ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ ಲೋಕಸಭಾ ಕ್ಷೇತ್ರ | ‘ಮಂಗಳ’ ಯಾರಿಗೆ; ಉತ್ತರ ನಾಳೆಗೆ

ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣ ಗಣನೆ
Published 3 ಜೂನ್ 2024, 6:15 IST
Last Updated 3 ಜೂನ್ 2024, 6:15 IST
ಅಕ್ಷರ ಗಾತ್ರ

ವಿಜಯಪುರ: ಲೋಕಸಭೆ ಚುನಾವಣೆಯ ಮತ ಎಣಿಕೆ ಜೂನ್‌ 4ರಂದು ಮಂಗಳವಾರ ನಡೆಯಲಿದ್ದು, ಗೆಲುವು ಯಾರ ಪಾಲಾಗಲಿದೆ ಎಂಬ ಉತ್ತರದ ನಿರೀಕ್ಷೆಗೆ ಕ್ಷಣ ಗಣನೆ ಆರಂಭವಾಗಿದೆ.

ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ನಡೆದ ಚುನಾವಣೆಯಲ್ಲಿ ಶೇ 66.66ರಷ್ಟು ಮತದಾನವಾಗಿತ್ತು. ಸತತ 27 ದಿನಗಳ ಕಾಯುವಿಕೆಯ ಬಳಿಕ ಇದೀಗ ಫಲಿತಾಂಶಕ್ಕೆ ಕೇವಲ ಒಂದು ದಿನ ಬಾಕಿ ಉಳಿದಿದೆ.

ಕಾಂಗ್ರೆಸ್‌ ಅಭ್ಯರ್ಥಿ ಪ್ರೊ.ರಾಜು ಆಲಗೂರ, ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಸೇರಿದಂತೆ ಕಣದಲ್ಲಿ ಒಟ್ಟು ಎಂಟು ಅಭ್ಯರ್ಥಿಗಳಿದ್ದು, ಜಯ ಯಾರ ಪಾಲಾಗಲಿದೆ ಎಂಬ ಕುತೂಹಲದ ಪ್ರಶ್ನೆಗೆ ನಾಳೆ(ಜೂನ್‌ 4) ಉತ್ತರ ಲಭಿಸಲಿದೆ.

ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ನಡೆದಿದೆಯಾದರೂ ಗೆಲುವು ಯಾರದ್ದಾಗಲಿದೆ ಎಂಬ ಪ್ರಶ್ನೆಗೆ ಉತ್ತರ ಸರಳವಾಗಿಲ್ಲ. ಯಾರೇ ಗೆದ್ದರೂ ಅಂತರ ಬಹಳ ಕಡಿಮೆ ಇರಲಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆದಿದೆ. 

ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರು ವಿಜಯಪುರ ಕ್ಷೇತ್ರದಿಂದ ನಾಲ್ಕನೇ ಬಾರಿ ಲೋಕಸಭೆ ಪ್ರವೇಶಿಸಲು ಶಕ್ತಿ ಮೀರಿ ಪ್ರಯತ್ನ ನಡೆಸಿದ್ದಾರೆ. ಇದು ನನ್ನ ಕೊನೆಯ ಚುನಾವಣೆ ಎಂಬ ಅನುಕಂಪದ ಆಧಾರದ ಮೇಲೆ ಹಾಗೂ ಮೋದಿ ಹವಾದಲ್ಲಿ ಜಿಲ್ಲೆಯ ಮತದಾರರ ಆಶೀರ್ವಾದಯಾಚಿಸಿದ್ದಾರೆ. ಬಹಿರಂಗ ಪ್ರಚಾರಕ್ಕೆ ಹೆಚ್ಚು ಒತ್ತು ನೀಡದೇ ಸದ್ದುಗದ್ದಲ ಇಲ್ಲದೇ ಮತದಾರರ ಮನೆ ತಲುಪುವ ಯತ್ನ ನಡೆಸಿದ್ದಾರೆ. ಮೋದಿ ಆಡಳಿತವು ಬಿಜೆಪಿ ಗೆಲುವಿಗೆ ಸಹಕಾರಿಯಾಗಲಿದೆ ಎಂಬ ಲೆಕ್ಕಾಚಾರದಲ್ಲಿ ಜಿಗಜಿಣಗಿ ಇದ್ದಾರೆ.

ಈ ಬಾರಿ ವಿಜಯಪುರದಲ್ಲಿ ಗೆಲುವಿನ ಬಾವುಟ ಹಾರಿಸಲೇ ಬೇಕು ಎಂಬ ಪ್ರಯತ್ನ ಕಾಂಗ್ರೆಸ್‌ ನಡೆಸಿದೆ. ಸಚಿವರು, ಶಾಸಕರು, ಮಾಜಿ ಶಾಸಕರು, ಮುಖಂಡರು, ಕಾರ್ಯಕರ್ತರು ಒಟ್ಟುಗೂಡಿ ಮತದಾರರನ್ನು ಒಲಿಸಿಕೊಳ್ಳಲು ಶಕ್ತಿ ಮೀರಿ ಪ್ರಯತ್ನ ನಡೆಸಿದ್ದಾರೆ. ಅಲ್ಲದೇ, ರಾಜ್ಯ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಹಾಗೂ ‘ಇಂಡಿಯಾ’ ಒಕ್ಕೂಟ ನೀಡಿರುವ ಭರವಸೆಗಳು ಕೈಹಿಡಿಯಲಿವೆ ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ಇದೆ.

ಎರಡು ಪಕ್ಷಗಳು ಗೆಲುವು ನಮ್ಮದೇ ಎಂಬ ನಿರೀಕ್ಷೆಯಲ್ಲಿವೆ. ಆದರೆ, ಮತದಾರ ಯಾರ ‍ಪರ ತಮ್ಮ ಹಕ್ಕು ಚಲಾಯಿಸಿದ್ದಾನೆ ಎಂಬುದು ಮಂಗಳವಾರ ಬಯಲಾಗಲಿದೆ.

ಪ್ರೊ.ರಾಜು ಆಲಗೂರ
ಪ್ರೊ.ರಾಜು ಆಲಗೂರ

Highlights - ಎಂಟು ಅಭ್ಯರ್ಥಿಗಳು ಕಣದಲ್ಲಿ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌, ಬಿಜೆಪಿ ನಡುವೆ ನೇರ ಪೈಪೋಟಿ ಮೋದಿ ಆಡಳಿತ ಬಿಜೆಪಿ ಗೆಲುವಿಗೆ ಸಹಕಾರವಾಗಲಿದೆ ಎಂಬ ಲೆಕ್ಕಾಚಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT