ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲುಷಿತ ನೀರು ಸೇವನೆ: ಗ್ರಾಮಗಳಿಗೆ ಸಿಇಒ ಭೇಟಿ

ಸೂಕ್ತ ಮುಂಜಾಗ್ರತಾ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ
Published 19 ಜೂನ್ 2024, 16:07 IST
Last Updated 19 ಜೂನ್ 2024, 16:07 IST
ಅಕ್ಷರ ಗಾತ್ರ

ತಾಳಿಕೋಟೆ: ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಕಲುಷಿತ ನೀರು ಸೇವನೆಯಿಂದ ಗ್ರಾಮಸ್ಥರು ವಾಂತಿಭೇದಿಯಿಂದ ಅಸ್ತವ್ಯಸ್ಥಗೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಇ ರಿಷಿ ಆನಂದ ಅವರು, ಅಧಿಕಾರಿಗಳ ತಂಡದೊಂದಿಗೆ ಬಾಧಿತ ಗ್ರಾಮಗಳಿಗೆ ಬುಧವಾರ ಭೇಟಿ ನೀಡಿದರು.

ಆರಂಭದಲ್ಲಿ ನಾವದಗಿ ಗ್ರಾಮಕ್ಕೆ ಭೇಟಿ ನೀಡಿದ ಅವರು, ಅಲ್ಲಿರುವ ಕುಡಿಯುವ ನೀರಿನ ಮೂಲಗಳಾದ ತೆರೆದ ಬಾವಿ ಮತ್ತು ಕೈಪಂಪ್‌ಗಳ ಸ್ಥಳಗಳನ್ನು ವೀಕ್ಷಿಸಿ ಸ್ಥಳದಲ್ಲಿದ್ದ ಕೊಡಗಾನೂರ ಪಿಡಿಒ ಅನೀಲ ಕುಮಾರ ಕಿರಣಗಿ ಅವರಿಂದ ಮಾಹಿತಿ ಪಡೆದುಕೊಂಡರು. ನೀರಿನ ಮೂಲಗಳ ಸುತ್ತಲೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಯಾವ ಕಾರಣಕ್ಕೂ ಕುಡಿಯುವ ನೀರಿನ ಮೂಲದಲ್ಲಿ ಕೊಳಚೆ ನೀರು ಸೇರದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದರು.

ನಂತರ ಮಿಣಜಗಿ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿಯ ಕುಡಿಯುವ ನೀರಿನ ಕೈಪಂಪ್‌ ಮತ್ತು ಓವರ್‌ಹೆಡ್ ಟ್ಯಾಂಕ್ ವೀಕ್ಷಿಸಿದರು. ಸ್ಥಳದಲ್ಲಿದ್ದ ಪಿಡಿಒ ಭೀಮರಾಯ ಸಾಗರ ಅವರಿಗೆ ಸ್ವಚ್ಛತೆ ಕಾಪಾಡಿ, ನೀರು ಕಲುಷಿತವಾಗದಂತೆ ನೋಡಿಕೊಳ್ಳಿ, ವಾರದಲ್ಲಿ ಎರಡು ಬಾರಿ ನೀರಿನ ಪರೀಕ್ಷೆ ಮಾಡಿಸಿ ಎಂದು ಸೂಚನೆ ನೀಡಿದರು. ನಾಗರಿಕರು ಶುದ್ದೀಕರಿಸಿದ ನೀರು ಇಲ್ಲವೆ ಚೆನ್ನಾಗಿ ಕಾಯಿಸಿ, ಆರಿಸಿ ಶೋಧಿಸಿದ ನೀರನ್ನೇ ಕುಡಿಯಬೇಕು. ಮಾನ್ಸೂನ ಇರುವುದರಿಂದ ಮಳೆ ನೀರಿನ ಮೂಲಗಳಲ್ಲಿ ಸೇರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಎಚ್ಚರಿಕೆ ವಹಿಸುವಂತೆ ತಿಳಿಸಿದರು.

ಕುಡಿಯಲು ಯೋಗ್ಯ ಇಲ್ಲದ ಬಾವಿ ಮತ್ತು ಕೈಪಂಪ್‌ಗಳ ಹತ್ತಿರ ‘ಕುಡಿಯುವುದಕ್ಕೆ ಯೋಗ್ಯವಲ್ಲದ ನೀರು’ ಎಂದು ಸೂಚನಾ ಫಲಕ ಬರೆದು ಹಾಕಲು ತಿಳಿಸಿದರು. ಗ್ರಾಮದ ಸ್ವಚ್ಛತೆ ಕುರಿತು ಗ್ರಾಮ ಪಂಚಾಯಿತಿಯೊಂದಿಗೆ ಜನತೆ ಕೂಡ ಸಹಕರಿಸುವಂತೆ ಸಲಹೆ ನೀಡಿದರು.

ಇದು ಗಂಭೀರವಾದ ಸಮಸ್ಯೆ ಆಗಿಲ್ಲ. ಹೆಚ್ಚಿನ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ತಿಳಿಸಿದೆ. ಕಾಲಕಾಲಕ್ಕೆ ಕುಡಿಯುವ ನೀರಿನ ಮಾದರಿ ಪರೀಕ್ಷೆ ಮಾಡಿಸುವುದನ್ನು ಎಲ್ಲಾ ಪಿಡಿಒಗಳು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಆದೇಶ ಮಾಡಿದ್ದೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ತಾ.ಪಂ. ಇಒ ಬಿ.ಆರ್.ಬಿರಾದಾರ, ಆರ್ ಡಬ್ಲ್ಯೂ ಎಸ್ ಆರ್.ಎಸ್.ಹಿರೇಗೌಡರ, ಟಿಎಚ್ಒ ಸತೀಶ ತಿವಾರಿ, ಜಿಲ್ಲಾ ಆರೋಗ್ಯ ಇಲಾಖೆಯ ಡಾ. ಕವಿತಾ ದೊಡ್ಡಮನಿ, ಜಿ.ಪಂ. ಸಹಾಯಕ ಸಂಯೋಜನಾಧಿಕಾರಿ ಅರುಣ ಕುಮಾರ ದಳವಾಯಿ, ತಾಳಿಕೋಟೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶ್ರೀಶೈಲ ಹುಕ್ಕೇರಿ, ಕಾರಗನೂರ ಪಿಎಚ್ ಸಿ ವೈದ್ಯಾಧಿಕಾರಿ ಡಾ. ಸುನೀಲ ಹಿರೇಗೌಡರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT