ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಗೆದ್ದವರ ಕಥೆಗಳು | ಕೊರೊನಾ‌ ಬರುವ ನಿರೀಕ್ಷೆ ಮೊದಲೇ ಇತ್ತು!

Last Updated 28 ಜುಲೈ 2020, 11:16 IST
ಅಕ್ಷರ ಗಾತ್ರ

ನಿಡಗುಂದಿ: ‘ಕೊರೊನಾ ವಾರಿಯರ್ಸ್‌ ಆಗಿದ್ದ ನಾನು ತಾಲ್ಲೂಕಿಗೆ ಬಂದ ಸಹಸ್ರಾರು ವಲಸೆ ಕಾರ್ಮಿಕರ ಸ್ಕ್ರೀನಿಂಗ್ ಪರೀಕ್ಷೆ, ಗಂಟಲು ದ್ರವ ಸಂಗ್ರಹದಂತಹ ಕಾರ್ಯದಲ್ಲಿ ತೊಡಗಿದ್ದೆ ನನಗೂ ಕೊರೊನಾ ಬರುತ್ತದೆ ಎಂಬ ಸಂಶಯ ಮೊದಲೇ ಇತ್ತು’ ಎನ್ನುತ್ತಾರೆ ತಾಲ್ಲೂಕಿನ ಅಂಗಡಗೇರಿ ಗ್ರಾಮದ ಹಿರಿಯ ಆರೋಗ್ಯ ಸಹಾಯಕ ಅಣ್ಣಪ್ಪ ಈರಪ್ಪ ಬಿದ್ನಾಳ.

‘ಮಾರ್ಚ್ 15ರಿಂದಲೇ ಹಗಲು ರಾತ್ರಿ ಈ ಕೆಲಸ ನಿರ್ವಹಿಸುತ್ತಿದ್ದೆ. ಎಷ್ಟೋ ದಿನಗಳ ಕಾಲ ಮನೆಯವರ ಮುಖವನ್ನೆ ನೋಡಿರಲಿಲ್ಲ. ಆಸ್ಪತ್ರೆಯ ಎಲ್ಲ ಸಿಬ್ಬಂದಿಯ ಗಂಟಲು ದ್ರವ ಪರೀಕ್ಷೆ ನಡೆಸಿದ್ದರಿಂದ ನಾನು ಸೇರಿದಂತೆ ಐವರು ಸಿಬ್ಬಂದಿಗೆ ಕೋವಿಡ್‌ ದೃಢಪಟ್ಟಿತ್ತು’ ಎನ್ನುತ್ತಾರೆ ಅವರು.

‘ಕಳೆದ ನಾಲ್ಕು ತಿಂಗಳಿಂದ ಇದೇ ಕೆಲಸ ನಿರ್ವಹಿಸಿದ್ದರಿಂದ ಯಾವುದೇ ಹೆದರಿಕೆಯಾಗಲಿಲ್ಲ. ರೋಗದ ಲಕ್ಷಣಗಳು ಇಲ್ಲದ್ದರಿಂದ ಬಸವನಬಾಗೇವಾಡಿಯ ಕೋವಿಡ್ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆದೆ’ ಎಂದು ಅವರು ಹೇಳಿದರು.

‘ನಾನೂ ಆಸ್ಪತ್ರೆಯ ಸಿಬ್ಬಂದಿ ಆಗಿದ್ದರಿಂದ ಚೆನ್ನಾಗಿ ನೋಡಿಕೊಂಡರು. ಆಸ್ಪತ್ರೆಯಲ್ಲಿಯೇ ವ್ಯಾಯಾಮ, ಯೋಗ, ಪ್ರಾಣಾಯಾಮವನ್ನು ಸ್ವಲ್ಪ ಪ್ರಮಾಣದಲ್ಲಿ ನಿತ್ಯವೂ ಮಾಡಿದೆ. ಯಾವುದೇ ಲಕ್ಷಣಗಳಿಲ್ಲದರಿಂದ ಚಿಕಿತ್ಸೆ ಬಗ್ಗೆ ತಲೆ ಕೆಡೆಸಿಕೊಳ್ಳಲಿಲ್ಲ. ಮಾನಸಿಕ ಧೈರ್ಯ ಹೆಚ್ಚಿತ್ತು. ಶೀತ, ಕೆಮ್ಮು ಕೂಡಾ ನನಗೆ ಕಾಣಿಸಿಕೊಳ್ಳಲಿಲ್ಲ’ ಎಂದರು.

‘ನನ್ನ ಪತ್ನಿ, ಮಗುವಿನ ಪರೀಕ್ಷೆ ಮಾಡಲಾಗಿದ್ದು, ನೆಗಟಿವ್ ಬಂದಿದೆ. ಸದ್ಯ ಅಂಗಡಗೇರಿಯ ಮನೆಯಲ್ಲಿಯೇ ಹೋಂ ಕ್ವಾರಂಟೈನ್ ಆಗಿದ್ದೇನೆ. ಜನ ಹಾಗೂ ಸಮಾಜ ನನ್ನನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಇದು ತಪ್ಪು. ಇದು ಒಂದು ಸಾಮಾನ್ಯ ರೋಗ, ಜನ ಏಕೆ ತಪ್ಪು ತಿಳಿಯುತ್ತಿದ್ದಾರೆ? ಎಂಬುದೇ ಅರ್ಥವಾಗುತ್ತಿಲ್ಲ’ ಎಂದು ಹೇಳಿದರು.

‌‘ಕೋವಿಡ್ ಬಂದ ಕೂಡಲೇ ಕುಟುಂಬ ಸದಸ್ಯರು, ಮಿತ್ರರನೇಕರು ಆತಂಕ ವ್ಯಕ್ತಪಡಿಸಿದರು. ಆದರೆ ನಾನು ‌ಆತಂಕ, ಭಯ ಪಡದೇ ರೋಗವನ್ನು ಎದುರಿಸುತ್ತೇನೆ ಎಂಬ ಛಲ ಇರಬೇಕು. ಕೊರೊನಾ ಸೋಂಕಿತರನ್ನು ಅವಮಾನಿಸಬೇಡಿ, ಕೊರೊನಾ ವಾರಿಯರ್ಸ್‌ ಆಗಿ ದುಡಿಯುತ್ತಿರುವ ನಮ್ಮನ್ನು ಗೌರವದಿಂದ ಕಾಣಿ’ ಎಂದು ಮನವಿ ಮಾಡಿದರು.

‘ಜನರ ಆರೋಗ್ಯಕ್ಕಾಗಿ ರಜೆಯಿಲ್ಲದೇ ಹಗಲು ರಾತ್ರಿ ನಾಲ್ಕು ತಿಂಗಳು ದುಡಿದಿದ್ದೇವೆ, ಈಗ ಸಮಾಜ‌ ನಮ್ಮನ್ನು ಸಂಶಯ ದೃಷ್ಟಿಯಿಂದ ನೋಡುವ ಪ್ರವೃತ್ತಿ ಕಡಿಮೆಯಾಗಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT