಾಳ ಗ್ರಾಮದ ಮುಖಂಡರು
ಹಿರೇಮುರಾಳ ಹಾಗೂ ಆರೇಮುರಾಳ ಗ್ರಾಮಗಳಿಗೆ ಏಕಕಾಲಕ್ಕೆ ಡಸ್ಟ್‌ಬಿನ್‌ ವಿತರಿಸಲು ಆಡಳಿತ ಮಂಡಳಿ ಸದಸ್ಯರು ತಿಳಿಸಿದ್ದಾರೆ. ವಾರದೊಳಗೆ ಸಭೆ ನಡೆಸಿ ವಿತರಣೆಗೆ ಕ್ರಮವಹಿಸಲಾಗುವುದು.
ಕಲ್ಮೇಶ ಕುಂಬಾರ, ಹಿರೇಮುರಾಳ ಪಿಡಿಒ
ಮುದ್ದೇಬಿಹಾಳ ತಾಲ್ಲೂಕಿನ ಹಿರೇಮುರಾಳ ಗ್ರಾಮ ಪಂಚಾಯಿತಿಯಲ್ಲಿ ಡಸ್ಟ್‌ಬಿನ್‌ ಸಂಗ್ರಹಿಸಿರುವುದು
ಮುದ್ದೇಬಿಹಾಳ ತಾಲ್ಲೂಕಿನ ಹಿರೇಮುರಾಳ ಗ್ರಾಮ ಪಂಚಾಯಿತಿಯಲ್ಲಿ ಡಸ್ಟ್‌ಬಿನ್‌ ಸಂಗ್ರಹಿಸಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT