ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಗೆ ಕಾಂಗ್ರೆಸ್‌ ತಿಕ್ಕಾಟವೇ ಕಾರಣ

ಪೂಜಾರ ಪ್ರಚಾರ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿಕೆ
Last Updated 5 ಡಿಸೆಂಬರ್ 2021, 13:45 IST
ಅಕ್ಷರ ಗಾತ್ರ

ವಿಜಯಪುರ: ಬಾಗಲಕೋಟೆ–ವಿಜಯಪುರ ವಿಧಾನ ಪರಿಷತ್‌ ಕ್ಷೇತ್ರಕ್ಕೆ ಅವಿರೋಧ ಆಯ್ಕೆಗೆ ಅವಕಾಶ ಒದಗಿ ಬಂದಿತ್ತು. ಆದರೆ, ಕಾಂಗ್ರೆಸ್‌ ಒಳಗಿನ ತಿಕ್ಕಾಟ, ವೈಮನಸ್ಸು, ಒಳಜಗಳದಿಂದ ಈ ಚುನಾವಣೆ ನಡೆಯುವಂತಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಆಪಾದಿಸಿದರು.

ನಗರದ ಸಾಯಿ ವಿಹಾರದಲ್ಲಿ ಭಾನುವಾರ ವಿಧಾನ ಪರಿಷತ್‌ ಚುನಾವಣೆ ಅಂಗವಾಗಿ ಆಯೋಜಿಸಲಾಗಿದ್ದ ಬಿಜೆಪಿ ನಾಗಠಾಣ ಮತಕ್ಷೇತ್ರದ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯ ಮುಂದಿಟ್ಟುಕೊಂಡು ಬಿಜೆಪಿ ಪರಿಷತ್‌ ಚುನಾವಣೆ ಎದುರಿಸುತ್ತಿದೆ ಎಂದರು.

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಗ್ರಾಮ ಸ್ವರಾಜ್ಯ ಆಗಬೇಕು, ರಾಮರಾಜ್ಯ ಆಗಬೇಕು ಎಂದು ಹಿರಿಯರು ಕನಸು ಕಂಡಿದ್ದರು. ಆದರೆ, ಬಳಿಕ ಸುದೀರ್ಘ ಅವಧಿ ಆಡಳಿತ ನಡೆಸಿದ ಕಾಂಗ್ರೆಸ್‌ ಧೋರಣೆಗಳಿಂದ ಗ್ರಾಮ ಸ್ವರಾಜ್ಯವೂ ಆಗಲಿಲ್ಲ, ರಾಮರಾಜ್ಯವೂ ಆಗಲಿಲ್ಲ ಎಂದು ಹೇಳಿದರು.

ವಿಧಾನ ಪರಿಷತ್‌ ಬಿಜೆಪಿ ಅಭ್ಯರ್ಥಿ ಪಿ.ಎಚ್‌.ಪೂಜಾರ ಮಾತನಾಡಿ, ಅವಳಿ ಜಿಲ್ಲೆಯಲ್ಲಿ ಬಿಜೆಪಿ ಪ‍ರ ಅಲೆ ಎದ್ದಿದೆ. ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಮಾತನಾಡಿ, ಲೋಕಸಭೆ, ವಿಧಾನಸಭೆ ಚುನಾವಣೆಗಿಂತ ಗ್ರಾಮ ಪಂಚಾಯ್ತಿ ಚುನಾವಣೆ ನಡೆಸುವುದು ಕಷ್ಟ. ಅಂತಹ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಪ್ರತಿಯೊಬ್ಬ ಗ್ರಾಮ ಪಂಚಾಯ್ತಿ ಸದಸ್ಯರೂ ಚಾಣಕ್ಯ, ಬುದ್ದಿವಂತರಿರುತ್ತಾರೆ.ಪ್ರತಿಯೊಂದು ವೋಟ್‌ ಹೇಗೆ ಪಡೆಯಬೇಕು ಎಂಬ ಅರಿವಿರುತ್ತದೆ. ಪರಿಷತ್‌ ಚುನಾವಣೆಯಲ್ಲಿ ಬಿಜೆಪಿಗೆ ವೋಟ್‌ ಹಾಕಿಸಲು ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.‌

ಬಿಜೆಪಿ ಅಭ್ಯರ್ಥಿ ಪೂಜಾರ ಸರಳ, ಸಜ್ಜನ ರಾಜಕಾರಣಿಯಾಗಿದ್ದಾರೆ. ಜಿಲ್ಲೆಯಲ್ಲಿ ಯಾರು ದಬ್ಬಾಳಕೆ ರಾಜಕಾರಣ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಮಾಜಿ ಜಲಸಂಪನ್ಮೂಲ ಸಚಿವರಿಗೆ ಸೋಲಿನ ಭೀತಿ ಎದುರಾಗಿದೆ ಎಂದರು.

ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಪೂಜಾರ ನಮಗೆ ಹೊಸಬರಲ್ಲ. ಅವಳಿ ಜಿಲ್ಲೆಯಲ್ಲಿ ಪಕ್ಷ ಕಟ್ಟಿದ್ದಾರೆ. ಅನೇಕ ನಾಯಕರನ್ನು ಬೆಳಸಿದ್ದಾರೆ. ಇದೀಗ ಅವರನ್ನು ಮೇಲ್ಮನೆಗೆ ಆರಿಸಿ ಕಳುಹಿಸಬೇಕು ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಎಸ್‌.ಪಾಟೀಲ ಕೂಚಬಾಳ ಮಾತನಾಡಿ, ತನ್ನದೇ ಆದ ಪಾವಿತ್ರ್ಯ ಇರುವ ವಿಧಾನ ಪರಿಷತ್‌ಗೆ ಸಜ್ಜನ ರಾಜಕಾರಣಿ ಪಿ.ಎಚ್.ಪೂಜಾರ ಆಯ್ಕೆಯಾಗಬೇಕು. ವಿಧಾನ ಪರಿಷತ್‌ ಧನವಂತರ ಪರಿಷತ್‌ ಆಗಬಾರದು. ಇದಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.

ಮಾಜಿ ಸಚಿವ ಅಪ್ಪು ಪಟ್ಟಣ ಶೆಟ್ಟಿ ಮಾತನಾಡಿ, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಗೌರವಧನ ಹೆಚ್ಚಳ ಸೇರಿದಂತೆ ಇತರೆ ಸೌಲಭ್ಯಗಳು ದೊರಕಬೇಕು ಎಂದಾದರೆ ಆಡಳಿತರೂಢ ಪಕ್ಷದ ಅಭ್ಯರ್ಥಿ ಪಿ.ಎಚ್‌.ಪೂಜಾರ ಗೆಲುವು ಸಾಧಿಸಬೇಕು. ಆಗ ಮಾತ್ರ ಸೌಲಭ್ಯ ದೊರೆಯಲು ಸಾಧ್ಯ ಎಂದರು.

ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ ಮಾತನಾಡಿ, ಈ ಚುನಾವಣೆಯಲ್ಲಿ ಅವಳಿ ಜಿಲ್ಲೆಯ ಭವಿಷ್ಯವೂ ಇದೆ. ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ ಜಾರಿಯಾಗಲು ಸರ್ಕಾರ ಕ್ರಮಕೈಗೊಳ್ಳಲಿದೆ. ಇದರಿಂದ ವಿಜಯಪುರ ಜಿಲ್ಲೆಯ ಬರದ ಹಣೆಪಟ್ಟಿ ಕಳಚಲು ಸಾಧ್ಯ ಎಂದು ಹೇಳಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ನಾರಾಯಣಸಾ ಬಾಂಡಗೆ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ಮುಖಂಡರಾದ ಚಂದ್ರಶೇಖರ ಕವಟಗಿ, ನವೀನ ಅರಕೇರಿ, ಉಮೇಶ ಕೋಳ್ಕೂರ, ರಾಜುಗೌಡ ಪಾಟೀಲ, ಸುರೇಶ ಬಿರಾದಾರ, ಪ್ರಕಾಶ ಅಕ್ಕಲಕೋಟ, ವಿವೇಕಾನಂದ ಡಬ್ಬಿ, ಗುರುಲಿಂಗಪ್ಪ ಅಂಗಡಿ, ಬಸವರಾ ಬಿರಾದಾರ ಇದ್ದರು.

***

ಇತರೆ ಅಭ್ಯರ್ಥಿಗಳು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿಗೆ ಸುಳ್ಳು ಭರವಸೆ ನೀಡುತ್ತಿದ್ದಾರೆ. ಭರವಸೆ ಈಡೇರಿಸುವ ಶಕ್ತಿ ಇರುವುದು ಆಡಳಿತರೂಢ ಪಕ್ಷದ ಅಭ್ಯರ್ಥಿಯಾದ ನನಗೆ ಮಾತ್ರ

–ಪಿ.ಎಚ್‌.ಪೂಜಾರ,

ಬಿಜೆಪಿ ಅಭ್ಯರ್ಥಿ,ವಿಧಾನ ಪರಿಷತ್‌

****

ಬಿಜೆಪಿ ಅಭ್ಯರ್ಥಿ ಪಿ.ಎಚ್‌.ಪೂಜಾರ ಈಗಾಗಲೇ ಗೆದ್ದಾಗಿದೆ. ಕನಿಷ್ಠ ಐದು ಸಾವಿರ ಮೊದಲ ಪ್ರಾಶಸ್ತ್ಯದ ವೋಟುಗಳಿಂದ ಅವರು ಜಯಗಳಿಸುವುದು ನಿಶ್ಚಿತ

–ಎ.ಎಸ್‌.ಪಾಟೀಲ ನಡಹಳ್ಳಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT