ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವೈಜ್ಞಾನಿಕ ಶೈಕ್ಷಣಿಕ ನೀತಿ: ರಾಣಿ ಚನ್ನಮ್ಮ ವಿವಿ ವಿರುದ್ಧ ಪ್ರತಿಭಟನೆ

Published 13 ಫೆಬ್ರುವರಿ 2024, 14:04 IST
Last Updated 13 ಫೆಬ್ರುವರಿ 2024, 14:04 IST
ಅಕ್ಷರ ಗಾತ್ರ

ವಿಜಯಪುರ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಸಿದ್ಧೇಶ್ವರ ದೇವಾಲಯದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿ ಗಾಂಧಿ ವೃತ್ತದ  ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ನಡೆಸಿ, ವಿಶ್ವವಿದ್ಯಾಲಯದ ವಿರುದ್ಧ ವಿದ್ಯಾರ್ಥಿಗಳು ಧಿಕ್ಕಾರ ಕೂಗಿದರು.

ಏಕಾಏಕಿ ರಸ್ತೆ ತಡೆ ನಡೆಸಿದ ಕಾರಣ ಪೊಲೀಸ್ ಮತ್ತು ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

ಎಬಿವಿಪಿ ಪ್ರಾಂತ ಸಹ ಸಂಘಟನಾ ಕಾರ್ಯದರ್ಶಿ ಗಂಗಾಧರ ಹಂಜಗಿ ಮಾತನಾಡಿ, ಸಮಯಕ್ಕೆ ಸರಿಯಾಗಿ ಪರೀಕ್ಷೆ ಫಲಿತಾಂಶವನ್ನು ನೀಡುವುದಕ್ಕೆ ಆಗುತ್ತಿಲ್ಲ, ನೀಡಿರುವ ಫಲಿತಾಂಶದಲ್ಲಿ ಹಲವಾರು ರೀತಿಯ ಗೊಂದಲಗಳು ಸೃಷ್ಟಿಯಾಗುತ್ತಿವೆ. ಕೆಲವೊಂದು ಸೆಮಿಸ್ಟರ್‌ಗಳ ಫಲಿತಾಂಶಗಳು ಬಂದು ವರ್ಷವಾದರೂ ಇಲ್ಲಿಯವರೆಗೆ ಅಂಕಪಟ್ಟಿಗಳು ವಿದ್ಯಾರ್ಥಿಗಳಿಗೆ ದೊರಕದೆ ಇರುವುದು ದುರಾದೃಷ್ಟಕರ ಸಂಗತಿ ಎಂದರು.

ಪರೀಕ್ಷೆಗಳು ನಡೆದ ಎಷ್ಟೋ ತಿಂಗಳಾದರೂ ಫಲಿತಾಂಶವನ್ನು ನೀಡುವುದಕ್ಕೆ ಆಗುತ್ತಿಲ್ಲ. ವಿಶ್ವವಿದ್ಯಾಲಯದ ಸಹಾಯವಾಣಿಯು ವಿದ್ಯಾರ್ಥಿಗಳ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ. ಬೋಧನಾ ವಿಷಯಗಳ ಕುರಿತು ವಿಶ್ವವಿದ್ಯಾಲಯಕ್ಕೆ ಸ್ಪಷ್ಟನೆ ಇಲ್ಲದೆ ತರಗತಿಗಳನ್ನ ಪ್ರಾರಂಭಿಸಿದ ಒಂದು ತಿಂಗಳ ನಂತರ ವಿಷಯಗಳನ್ನು ಬದಲಾವಣೆ ಮಾಡಿ ವಿದ್ಯಾರ್ಥಿಗಳಿಗೆ ಗೊಂದಲ ಸೃಷ್ಟಿ ಮಾಡುತ್ತಿದೆ ಎಂದು ದೂರಿದರು.

ಅಂಕಪಟ್ಟಿಯ ಶುಲ್ಕ ಕಟ್ಟಿಸಿಕೊಂಡ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಮೂಲ ಅಂಕಪಟ್ಟಿ ನೀಡದೆ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆ ಮಾಡುತ್ತಿದೆ. ಪರೀಕ್ಷಾ ವೇಳಾಪಟ್ಟಿಯನ್ನು ಪದೇ ಪದೇ ಬದಲಾವಣೆ ಮಾಡಿ ವಿದ್ಯಾರ್ಥಿಗಳಿಗೆ ಯಾವಾಗ ಪರೀಕ್ಷೆ ನಡೆಯುತ್ತದೆಯೋ ಇಲ್ಲವೋ ಎಂಬ ಗೊಂದಲ ಸೃಷ್ಟಿಸುತ್ತಿದೆ. ಪರೀಕ್ಷಾ ಅರ್ಜಿ ಹಾಗೂ ಇನ್ನಿತರ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸರ್ವರ್ ಸಮಸ್ಯೆಯಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದರು.

ಎಬಿವಿಪಿ ರಾಜ್ಯ ಕಾರ್ಯದರ್ಶಿ ಸಚಿನ್‌ ಕುಳಗೇರಿ, ಜಿಲ್ಲಾ ಸಂಚಾಲಕ ಮಂಜುನಾಥ ಹಳ್ಳಿ,  ಹರ್ಷ ನಾಯಕ, ರೇಖಾ ಮಾಳಿ, ಕವಿತಾ ಬಿರಾದಾರ, ಸಿದ್ದು ಪತ್ತಾರ, ಶಿವನಗೌಡ ಬಿರಾದಾರ, ಮಲ್ಲಿಕಾರ್ಜುನ ಮಾಳಿ, ಮಾಂತೇಶ ಕಂಬಾರ, ಶ್ರೀಕಾಂತ ರೆಡ್ಡಿ, ಪ್ರವೀಣ ಬಿರಾದಾರ, ಅಭಿಷೇಕ ಬಿರಾದಾರ, ಅಭಿಷೇಕ ಗುಡದಿನ್ನಿ , ಸಂದೀಪ ಅರಳಗುಂಡಗಿ,  ಐಶ್ವರ್ಯ ಆಸಂಗಿ, ವಿನಾಯಕ , ಪೂಜಾ ವೀರಶೆಟ್ಟಿ, ಶ್ರವಣ್ ಕುಮಾರ್, ಅಮಿತ್‌,  ದರ್ಶನ, ಪ್ರದೀಪ, ವಿಜಯಲಕ್ಷ್ಮಿ, ಶಿಲ್ಪಾ ಪೂಜಾರಿ ಇದ್ದರು. 

ವಿಶ್ವವಿದ್ಯಾಲಯ ನೀಡುತ್ತಿರುವ ಫಲಿತಾಂಶದಲ್ಲಿ ಬಹಳಷ್ಟು ಗೊಂದಲ ಆಗುತ್ತಿವೆ. ಉತ್ತೀರ್ಣವಾದ  ವಿದ್ಯಾರ್ಥಿ ಮತ್ತೆ ಫಲಿತಾಂಶ ನೋಡಿದಾಗ ಅನುತೀರ್ಣ ಎಂದು ತೋರಿಸಿದ ಉದಾಹರಣೆ ಇದೆ.
ಸಚಿನ್‌ ಕುಳಗೇರಿ, ರಾಜ್ಯ ಕಾರ್ಯದರ್ಶಿ ಎಬಿವಿಪಿ  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT