ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಣ್ಣನ ಹೆಸರಿನಲ್ಲಿ ವಿವಿ ಸ್ಥಾಪನೆಗೆ ಸಲಹೆ

ಬಿ.ಎಲ್.ಡಿ.ಇ ಸಂಸ್ಥೆ 111ನೇ ಸಂಸ್ಥಾಪನ ದಿನಾಚರಣೆಯಲ್ಲಿ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ
Last Updated 23 ಅಕ್ಟೋಬರ್ 2020, 11:33 IST
ಅಕ್ಷರ ಗಾತ್ರ

ವಿಜಯಪುರ: ಜಗತ್ತಿಗೆ ಸರ್ವಸಮಾನತೆ ಬೋಧಿಸಿದ್ದಲ್ಲದೇ, ಆಚರಣೆಗೆ ತಂದ ಮಹಾನ್ ದಾರ್ಶನಿಕ ಬಸವಣ್ಣನವರ ಹೆಸರಿನಲ್ಲಿ ವಿಶ್ವವಿದ್ಯಾಲಯವೊಂದು ಸ್ಥಾಪನೆಯಾಗಬೇಕಾಗಿದೆ ಎಂದು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಹೇಳಿದರು.

ನಗರದ ಬಿ.ಎಲ್.ಡಿ.ಇ ಸಂಸ್ಥೆಯ 111ನೇ ಸಂಸ್ಥಾಪನ ದಿನಾಚರಣೆ ಅಂಗವಾಗಿ ನಡೆದ ಆನ್ ಲೈನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶರಣ ಸಂಸ್ಕೃತಿಯ ಮೂಲಕ ಕಾಯಕ, ದಾಸೋಹ, ಸಮಾನತೆ, ಆತ್ಮಗೌರವದಂತಹ ಅದ್ಭುತ ಸಂದೇಶಗಳನ್ನು ನೀಡಿದ ಬಸವಣ್ಣನವರ ಹೆಸರಿನಲ್ಲಿ ಇದುವರೆಗೂ ನಾವು ಅವರ ಹೆಸರಿನಲ್ಲಿ ಒಂದು ವಿಶ್ವವಿದ್ಯಾಲಯ ಸ್ಥಾಪಿಸಿಲ್ಲ ಎಂದರು.

ಆಲಮೇಲ ದೇಶಮುಖರು, ಹಲಗಲಿ ಸರನಾಯಕರು, ರಕ್ಕಸಗಿ, ಸೊನ್ನ ದೇಸಾಯಿಯವರು ಮತ್ತಿತರ ಗಣ್ಯರ ಸಹಕಾರದಿಂದ ಬಿ.ಎಲ್.ಡಿ.ಇ ಸಂಸ್ಥೆಯನ್ನು ಹುಟ್ಟು ಹಾಕಿದ ಹಳಕಟ್ಟಿಯವರು 12ನೇ ಶತಮಾನದ ವಚನ ಸಾಹಿತ್ಯವನ್ನು ಜಗತ್ತಿಗೆ ಪಸರಿಸಲು ಕಾರಣವಾದವರು. ಒಂದು ವೇಳೆ ಫ.ಗು.ಹಳಕಟ್ಟಿಯವರು ತಾಡೋಲೆಗಳಲ್ಲಿದ್ದ ವಚನ ಸಾಹಿತ್ಯವನ್ನು ಹೆಕ್ಕಿ, ಪ್ರಕಟಿಸಿ ಜಗತ್ತಿಗೆ ಪರಿಚಯಿಸದೇ ಹೋಗಿದ್ದರೆ, ಬಸವಣ್ಣ ಹಾಗೂ ಶರಣ ಸಾಹಿತ್ಯ ಹೊರ ಜಗತ್ತಿಗೆ ತಿಳಿಯದೇ ಹೋಗುತ್ತಿತ್ತು ಎಂದರು.

ಬಿ.ಎಲ್.ಡಿ.ಇ ಅಧ್ಯಕ್ಷ ಎಂ.ಬಿ.ಪಾಟೀಲ್ ಮಾತನಾಡಿ, ಹಳಕಟ್ಟಿಯವರ ದೂರದೃಷ್ಠಿಯ ಫಲವಾಗಿ ಶೈಕ್ಷಣಿಕವಾಗಿ ಬಿ.ಎಲ್.ಡಿ.ಇ ಸಂಸ್ಥೆ, ಆರ್ಥಿಕವಾಗಿ ಶ್ರೀಸಿದ್ದೇಶ್ವರ ಬ್ಯಾಂಕ್, ಧಾರ್ಮಿಕವಾಗಿ ಶ್ರೀಸಿದ್ದೇಶ್ವರ ಸಂಸ್ಥೆ ನೆಲೆನಿಂತು, ವಿಜಯಪುರದ ಸಮಗ್ರ ಅಭಿವೃದ್ಧಿಗೆ ಈ ಸಂಸ್ಥೆಗಳು ಕಾರಣವಾಗಿವೆ ಎಂದರು.

ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ 350 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ವಿಭಾಗವನ್ನು ಶೀಘ್ರದಲ್ಲಿ ಆರಂಭಿಸಲಾಗುತ್ತಿದ್ದು, 100 ಹಾಸಿಗೆಗಳ ಹೃದಯ ವಿಭಾಗ ಹಾಗೂ 100 ಹಾಸಿಗೆಗಳ ಯೂರೋಲಾಜಿ ವಿಭಾಗ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.

ಬಿ.ಎಲ್.ಡಿ.ಇ ಸಂಸ್ಥೆಯಿಂದ ಶರಣ ಸಂಸ್ಕೃತಿಯನ್ನು ಪಸರಿಸಲು ಮಹಾವಿದ್ಯಾಲಯ ಆರಂಭಿಸಲಿ ಎಂದು ಅರವಿಂದ ಜತ್ತಿಯವರು ನೀಡಿದ ಸಲಹೆಗೆ ಸ್ಪಂದಿಸಿದ ಎಂ.ಬಿ.ಪಾಟೀಲ್‍, ಬಿ.ಡಿ.ಜತ್ತಿಯವರ ಹೆಸರಿನಲ್ಲಿಯೇ ಈ ಮಹಾವಿದ್ಯಾಲಯ ಆರಂಭಿಸಲಾಗುವುದು. ಅಲ್ಲದೇ, ಲಿಂಗಾಯತ ಅಧ್ಯಯನ ಕೇಂದ್ರ ಹೆಸರಿನಲ್ಲಿ ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದ ಶಾಖೆಯನ್ನು ಬೆಂಗಳೂರಿನಲ್ಲಿ ಆರಂಭಿಸಲಾಗುವುದು ಎಂದರು.

ಸಂಶೋಧನ ಕ್ಷೇತ್ರದಲ್ಲಿ ವಿಶೇಷ ಸಾಧನಗೈದ ಡಾ.ಶರಣ ಬಡಿಗೇರ, ಡಾ.ಸುರೇಖಾ ಹಿಪ್ಪರಗಿ, ಡಾ.ಗಿರೀಶ ಕುಲ್ಲೊಳ್ಳಿ, ಡಾ.ಶೈಲಜಾ ಬಿದರಿ, ಪ್ರೊ.ಕವಿತಾ ಬಸೀರ, ಶ್ರೀಧರ ಪೊತದಾರ, ಡಾ.ಆರ್.ಬಿ.ಕೊಟ್ನಾಳ, ಡಾ.ಪ್ರದಿಪ್ತಿ, ಡಾ.ಸಿ.ಎಸ್.ಪಾಟೀಲ, ಅನುರಾಧ ಟಂಕಸಾಲಿ, ಡಾ.ಪ್ರದೀಪ ಮಳಜಿ, ಡಾ.ಕೈಲಾಸ ಚಡಚಣ, ಡಾ.ರಮೇಶ ಮಲ್ಲಾಡಿ ಸೇರಿದಂತೆ 20 ಪ್ರಾಧ್ಯಾಪಕರನ್ನು, ಶೈಕ್ಷಣಿಕ ಸಾಧನೆಗೈದ ಡಾ.ನಮ್ರತಾ ನಾಯರ, ಡಾ.ದಾನೇಶ್ವರ ಕೊತ್ತಲಮಠ, ಡಾ.ಯಶೋಧಾ ಡಿ.ಎಚ್, ಕ್ರೀಡಾ ಸಾಧನೆಗೈದ ದಾನಮ್ಮ ಗುರವ, ಸವಿತಾ ಹೆಬ್ಬಾಳಟ್ಟಿ, ದಾನಮ್ಮ ಚಿಚಖಂಡಿ, ಶಿಲ್ಪಾ ರಾಠೋಡ, ಮಧು ಕಡಪುರ, ಭಾಗ್ಯಶ್ರೀ ಮಠಪತಿ, ಅನ್ನಪೂರ್ಣ ಭೋಸಲೆ ಅವರನ್ನು ಸಂಸ್ಥೆ ನಿರ್ದೇಶಕ ಸಂ.ಗು.ಸಜ್ಜನ, ಉಪಕುಲಪತಿ ಡಾ.ಎಂ.ಎಸ್.ಬಿರಾದಾರ ಸನ್ಮಾನಿಸಿದರು.

ಡಾ.ಅತುಲ್ ಆಯಿರೆ, ಡಾ.ರಾಘವೇಂದ್ರ ಕುಲಕರ್ಣಿ,ಆಡಳಿತಾಧಿಕಾರಿ ಬಿ.ಆರ್.ಪಾಟೀಲ, ಪ್ರೊ.ಬಿ.ಬಿ.ಡೆಂಗನವರ, ಪ್ರೊ.ಎ.ಬಿ.ಬೂದಿಹಾಳ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT