ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಮಟ್ಟಿ ಜಲಾಶಯ: ನೀರಿನ ಮಟ್ಟ ಕುಸಿದರೂ ಸದ್ಯಕ್ಕಿಲ್ಲ ತೊಂದರೆ

Published 8 ಜೂನ್ 2023, 4:27 IST
Last Updated 8 ಜೂನ್ 2023, 4:27 IST
ಅಕ್ಷರ ಗಾತ್ರ

ಚಂದ್ರಶೇಖರ ಕೋಳೇಕರ

ಆಲಮಟ್ಟಿ: ಒಂದೆಡೆ ಬಿಸಲಿನ ಪ್ರಖರತೆ ಹಾಗೂ ಹಿನ್ನೀರಿನ ಬಳಕೆಯಿಂದ ಆಲಮಟ್ಟಿ ಜಲಾಶಯದ ನೀರಿನ ಮಟ್ಟ ದಿನೆ ದಿನೇ ಕುಸಿಯುತ್ತಿದೆ. ಮತ್ತೊಂದೆಡೆ ಜೂನ್ ಮೊದಲ ವಾರ ಗತಿಸಿದರೂ ಜಲಾಶಯದ ಒಳಹರಿವು ಇನ್ನೂ ಆರಂಭಗೊಂಡಿಲ್ಲ. ಆದರೂ ಜುಲೈ 15ರ ವರೆಗೂ ಕುಡಿಯುವ ನೀರಿಗೆ ಸಮಸ್ಯೆಯಿಲ್ಲ. ಇದು ಆಲಮಟ್ಟಿ ಜಲಾಶಯದ ಸದ್ಯದ ಸ್ಥಿತಿಗತಿ.

20.97 ಟಿಎಂಸಿ ಅಡಿ ನೀರು

ಆಲಮಟ್ಟಿ ಜಲಾಶಯದಲ್ಲಿ ಬುಧವಾರ 20.973 ಟಿಎಂಸಿ ಅಡಿ ನೀರು ಸಂಗ್ರಹವಿದ್ದರೂ ಅದರಲ್ಲಿ ಡೆಡ್ ಸ್ಟೋರೇಜ್ ನೀರು 17.62 ಟಿಎಂಸಿ ಅಡಿ. ಇದನ್ನು ಬಿಟ್ಟು ಬಳಕೆಗೆ ಯೋಗ್ಯ ನೀರು 3.353 ಟಿಎಂಸಿ ಅಡಿ. ಹೀಗಾಗಿ ಜುಲೈ 15ರ ವರೆಗೂ ಕುಡಿಯುವ ನೀರಿಗೆ ಯಾವುದೇ ತೊಂದರೆಯಿಲ್ಲ. ವಿಜಯಪುರ, ಬಾಗಲಕೋಟೆ ಜತೆಗೆ ಕಲಬುರಗಿ, ಯಾದಗಿರಿ, ರಾಯಚೂರ ಜಿಲ್ಲೆಗೆ ಕುಡಿಯುವ ನೀರಿನ ಅಗತ್ಯ ಎನಿಸಿದರೆ ಆಲಮಟ್ಟಿಯಿಂದ ನಾರಾಯಣಪುರ ಜಲಾಶಯಕ್ಕೂ ನೀರು ಹರಿಸಿ, ಕುಡಿಯುವ ನೀರಿನ ಸಮಸ್ಯೆ ನೀಗಿಸಬಹುದು. ಒಟ್ಟಾರೇ ಸದ್ಯಕ್ಕೆ ಕುಡಿಯುವ ನೀರಿಗೆ ಯಾವುದೇ ತೊಂದರೆಯಿಲ್ಲ.

ಡೆಡ್ ಸ್ಟೋರೇಜ್ ನೀರಿನ ಬಳಕೆ

ಆಲಮಟ್ಟಿ ಜಲಾಶಯದ ನೀರಿನ ಮಟ್ಟ 506.87 ಮೀಟರ್‌ಗಿಂತ ಕೆಳ ಮಟ್ಟದ ನೀರನ್ನು ಡೆಡ್ ಸ್ಟೋರೇಜ್ ಎಂದು ಕರೆಯಲಾಗುತ್ತದೆ. ಕೇಂದ್ರಿಯ ಜಲ ಆಯೋಗದ ನಿರ್ದೇಶನದಂತೆ ಜಲಾಶಯದ ಸುರಕ್ಷತೆ, ಜಲಚರ ಜೀವಿಗಳು, ಹೂಳು ಸೇರಿದಂತೆ ಪ್ರತಿ ಜಲಾಶಯಕ್ಕೂ ಡೆಡ್ ಸ್ಟೋರೇಜ್ ನಿಗದಿಯಾಗಿರುತ್ತದೆ.

123.081 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 17.62 ಟಿಎಂಸಿ ಅಡಿ ನೀರು ಡೆಡ್ ಸ್ಟೋರೇಜ್ ಎಂದು ಪರಿಗಣಿಸಲಾಗಿದೆ. ಅನಿವಾರ್ಯ ವೇಳೆಯಲ್ಲಿ 2014, 2015, 2017 ಸೇರಿದಂತೆ ಐದಾರು ಬಾರಿ ಡೆಡ್ ಸ್ಟೋರೇಜ್ ನೀರನ್ನು ಬಳಸಲಾಗಿದೆ. 2017ರಲ್ಲಂತೂ ಜಲಾಶಯದ ಮಟ್ಟ 505 ಮೀಟರ್‌ಗೆ ಕುಸಿದಿತ್ತು. ಮೊದಲೆಲ್ಲ ಪ್ರತಿ ವರ್ಷವೂ ಜಲಾಶಯದ ಮಟ್ಟ ಜೂನ್ ವೇಳೆಗೆ ಡೆಡ್ ಸ್ಟೋರೇಜ್ ತಲುಪುತ್ತಿತ್ತು. ಆದರೆ, ಈ ಬಾರಿ ಡೆಡ್ ಸ್ಟೋರೇಜ್ ತಲುಪಲು ಇನ್ನೂ ಸುಮಾರು 3 ಟಿಎಂಸಿ ಅಡಿ ನೀರಿದೆ.

ಆಲಮಟ್ಟಿ ಜಲಾಶಯದ ಹಿನ್ನೀರನ್ನು ಕೃಷಿ ಬಳಕೆಗೆ ನಿಷೇಧಿಸಲಾಗಿದೆ. ಸದ್ಯಕ್ಕೆ ಕುಡಿವ ನೀರಿನ ಸಮಸ್ಯೆಯಿಲ್ಲ.  ನೀರಿನ ಮಟ್ಟವನ್ನು ಸಮರ್ಪಕವಾಗಿ ನಿರ್ವಹಿಸಿದ್ದರ ಪರಿಣಾಮ ಕಾಲುವೆ ಕೆರೆ ಭರ್ತಿಗೆ ಸಾಕಷ್ಟು ನೀರು ಹರಿಸಿದಾಗಲೂ ಜಲಾಶಯದಲ್ಲಿ ನೀರು ಇನ್ನೂ ಇದೆ.
ಎಚ್. ಸುರೇಶ, ಮುಖ್ಯ ಎಂಜಿನಿಯರ್ ಅಣೆಕಟ್ಟು ವಲಯ

ವಿಜಯಪುರಕ್ಕೂ ಸಮಸ್ಯೆಯಿಲ್ಲ

ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ವಿವಿಧ ಗ್ರಾಮ, ಪಟ್ಟಣಗಳಿಗೆ ಕುಡಿಯುವ ನೀರಿನ ಜಾಕವೆಲ್‌ಗಳು 505 ಮೀಟರ್‌ ವರೆಗೆ ಇವೆ. ವಿಜಯಪುರಕ್ಕೆ ಕುಡಿಯುವ ನೀರು ಕಳುಹಿಸುವ ಕೊಲ್ಹಾರ ಬಳಿಯ ಜಾಕವೆಲ್ ಬಳಿಯೂ ಸಾಕಷ್ಟು ನೀರಿನ ಸಂಗ್ರಹವಿದೆ. ಅಲ್ಲಿಂದಲೂ ಯಾವುದೇ ತೊಂದರೆಯಿಲ್ಲ ಎಂದು ಅಧಿಕಾರಿಗಳು ಹೇಳಿದರು.

ಹನಿ ನೀರಾವರಿಗೆ ನೀರು

ನಾರಾಯಣಪುರ ಜಲಾಶಯದ ಹಿನ್ನೀರಿನಿಂದ ಬಿತ್ತನೆಯ ಉದ್ದೇಶಕ್ಕಾಗಿ ಮರೋಳ ಹನಿ ಏತ ನೀರಾವರಿ ಯೋಜನೆಗೆ ಐದು ದಿನಗಳ ನೀರು ಹರಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ 0.08 ಟಿಎಂಸಿ ಅಡಿ ನೀರನ್ನು ಬಳಸಲು ಬೆಳಗಾವಿ ಪ್ರಾದೇಶಿಕ ಆಯುಕ್ತರು ಅನುಮತಿ ನೀಡಿದ್ದಾರೆ ಎಂದು ಕೆಬಿಜೆಎನ್ ಎಲ್ ಅಧಿಕಾರಿಗಳು ತಿಳಿಸಿದರು.

ಮಹಾರಾಷ್ಟ್ರದಲ್ಲಿ ಮಳೆ ಇಲ್ಲ

ಆಲಮಟ್ಟಿ ಜಲಾಶಯದ ನೀರಿನ ಮೂಲ ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಸುರಿಯುವ ಮಳೆ. ಅಲ್ಲಿಯೂ ಇನ್ನೂ ಮುಂಗಾರು ಮಳೆ ಆರಂಭಗೊಂಡಿಲ್ಲ. ಅಲ್ಲಿ ಮಳೆ ಆರಂಭಗೊಂಡರೆ ನೆರೆಯ ಭೀತಿ ಆವರಿಸುತ್ತದೆ. ಅದಕ್ಕಾಗಿ ಮಹಾರಾಷ್ಟ್ರದ ಸಾಂಗ್ಲಿಯ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಆಲಮಟ್ಟಿಯ ಕೆಬಿಜೆಎನ್ ಎಲ್ ಅಧಿಕಾರಿಗಳು ಮೇ 29ರಂದು ಜೂಮ್ ಮೀಟ್‌ ಮೂಲಕ ಇಡೀ ದಿನ ಸಭೆ ನಡೆಸಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ. ಜತೆಗೆ ಹೈದಾರಾಬಾದ್ ನ ಕೇಂದ್ರಿಯ ಜಲ ಆಯೋಗದ ಅಧಿಕಾರಿಗಳ ಜತೆಯೂ ಸಭೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT