ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತೀಯ ಸಂಸ್ಕೃತಿ ಉತ್ಸವ–5’: ಕಗ್ಗೋಡದಲ್ಲಿ ಚಟುವಟಿಕೆ ಚುರುಕು..!

ಭಾರತ ವಿಕಾಸ ಸಂಗಮದ ಉತ್ಸವ ಡಿ.24ರಿಂದ 31ರವರೆಗೆ
Last Updated 30 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ವಿಜಯಪುರ:ದೇಶದ ಶ್ರೇಷ್ಠ ಸಂಸ್ಕೃತಿ ಹಾಗೂ ಶಕ್ತಿಯನ್ನು ಅನಾವರಣಗೊಳಿಸುವ ಉದ್ದೇಶದಿಂದ ಭಾರತ ವಿಕಾಸ ಸಂಗಮ ‘ಭಾರತೀಯ ಸಂಸ್ಕೃತಿ ಉತ್ಸವ–5’ನ್ನು ಡಿ.24ರಿಂದ 31ರವರೆಗೆ ವಿಜಯಪುರ ತಾಲ್ಲೂಕಿನ ಕಗ್ಗೋಡದಲ್ಲಿ ಆಯೋಜಿಸಿದೆ.

ವಿಜಯಪುರದ ಸಿದ್ಧೇಶ್ವರ ಸಂಸ್ಥೆ, ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘದ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಡಿ.24ರಂದು ಭಾರತೀಯ ಸಂಸ್ಕೃತಿ ಪ್ರತಿಬಿಂಬಿಸುವ ಭವ್ಯ ಶೋಭಾಯಾತ್ರೆಯೊಂದಿಗೆ ಉತ್ಸವ ಆರಂಭಗೊಳ್ಳಲಿದೆ. 31ರವರೆಗೆ ಸತತ 8 ದಿನ ಮುಂಜಾನೆ 9ರಿಂದ ತಡರಾತ್ರಿಯವರೆಗೂ ಎರಡು ವೇದಿಕೆಗಳಲ್ಲಿ ಎಲ್ಲಾ ಕ್ಷೇತ್ರಗಳ ಸಾಧಕರ ಅಧಿವೇಶನ, ಚರ್ಚೆ, ಸಂವಾದ ನಡೆಯಲಿವೆ.

ಉತ್ಸವಕ್ಕಾಗಿ 450 ಎಕರೆ ಜಾಗದಲ್ಲಿ ಸಿದ್ಧತೆ ಕೈಗೊಳ್ಳಲಾಗಿದೆ. ಎರಡು ವೇದಿಕೆ ನಿರ್ಮಾಣಗೊಳ್ಳಲಿವೆ. ಒಂದು ಲಕ್ಷ ಜನರು ಆಸೀನರಾಗುವ ಬೃಹತ್ ವೇದಿಕೆ ಒಂದೆಡೆಯಿದ್ದರೆ; ಇದಕ್ಕೆ ಪರ್ಯಾಯವಾಗಿ 25000 ಜನರು ಕೂರುವ ಮತ್ತೊಂದು ವೇದಿಕೆ ರಚಿಸಲಾಗುತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.

‘150 ಎಕರೆ ಜಾಗದಲ್ಲಿ 450 ಮಳಿಗೆಗಳನ್ನು ನಿರ್ಮಿಸಲಾಗುವುದು. ಕೃಷಿ, ಕೈಗಾರಿಕೆ ಸೇರಿದಂತೆ ಎಲ್ಲಾ ಕ್ಷೇತ್ರದ ವಸ್ತು ಪ್ರದರ್ಶನ ಇಲ್ಲಿರಲಿದೆ. ಕನ್ಯಾಕುಮಾರಿಯಿಂದ ಹಿಡಿದು ಕಾಶ್ಮೀರದವರೆಗಿನ ಜನರು ಈ ಉತ್ಸವದಲ್ಲಿ ಭಾಗಿಯಾಗಲಿದ್ದಾರೆ. ನಿತ್ಯ 2ರಿಂದ 2.5 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಒಟ್ಟು 25 ಲಕ್ಷಕ್ಕೂ ಹೆಚ್ಚಿನ ಜನರು ಸೇರಲಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

ಮೋದಿ 31ಕ್ಕೆ?

‘ಡಿ.25ರಂದು ಮಾತೃ ಸಂಗಮ ನಡೆಯಲಿದೆ. ಇದನ್ನು ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಂದಲೇ ಉದ್ಘಾಟಿಸುವ ಅಪೇಕ್ಷೆಯಿದೆ. ಈ ನಿಟ್ಟಿನಲ್ಲಿ ಭಾರತ ವಿಕಾಸ ಸಂಗಮದ ಸ್ಥಾಪಕ ಗೋವಿಂದಾಚಾರ್ಯ, ರಾಷ್ಟ್ರೀಯ ಸಂರಕ್ಷಕರಾಗಿರುವ ಬಸವರಾಜ ಪಾಟೀಲ ಸೇಡಂ ತಲ್ಲೀನರಾಗಿದ್ದಾರೆ.

ಉತ್ಸವದ ಸಮಾರೋಪಕ್ಕೆ ಪ್ರಧಾನಿ ಮೋದಿ ಅವರಿಗೆ ಆಹ್ವಾನ ನೀಡಲಾಗಿದೆ. ಡಿ.31ರಂದು ಪ್ರವಾಸವೂ ನಿಗದಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ಕಚೇರಿ ಕಾರ್ಯಾಲಯ ಸೇಡಂ ಜತೆ ನಿರಂತರ ಸಂಪರ್ಕದಲ್ಲಿದೆ’ ಎಂದು ಯತ್ನಾಳ ಹೇಳಿದರು.

‘ರಾಶಿ ಚಕ್ರ’ದಲ್ಲೂ ಪ್ರಚಾರ 10ರಿಂದ

ಏಕ ವ್ಯಕ್ತಿ ರಂಗ ಪ್ರಯೋಗದಿಂದ ಮನೆ ಮಾತಾಗಿರುವ ‘ರಾಶಿ ಚಕ್ರ’ ಕಾರ್ಯಕ್ರಮದ ಮೂಲಕವೂ ಉತ್ಸವಕ್ಕೆ ಜನರನ್ನು ಆಹ್ವಾನಿಸುವ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ ಎಂದು ಉತ್ಸವದ ರಾಜ್ಯ ಸಂಯೋಜಕ ಚಂದ್ರಶೇಖರ ಆರ್.ಢವಳಗಿ ತಿಳಿಸಿದರು.

‘ದಾವಣಗೆರೆಯಿಂದ ಅ.10ರಿಂದ ರಾಶಿ ಚಕ್ರ ಆರಂಭಗೊಳ್ಳಲಿದೆ. ರಾಜ್ಯದ 30 ಜಿಲ್ಲೆಗಳಲ್ಲೂ ಸಂಚರಿಸುವೆ. ನನ್ನ ಕಾರ್ಯಕ್ರಮದ ನಡುವೆಯೇ ಉತ್ಸವ ಕುರಿತ ವಿಡಿಯೊ ಪ್ರದರ್ಶನ ನಡೆಯಲಿದೆ. ನೆರೆದ ಜನರಿಗೆ ಹೆಚ್ಚಿನ ಮಾಹಿತಿ ಕೊಡುವ ಜತೆಗೆ ಆಹ್ವಾನವನ್ನು ನೀಡುತ್ತೇನೆ. ಉತ್ಸವ ಸಮಿತಿಯ ಪದಾಧಿಕಾರಿಗಳು ಈ ಸಂದರ್ಭ ಖುದ್ದು ಹಾಜರಿದ್ದು, ಆಯಾ ಭಾಗದ ಜನರಿಗೆ ಉತ್ಸವದ ಉದ್ದೇಶ ತಿಳಿಸಿಕೊಡಲಿದ್ದಾರೆ’ ಎಂದು ರಂಗಕರ್ಮಿ ಯಶವಂತ ಸರದೇಶಪಾಂಡೆ ಹೇಳಿದರು.

‘ಭಾರತೀಯ ಸಂಸ್ಕೃತಿ ಉತ್ಸವದ’ ಪರಿಚಯಾತ್ಮಕ ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ಮಕ್ಕಳ ಮನೋವಿಕಾಸಕ್ಕಾಗಿ ವಿಶೇಷವಾಗಿ ತಯಾರಿಸಿದ ಮಕ್ಕಳ ಚಿತ್ರ ‘ವೆರಿಗುಡ್‌ 10/10’ ಚಿತ್ರದ ಪ್ರದರ್ಶನವನ್ನು ವಿಜಯಪುರ, ಬಾಗಲಕೋಟೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಆಯ್ದ 212 ಶಾಲೆಗಳಲ್ಲಿ ಪ್ರದರ್ಶಿಸುತ್ತೇವೆ. ಇದರ ಜತೆಗೆ ಆಯ್ದ ಸ್ಥಳಗಳಲ್ಲಿ 50 ವಿಶೇಷ ಪ್ರದರ್ಶನ ಆಯೋಜಿಸಿದ್ದೇವೆ. ಇದೇ 22ರಿಂದ ಡಿ.20ರವರೆಗೂ ಈ ಕಾರ್ಯಕ್ರಮ ನಡೆಯಲಿದೆ ಎಂದು ಸಿ.ಆರ್‌.ಢವಳಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT