ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲಿಷ್ಠ ಭಾರತಕ್ಕಾಗಿ ಆರೋಗ್ಯಯುತ ಸಮಾಜ ಅಗತ್ಯ

Published 28 ಏಪ್ರಿಲ್ 2024, 4:34 IST
Last Updated 28 ಏಪ್ರಿಲ್ 2024, 4:34 IST
ಅಕ್ಷರ ಗಾತ್ರ

ವಿಜಯಪುರ: ಭಾರತ ಬಲಿಷ್ಠವಾಗಿರಬೇಕಾದರೆ ಸಮುದಾಯ ಆರೋಗ್ಯ ಪಾತ್ರ ಬಹುಮುಖ್ಯವಾಗಿದೆ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ.ಎಂ. ಜಯರಾಜ ಹೇಳಿದರು.

ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಬಿ.ಎಂ. ಪಾಟೀಲ ನರ್ಸಿಂಗ್ ಕಾಲೇಜಿನಲ್ಲಿ ರಾಜೀವ ಗಾಂಧಿ ವಿಶ್ವವಿದ್ಯಾಲಯ, ಸೊಸೈಟಿ ಕಮ್ಯೂನಿಟಿ ನರ್ಸಿಂಗ್ ಆಫ್ ಇಂಡಿಯಾ ಸಹಯೋಗದಲ್ಲಿ ಶುಕ್ರವಾರ ಪ್ರಾರಂಭವಾದ ಸಮುದಾಯ ಆರೋಗ್ಯ ಶುಶ್ರೂಷಾ ಶಿಕ್ಷಣ ಕೌಶಲ ಮತ್ತು ಸಂಶೋಧನೆಯಲ್ಲಿ ಕ್ರಾಂತಿ ಮತ್ತು ಹೊಸ ದೃಷ್ಟಿಕೋನ ಕುರಿತ ಎರಡು ದಿನಗಳ ಆಂತರರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ಸಮುದಾಯದಲ್ಲಿ ಆರೋಗ್ಯ ಸುಧಾರಣೆಯಿಂದ ದೇಶದ ಆರೋಗ್ಯ ಸುಧಾರಣೆ ಸಾಧ್ಯವಿದೆ. ದೇಶದಲ್ಲಿ ಪ್ರತಿಯೊಬ್ಬರು ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ ಸದೃಢರಾದಾಗ ಮಾತ್ರ ಭಾರತ ಬಲಿಷ್ಠವಾಗುತ್ತದೆ. ಇದರಲ್ಲಿ ಸಮುದಾಯ ಆರೋಗ್ಯದ ಪಾತ್ರ ಬಹುಮುಖ್ಯವಾಗಿದೆ’ ಎಂದರು.

ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಡಾ.ಸೋಮಶೇಖರ ಕಲ್ಮಠ ಮಾತನಾಡಿ, ‘ಮುಂದಿನ ದಿನಗಳಲ್ಲಿ ಎಲ್ಲ ವಿಭಾಗಗಳಲ್ಲಿ ಶುಶ್ರೂಷಕರು ಅಗತ್ಯವಾಗಲಿದ್ದಾರೆ. ಶುಶ್ರೂಷಕರು ಇಲ್ಲದೇ ಆರೋಗ್ಯ ಕ್ಷೇತ್ರ ಇರಲಾರದು. ಬಸವನಾಡಿನಲ್ಲಿ ಅಂತರರಾಷ್ಟ್ರೀಯ ಸಮ್ಮೇಳನ ಆಯೋಜಿಸುವ ಮೂಲಕ ಬಿ.ಎಲ್.ಡಿ.ಇ ಸಂಸ್ಥೆ ಈ ಭಾಗದ ಆರೋಗ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದೆ’ ಎಂದರು.

ಸೊಸೈಟಿ ಕಮ್ಯುನಿಟಿ ನರ್ಸಿಂಗ್ ಆಫ್ ಇಂಡಿಯಾ ಅಧ್ಯಕ್ಷ ಡಾ. ಚೆಲರಾನಿ ವಿಜಯಕುಮಾರ ಮಾತನಾಡಿ, ‘ಸಾಮಾನ್ಯವಾಗಿ ಅಂತರರಾಷ್ಟ್ರೀಯ ಸಮ್ಮೇಳನಗಳು ಮಹಾನಗರಗಳಲ್ಲಿ ನಡೆಯುತ್ತವೆ. ಈ ಬಾರಿ ಉತ್ತರ ಕರ್ನಾಟಕದ ವಿಜಯಪುರದಲ್ಲಿ ಅತ್ಯುತ್ತಮವಾಗಿ ಸಮ್ಮೇಳನ ಆಯೋಜಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಮುಂಬರುವ ದಿನಗಳಲ್ಲಿ ಶುಶ್ರೂಷಕರಿಗೆ ಸಂಬಂಧಿಸಿದ ಇನ್ನಷ್ಟು ಕಾರ್ಯಕ್ರಮಗಳು ನಡೆಯಲಿ’ ಎಂದು ಶುಭ ಹಾರೈಸಿದರು.

ಕರ್ನಾಟಕ ಡಿಪ್ಲೊಮಾ ನರ್ಸಿಂಗ ಬೋರ್ಡ ಕಾರ್ಯದರ್ಶಿ ಮಡಿವಾಳಪ್ಪ ನಾಗರಳ್ಳಿ ಮಾತನಾಡಿ, ‘ಸಮುದಾಯದಲ್ಲಿ ಶುಶ್ರೂಷಕರ ಪಾತ್ರ ಬಹುಮುಖ್ಯವಾಗಿದ್ದು, ಮುಂದಿನ ದಿನಗಳಲ್ಲಿ ಸಮುದಾಯ ಶುಶ್ರೂಷಕರಿಗೆ ಎಲ್ಲ ರೀತಿಯ ಅಧಿಕಾರ ನೀಡಿದರೆ ಆರೋಗ್ಯ ಸುಧಾರಣೆ ಮತ್ತಷ್ಟು ಉತ್ತಮವಾಗಿರಲಿದೆ’ ಎಂದು ಹೇಳಿದರು.

ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್‌.ಬಿ. ಕೊಟ್ನಾಳ, ಬಿ.ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ಆನಂದ ಪಾಟೀಲ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ, ಸೊಸೈಟಿ ಕಮ್ಯುನಿಟಿ ನರ್ಸಿಂಗ್ ಆಫ್ ಇಂಡಿಯಾ ಕಾರ್ಯದರ್ಶಿ ಡಾ. ಶಾಂಡ್ರೆಲ್ಲಾ ಇಮ್ಯಾನುಯೆಲ್ ಮಾತನಾಡಿದರು.

ಗುರುರಾಜ ಗುಗ್ಗರಿ, ಡಾ. ಜಯಶ್ರೀ ಪೂಜಾರಿ, ಡಾ. ಬಶೀರಅಹ್ಮದ, ಡಾ. ಕವಿತಾ, ಸೌಜನ್ಯಾ ಪೂಜಾರಿ, ಅಮರನಾಥ ಸನ್ಮುಕೆ, ಬಾಪು ಖೊದ್ನಾಪೂರ‌, ಪ್ರವೀಣ ಬಗಲಿ, ಉಪಪ್ರಾಚಾರ್ಯೆ ಡಾ. ಸುಚಿತ್ರಾ ರಾಠಿ, ಪ್ರಾಚಾರ್ಯ ಡಾ. ಶಾಲ್ಮೊನ ಚೊಪಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT