ಮಂಗಳವಾರ, ಸೆಪ್ಟೆಂಬರ್ 28, 2021
20 °C
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ರಮೇಶ ದೇಸಾಯಿ

ವೃತ್ತಿ ಕೌಶಲದಿಂದ ಉದ್ಯೋಗಾವಕಾಶ: ರಮೇಶ ದೇಸಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಇಂದಿನ ಜಾಗತಿಕ ಉದ್ಯೋಗ ಮಾರುಕಟ್ಟೆಯಲ್ಲಿ ಕೇವಲ ಒಂದು ಪದವಿ ಅಥವಾ ಒಂದು ಕೋರ್ಸ್ ಮುಗಿಸಿದರೆ ಸಾಲುವುದಿಲ್ಲ. ಕಾಲಮಾನದ ಅಪೇಕ್ಷೆಯಂತೆ ವೃತ್ತಿ ಕೌಶಲ ಪರಿಣಿತಿ ಹೊಂದಿದರೆ ಸುಲಭವಾಗಿ ಉದ್ಯೋಗಾವಕಾಶ ಪಡೆಯಬಹುದಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ರಮೇಶ ದೇಸಾಯಿ ಹೇಳಿದರು.

ನಗರದ ಬಿ.ಎಲ್.ಡಿ.ಇ.ಎ ಎಸ್.ಎಸ್.ಎಂ. ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಿನಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಮ್ಮ ಜಿಲ್ಲೆಯಲ್ಲಿ ಈವರೆಗೆ ಕೌಶಲಾಧಾರಿತ ಸಿಎಂಕೆಕೆವೈ ಮತ್ತು ಪಿಎಂಕೆವಿವೈ ಯೋಜನೆಗಳಲ್ಲಿ ವಿವಿಧ ವಲಯ ಮತ್ತು ಜಾಬ್ ರೋಲ್‍ಗಳಲ್ಲಿ 4500ಕ್ಕೂ ಹೆಚ್ಚಿನ ಅಭ್ಯರ್ಥಿಗಳಿಗೆ ತರಬೇತಿ ನೀಡಿ ಉದ್ಯೋಗ ದೊರಕಿಸಿಕೊಳ್ಳಲು ಸಹಾಯ ಹಸ್ತ ಚಾಚಲಾಗಿದೆ ಎಂದರು.

ಜಗತ್ತಿನಾದ್ಯಂತ ವೈಟ್ ಕಾಲರ್ ಜಾಬ್‍ಗಿಂತಲೂ ಕೌಶಲಾಧರಿತ ಬ್ಲ್ಯೂ ಕಾಲರ್‌ ಜಾಬ್‍ಗಳು ಹೆಚ್ಚು ಸೃಷ್ಟಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಯುವಸಮೂಹ ಯಾವುದೇ ಉದ್ಯೋಗ ಸಿಕ್ಕರೂ ಕೆಲಸ ಮಾಡಲು ಸಿದ್ಧರಾಗಿ, ವೃತ್ತಿ ನೈಪುಣ್ಯತೆ ಪಡೆದುಕೊಂಡು ಮುಂದಿನ ದಿನಗಳಲ್ಲಿ ಉನ್ನತ ಉದ್ಯೋಗ ಹೊಂದಲು ಈ ವೇದಿಕೆ ನೆರವಾಗುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್,  ಜಿಲ್ಲಾ ಕೌಶಲಾಭಿವೃದ್ಧಿ ಕಚೇರಿಯು ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಯುವ ಜನರ ಆಶಾ ಕಿರಣವಾಗಿದೆ. ಈಗಾಗಲೇ ಹಲವಾರು ತರಬೇತಿ ಕೇಂದ್ರಗಳು ನೋಂದಣಿಯಾಗಿದ್ದು, ವಿವಿಧ ಜಾಬ್ ರೋಲ್‍ಗಳಲ್ಲಿ ತರಬೇತಿಗಳನ್ನು ನೀಡುತ್ತಿದ್ದಾರೆ ಎಂದರು.

ರಾಜ್ಯ ಸರ್ಕಾರವು ಟಾಟಾ ಟೆಕ್ನಾಲಜಿ ಹಾಗೂ ಇತರೆ 20 ಉದ್ಯಮ ಪಾಲುದಾರರ ಸಹಯೋಗದೊಂದಿಗೆ ಜಿಲ್ಲೆಯ 6 ಐ.ಟಿ.ಐ.ಗಳ ಉನ್ನತೀಕರಣ ಮಾಡಿ  ತಾಂತ್ರಿಕ ಚಟುವಟಿಕಾ ಕೇಂದ್ರಗಳನ್ನಾಗಿ ಪರಿವರ್ತಿಸಿದೆ ಎಂದರು. 

ಪ್ರತಿ ಕೇಂದ್ರಕ್ಕೆ ಅಂದಾಜು ₹30 ಕೋಟಿಯಂತೆ ಒಟ್ಟು ₹180 ಕೋಟಿ ಬಂಡವಾಳ ಹೂಡಿಕೆಯಾಗಿದೆ. ಈಗಾಗಲೇ ವಿಜಯಪುರ ಜಿಲ್ಲೆಯಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಪದವೀಧರರು ಸಹ ಈ ಕೇಂದ್ರದಲ್ಲಿ ತಾಂತ್ರಿಕ ತರಬೇತಿ ಪಡೆದು ಶ್ರಮವಹಿಸಿ ಕೆಲಸ ಮಾಡಿದರೆ ಹೊರ ದೇಶದಲ್ಲಿಯೂ ಸಹ ಉದ್ಯೋಗ ಪಡೆಯುವ ಸಾಧ್ಯತೆಗಳಿವೆ ಎಂದು ಹೇಳಿದರು.

ನಾನು ಪ್ರಾರಂಭದಲ್ಲಿ ಟಾಟಾ ಕಂಪನಿಯಲ್ಲಿ ₹9 ಸಾವಿರಕ್ಕೆ ಉದ್ಯೋಗ ಪ್ರಾರಂಭಿಸಿ, ಕಷ್ಟಪಟ್ಟು ಶ್ರಮವಹಿಸಿ ಕೆಲಸ ಮಾಡಿದ ಪರಿಣಾಮವಾಗಿ 2 ವರ್ಷದಲ್ಲಿ ಹೊರ ದೇಶಕ್ಕೆ ಹೋಗುವ ಅವಕಾಶ ಸಿಕ್ಕಿತು. ನೀವು ಸಹ ಸಿಕ್ಕಿರುವ ಕೆಲಸವನ್ನು ಕಡೆಗಣಿಸದೆ ಗೌರವದಿಂದ ಕಷ್ಟಪಟ್ಟು ಕೆಲಸ ಮಾಡಿ, ಉನ್ನತ ಸಾಧನೆ ಮಾಡಬಹುದು ಎಂದು ತಮ್ಮ ಜೀವನದ ಉದಾಹರಣೆ ನೀಡಿ ಉದ್ಯೋಗಾಕಾಂಕ್ಷಿಗಳನ್ನು ಹುರಿದುಂಬಿಸಿದರು.

ಬಿ.ಎಲ್.ಡಿ.ಇ.ಎ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಆರ್.ಬಿ. ಕೊಟ್ನಾಳ, ಉದ್ಯೋಗದಾತರು ಹೆಚ್ಚು ಹೆಚ್ಚು ಜನರಿಗೆ ಉದ್ಯೋಗ ಕೊಡಬೇಕು. ಅವರೇ ಮುಂದೆ ನಿಮ್ಮ ಆಸ್ತಿಯಾಗಬಹುದು ಎಂದು ಹೇಳಿದರು.

ಮೊಹಮ್ಮದ್‌ ಗೌಸ್,  ಉದ್ಯೋಗಾಕಾಂಕ್ಷಿಗಳು ನಿಮಗೆ ಸಿಕ್ಕಿರುವ ಕೆಲಸದಲ್ಲಿ ನಿಮ್ಮ ಕೌಶಲವನ್ನು ತೋರಿಸಬೇಕು ಹಾಗೂ ಕಠಿಣ ಪರಿಶ್ರಮ ವಹಿಸಿ ಉತ್ತಮ ಕೆಲಸ ನಿರ್ವಹಿಸಿದರೆ  ಮುಂದಿನ ದಿನಗಳಲ್ಲಿ ಹೆಚ್ಚಿನ ಸೌಲಭ್ಯ  ದೊರೆಯುತ್ತವೆ ಎಂದು ಹೇಳಿದರು.

ಎಸ್. ಜೆ. ಗೌಡರ,  ನೀವು ಯಾವ ಹುದ್ದೆಯನ್ನು ಆಯ್ಕೆ ಮಾಡಿಕೊಳ್ಳುತ್ತೀರಿ, ಅದೇ ಹುದ್ದೆಗೆ ಗೌರವ ಕೊಟ್ಟು ಶ್ರಮವಹಿಸಿ ಕಷ್ಟಪಟ್ಟು ಕೆಲಸ ಮಾಡಿದರೆ ಮುಂದೆ ಹೋಗಲು ಸಾಧ್ಯ ಎಂದು ಹೇಳಿದರು.

ಎಸ್. ಆರ್. ಬಿರಾದಾರ, ಸುನಂದಾ ಜಿ. ಬಾಲಪ್ಪನವರ, ದೇವೆಂದ್ರ ಧನಪಾಲ ಉಪಸ್ಥಿತರಿದ್ದರು.

****

ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದ ಈ ಕಾಲಘಟ್ಟದಲ್ಲಿ ಕೇವಲ ಜ್ಞಾನ ಆಧಾರಿತ ಉದ್ಯೋಗಗಳ ಬದಲಿಗೆ ಕೌಶಲ ಆಧಾರಿತ ಉದ್ಯೋಗಗಳ ಬೇಡಿಕೆ ಹೆಚ್ಚುತ್ತಿದೆ
ರಮೇಶ ದೇಸಾಯಿ
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.