ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಸೂರಿನಡಿ ನಾಗರಿಕ ಸೇವೆ ಲಭ್ಯ

ಗ್ರಾಮ ಒನ್ ಕೇಂದ್ರ ಉದ್ಘಾಟಿಸಿದ ಸಕಾಲ ಖಾತೆ ಸಚಿವ ಎಸ್. ಸುರೇಶ್ ಕುಮಾರ್
Last Updated 7 ಏಪ್ರಿಲ್ 2021, 16:43 IST
ಅಕ್ಷರ ಗಾತ್ರ

ಹೊರ್ತಿ(ವಿಜಯಪುvರ): ಗ್ರಾಮೀಣ ಪ್ರದೇಶದಲ್ಲಿ ಒಂದೇ ಸೂರಿನಡಿ ಎಲ್ಲ ಇಲಾಖೆಗಳ ಪ್ರಮುಖ ನಾಗರಿಕ ಸೇವೆಗಳನ್ನು ಸಾರ್ವಜನಿಕರಿಗೆ ನೀಡುವ ಉದ್ದೇಶದಿಂದ ಖಾಸಗಿ ಸಹಭಾಗಿತ್ವದೊಂದಿಗೆ ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಸಕಾಲ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು.

ಹೊರ್ತಿ ಗ್ರಾಮದಲ್ಲಿ ಗ್ರಾಮ ಒನ್ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ನಾಗರಿಕರು ವಿವಿಧ ಸೇವೆಗಾಗಿ ಯಾವುದೇ ಕಚೇರಿಗೆ ಅಲೆಯಬಾರದೆಂಬ ಉದ್ದೇಶದಿಂದ ಇಂತಹ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.

ರಾಜ್ಯದ ನಾಲ್ಕು ವಿಭಾಗದ ಗ್ರಾಮ ಒನ್ ಕೇಂದ್ರ ಸ್ಥಾಪನೆ ಮಾಡಲು ವಿವಿಧ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ ದಾವಣಗೆರೆ, ಚಿಕ್ಕಮಗಳೂರು, ವಿಜಯಪುರ, ಬೀದರ್ ಜಿಲ್ಲೆ ಆಯ್ಕೆ ಮಾಡಲಾಗಿದೆ ಎಂದರು.

ಗ್ರಾಮ ಒನ್ ಕೇಂದ್ರಗಳನ್ನು ಪ್ರಥಮ ಹಂತದಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ 2020 ನವೆಂಬರ್ 19ರಂದು ನೂರು ಗ್ರಾಮಗಳಲ್ಲಿ ಸ್ಥಾಪನೆ ಮಾಡಲಾಯಿತು. ಪ್ರಾರಂಭದಲ್ಲಿ 150 ಸೇವೆಗಳಿದ್ದವು ಎಂಟು ತಿಂಗಳ ಬಳಿಕ 1125 ಸೇವೆಗಳು ಪ್ರಾರಂಭ ಮಾಡಲಾಗಿದ್ದು, ಶೇ 98 ರಷ್ಟು ಸೇವೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ವಿಜಯಪುರ ಜಿಲ್ಲೆಯ ಬಬಲೇಶ್ವರ 10, ಬಸವನ ಬಾಗೇವಾಡಿ10, ಚಡಚಣ 9, ದೇವರ ಹಿಪ್ಪರಗಿ 4, ಇಂಡಿ 22, ಕೋಲಾರ 6, ಮುದ್ದೇಬಿಹಾಳ 9, ನಿಡಗುಂದಿ 6, ಸಿಂದಗಿ 19, ತಾಳಿಕೋಟೆ 10, ತಿಕೋಟಾ 10, ವಿಜಯಪುರ 10 ಸೇರಿದಂತೆ125 ಗ್ರಾಮಗಳಲ್ಲಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು.

ಇಂಡಿ ತಾಲ್ಲೂಕಿನ ಹೊರ್ತಿ ಗ್ರಾಮದಲ್ಲಿ ಗ್ರಾಮ ಒನ್ ಕೇಂದ್ರವನ್ನು ಸ್ಥಾಪನೆ ಮಾಡಿದ್ದು, ಈ ಕೇಂದ್ರದ ಸೇವೆಯಿಂದ ಹೊರ್ತಿ ಗ್ರಾಮವು ಇಡೀ ರಾಜ್ಯಕ್ಕೆ ಮಾದರಿಯಾಗುವಂತೆ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್, ಗ್ರಾಮದ ಪ್ರತಿ ಪ್ರಜೆಗೂ ಗ್ರಾಮಮಟ್ಟದಲ್ಲಿ ಸರ್ಕಾರದ ಸೇವೆಗಳು ಲಭ್ಯವಾಗಬೇಕು. ವಿಶೇಷವಾಗಿ ಬ್ಯಾಂಕಿಂಗ್ ಸೇವೆಗಳು, ಆರ್. ಟಿ. ಇ. ಸೇವೆಗಳು ಮತ್ತು ಸರ್ಕಾರದ ಇನ್ನಿತರ ಸೇವೆಗಳು ಒಂದೇ ಸೂರಿನಡಿ ಕಲ್ಪಿಸುವ ಯೋಜನೆ ಇದಾಗಿದೆ ಎಂದರು.

ಗ್ರಾಮ ಒನ್ ಕೇಂದ್ರವು ಪಿಪಿಪಿ ಮಾದರಿಯಲ್ಲಿ ರಚನೆಯಾಗಿದ್ದು, ಖಾಸಗಿ ಸಂಸ್ಥೆಯವರು ಕೇಂದ್ರಕ್ಕೆ ಬೇಕಾದ ಎಲ್ಲ ತರಹದ ಭೌತಿಕ ಮತ್ತು ಐ. ಟಿ ಮೂಲ ಸೌಕರ್ಯಗಳ ಜೊತೆಗೆ ಅಗತ್ಯವಾದ ಮಾನವ ಸಂಪನ್ಮೂಲ ಮತ್ತು ಸರ್ಕಾರ ವ್ಯವಸ್ಥೆಗಳಿಗೆ ಆದ್ಯತೆ ಮತ್ತು ತಾಂತ್ರಿಕ ಸೇವೆಯನ್ನು ಒದಗಿಸುತ್ತದೆ ಎಂದು ಅವರು ತಿಳಿಸಿದರು.

ಈ ಕೇಂದ್ರದಲ್ಲಿ ಒಟ್ಟು 67 ಇಲಾಖೆಗಳಿದ್ದು 402 ಸೇವೆಗಳಿವೆ. ಅದರಲ್ಲಿ ಪ್ರಮುಖವಾದ ಸೇವೆಗಳೆಂದರೆ ಕಂದಾಯ, ಸಾಮಾಜಿಕ ಭದ್ರತಾ ಯೋಜನೆ, ಆರೋಗ್ಯ, ಕಾರ್ಮಿಕ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸಹಕಾರ ಸಂಘಗಳ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಸೇವೆಯನ್ನು ಹೊಂದಿದೆ. ಈ ಯೋಜನೆ ಅಡಿಯಲ್ಲಿ ಮುಂದಿನ ದಿನಗಳಲ್ಲಿ ಸೇರಿಸಲಾದ ಪ್ರಮುಖ ಸೇವೆಗಳು ಮೈಕ್ರೋ ಬ್ಯಾಂಕಿಂಗ್ ಸೇವೆಗಳು, ಇ-ಸ್ಟ್ಯಾಂಪ್ ಸೇವೆ, ಬಿ.ಎಸ್.ಎನ್.ಎಲ್.ಪಾವತಿ ಸೇವೆಗಳು, ಹೆಸ್ಕಾಂ ಬಿಲ್ ಪಾವತಿ ಸೇವೆಗಳು, ಎಲ್.ಇ.ಡಿ ಬಲ್ಬ್‌ಗಳ ಮಾರಾಟ ಸೇವೆ ಹಾಗೂ ಇತರೆ ಸೇವೆ ಒಳಗೊಂಡಿದೆ ಎಂದು ಹೇಳಿದರು.

ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯ ನಾಗರಿಕರಿಗೆ ಆನ್ ಲೈನ್ ಮುಖಾಂತರ ಈ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿ ಸರ್ಕಾರದ ಸೌಲಭ್ಯಗಳು ಜನಸಾಮಾನ್ಯರಿಗೆ ಕಲ್ಪಿಸಬೇಕು. ಆನ್‍ಲೈನ್ ಅರ್ಜಿಗಳನ್ನು ಸ್ವೀಕರಿಸಲು ಹೆಚ್ಚು ಒತ್ತು ನೀಡಬೇಕು. ಸೇವಾ ಸೌಲಭ್ಯಗಳು ಅವರ ಮನೆಯ ಬಾಗಿಲಿಗೆ ತಲುಪಿಸಲು ಈ ಒಂದು ಕೇಂದ್ರವು ಬಹುಮುಖ್ಯವಾಗಿದೆ. ಇದರಿಂದ ಗ್ರಾಮೀಣ ಪ್ರದೇಶದ ಜನರಿಗೆ ಸದುಪಯೋಗವಾಗಲಿ ಎಂದು ತಿಳಿಸಿದರು.

ಅಂಗವಾಗಲಿ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಅಣ್ಣಪ್ಪ ಕಾಂಬಳೆ ಹಾಗೂ ಮೀರಾಬಾಯಿ ಕಾಂಬಳೆ ಅವರಿಗೆ ಹಿರಿಯ ನಾಗರಿಕರ ಗುರುತಿನ ಚೀಟಿ ವಿತರಣೆ ಮಾಡಲಾಯಿತು. ಆಯುಷ್ಮಾನ್ ಭಾರತ್‌ ಗುರುತಿನ ಚೀಟಿಯನ್ನು ಮಳಸಿದ್ದಪ್ಪ ಬ್ಯಾಳಿ, ಬಸಪ್ಪ ಕನ್ನೊಳ್ಳಿ, ಹಾಗೂ ಪರಶುರಾಮ ವಡ್ಡರ್ ಅವರಿಗೆ ನೀಡಲಾಯಿತು. ಕಾರ್ಮಿಕ ಇಲಾಖೆಯಿಂದ ಸೋಮಯ್ಯ, ಪರಸಪ್ಪ ಅವರಿಗೆ ಗುರುತಿನ ಚೀಟಿ ವಿತರಣೆ ಮಾಡಲಾಯಿತು.

ವಿಧಾನಪರಿಷತ್ ಸದಸ್ಯ ಅರುಣ್ ಶಹಾಪುರ, ಹೊರ್ತಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಸಲಿಂಗಪ್ಪ ಪೂಜಾರಿ, ಇಂಡಿ ಉಪವಿಭಾಗಾಧಿಕಾರಿ ರಾಹುಲ್ ಶಿಂಧೆ, ದಯಾ ಸಾಗರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT