ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತರ ಪುನರ್ವಸತಿ ಕೇಂದ್ರದ ಅಧ್ಯಯನಕ್ಕೆ ಸಮಿತಿ: ಅಶೋಕ್‌

Last Updated 26 ಆಗಸ್ಟ್ 2020, 13:45 IST
ಅಕ್ಷರ ಗಾತ್ರ

ವಿಜಯಪುರ: ರಾಜ್ಯದಲ್ಲಿ ಪ್ರವಾಹದಿಂದ ಬಾಧಿತರಾದ ಸಂತ್ರಸ್ತರಿಗೆ ಸರ್ಕಾರ ಶಾಶ್ವತ ಪುನರ್ವಸತಿ ಕಲ್ಪಿಸಿದರೂ ಸಮಸ್ಯೆ ಇನ್ನೂ ಜೀವಂತವಾಗಿದೆ. ಹೀಗಾಗಿ ಪುನರ್ವಸತಿ ಕೇಂದ್ರಗಳಿಗೆ ಜನರು ತೆರಳದಿರುವುದಕ್ಕೆ ಕಾರಣ ತಿಳಿಯಲು ಸರ್ಕಾರ ತಜ್ಞರ ಸಮಿತಿ ರಚಿಸಿ, ವರದಿ ಪಡೆಯಲು ನಿರ್ಧರಿಸಿದೆ ಎಂದು ಕಂದಾಯ ಸಚಿವ ಆರ್.ಅಶೋಕ್‌ ಹೇಳಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಪುನರ್ವಸತಿ ಕೇಂದ್ರಗಳಿಗೆ ಸಂತ್ರಸ್ತರು ತೆರಳದೇ ಇರುವ ಕುರಿತು ತಜ್ಞರ ಸಮಿತಿ ನೀಡುವ ವರದಿ ಆಧರಿಸಿ, ಹೊಸದಾಗಿ ಸ್ಥಳಾಂತರಕ್ಕೆ ಪ್ರಸ್ತಾವನೆ ಸಲ್ಲಿಸುವ ಗ್ರಾಮಗಳ ಬಾಧಿತರಿಂದ ಒಪ್ಪಿಗೆ ಸಹಿತ, ಮುಚ್ಚಳಿಕೆ ಬರೆಸಿಕೊಂಡು ಹೊಸದಾಗಿ ಗ್ರಾಮ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರವಾಹ ಸಂತ್ರಸ್ತರಿಗೆ ಕಲ್ಪಿಸಿರುವ ಪುನರ್ವಸತಿ ಕೇಂದ್ರಗಳಲ್ಲಿ ಮೂಲ ಸೌಲಭ್ಯಗಳ ಕೊರತೆ ಇದೆ ಎಂಬ ದೂರುಗಳಿವೆ. ಅಲ್ಲದೇ, ಚಿಕ್ಕ ನಿವೇಶನ, ಸಣ್ಣ ಮನೆ, ಜಾನುವಾರು ಕಟ್ಟಲು ಹಾಗೂ ಕೃಷಿ ಆಧಾರಿತ ಸೌಲಭ್ಯಕ್ಕೆ ಸ್ಥಳವಿಲ್ಲ ಎಂದು ದೂರುತ್ತಿದ್ದಾರೆ ಎಂದು ತಿಳಿಸಿದರು.

ಪ್ರವಾಹ ಬಾಧಿತ ಗ್ರಾಮಗಳನ್ನು ಸ್ಥಳಾಂತರ ಮಾಡಿದ್ದರೂ ಸಹ ಬಹಳಷ್ಟು ಸಂತ್ರಸ್ತರು ಹಳೆಯ ಮನೆಗಳಲ್ಲೇ ವಾಸ ಇದ್ದಾರೆ. ಈ ಹಿನ್ನೆಲೆಯಲ್ಲಿ ಈ ಹಿಂದಿನ ವರ್ಷ ಗ್ರಾಮ ಸ್ಥಳಾಂತರ ಪ್ರಸ್ತಾವನೆ ಸಲ್ಲಿಸಿದ್ದನ್ನು ಸರ್ಕಾರ ಕೈಗೆತ್ತಿಕೊಂಡಿಲ್ಲ ಎಂದು ಹೇಳಿದರು.

ಎನ್‍ಡಿಆರ್‌ಎಫ್‌ ಸಮಸ್ಯೆ:ಕಳೆದ ವರ್ಷದ ಪ್ರವಾಹ ನಷ್ಟ ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿಲ್ಲ. ಮಲತಾಯಿ ಧೋರಣೆ ಅನುಸರಿಸಿಲ್ಲ. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಕೇಂದ್ರದಿಂದ ರಾಜ್ಯ ಸರ್ಕಾರ ನಿರೀಕ್ಷಿತ ಪರಿಹಾರ ಪಡೆಯುವಲ್ಲಿ ಈ ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ರೂಪಿಸಿದ ಎನ್‍ಡಿಆರ್‌ಎಫ್ ನೀತಿಗಳಿಂದ ಅನ್ಯಾಯವಾಗಿದೆ ಎಂದು ಸಚಿವ ಅಶೋಕ್‌ ದೂರಿದರು.

ಕಳೆದ ವರ್ಷದ ಪ್ರವಾಹ ನಷ್ಟ ₹ 35 ಸಾವಿರ ಕೋಟಿ ನೆರವಿನ ಪ್ರಸ್ತಾವನೆಯಲ್ಲಿ ಕೇವಲ ₹ 1 ಸಾವಿರ ಕೋಟಿ ಮಾತ್ರ ಬಂದಿದ್ದು, ಇದಕ್ಕೆ ಹಿಂದಿನ ಸರ್ಕಾರದ ನೀತಿಗಳೇ ಕಾರಣ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎನ್‍ಡಿಆರ್‌ಎಫ್‍ನ ಅವೈಜ್ಞಾನಿಕ ನೀತಿಗಳನ್ನು ಸರಿಪಡಿಸಲು ಮುಂದಾಗಿದೆ ಎಂದರು.

ರಾಜ್ಯದಲ್ಲಿ ಸಂಭವಿಸಿದ ಪ್ರವಾಹ ಹಾಗೂ ಅತಿವೃಷ್ಠಿ ಹಾನಿಯ ಅಧ್ಯಯನಕ್ಕೆ ಕೇಂದ್ರ ತಂಡವನ್ನು ಕಳಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT