ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಕೆಪಿ 3ನೇ ಹಂತ ರಾಷ್ಟ್ರೀಕರಣಕ್ಕೆ ಒತ್ತು

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್ ಹೇಳಿಕೆ
Last Updated 10 ಅಕ್ಟೋಬರ್ 2020, 12:10 IST
ಅಕ್ಷರ ಗಾತ್ರ

ಆಲಮಟ್ಟಿ: ‘ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಹಂತ-3 ಅನ್ನು ರಾಷ್ಟ್ರೀಕರಣ ಮಾಡಬೇಕೆಂಬ ಬೇಡಿಕೆ ರಾಜ್ಯದ್ದಾಗಿದೆ. ಈ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಸದಾನಂದಗೌಡ ನೇತೃತ್ವದಲ್ಲಿ ಕೇಂದ್ರದ ಜಲಸಂಪನ್ಮೂಲ ಸಚಿವರ ಮೇಲೆ ಒತ್ತಡ ಹೇರಲಾಗುವುದು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್‌ ಕಟೀಲ್ ಹೇಳಿದರು.

ಆಲಮಟ್ಟಿಯ ಮಂಜಪ್ಪ ಹರ್ಡೇರಕ ಸ್ಮಾರಕ ಭವನದಲ್ಲಿ ಶುಕ್ರವಾರ ವಿಜಯಪುರ ಜಿಲ್ಲಾ ಕಾರ್ಯಕಾರಣಿ ಸಭೆಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಮೂರನೇ ಹಂತದ ವಿಸ್ತೃತ ಯೋಜನಾ ವರದಿಯನ್ನು ಕೇಂದ್ರಕ್ಕೆ ಕಳುಹಿಸಿ ಅಗತ್ಯ ಅನುದಾನದ ಬಗ್ಗೆ ಜಿಲ್ಲಾ ಕೋರ್ ಕಮಿಟಿ ಸಭೆಯಲ್ಲಿಯೂ ಚರ್ಚಿಸಲಾಗಿದೆ. ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಯುಕೆಪಿ ಮೂರನೇ ಹಂತಕ್ಕೆ ₹17,203 ಕೋಟಿ ಮಂಜೂರಾತಿ ದೊರೆತಿತ್ತು. ಬಳಿಕ ಐದು ವರ್ಷ ಕಾಂಗ್ರೆಸ್ ಆಡಳಿತ ಬಂದಾಗ ಯೋಜನೆ ಮೂಲೆಗುಂಪಾಯಿತು. ಸದ್ಯ ಬಿಜೆಪಿ ಅಧಿಕಾರದಲ್ಲಿದ್ದು, ಯೋಜನೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು’ ಎಂದರು.

‘ತೆಲಂಗಾಣ ಮತ್ತು ಆಂಧ್ರಪ್ರದೇಶ ನಡುವಿನ ಕೃಷ್ಣಾ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ. ಇದು ನ್ಯಾಯಾಲಯದಲ್ಲಿ ಇರುವುದರಿಂದ ಹೆಚ್ಚು ಪ್ರತಿಕ್ರಿಯಿಸುವುದಿಲ್ಲ’ ಎಂದು ಹೇಳಿದರು.

‘ಎರಡು ವಿಧಾನಸಭೆ ಹಾಗೂ 4 ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ. ನರೇಂದ್ರ ಮೋದಿ ಹಾಗೂ ಯಡಿಯೂರಪ್ಪ ಅವರ ಆಡಳಿತ ವೈಖರಿಯಿಂದ ಗೆಲುವು ಸುಲಭವಾಗಲಿದೆ’ ಎಂದರು.

ಚುನಾವಣೆ ಸಿದ್ಧತೆ:‘ಮುಂಬರುವ ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಬೇಕೆಂಬ ಹಿನ್ನೆಲೆಯಲ್ಲಿ ಸಂಘಟನೆಗಾಗಿ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ನಡೆಸಲಾಗುತ್ತಿದೆ. ಮತದಾರ ಪಟ್ಟಿಯ ಪ್ರತಿ ಪುಟಕ್ಕೆ ಪೇಜ್ ಪ್ರಮುಖರು, ಪ್ರತಿ ಬೂತ್‌ಗೆ ಐವರಂತೆ ‘ಪಂಚರತ್ನ’ರನ್ನು ನೇಮಿಸಿ ಕೆಳಮಟ್ಟದಿಂದ ಚುನಾವಣೆಗೆ ಸಿದ್ಧತೆ ಆರಂಭಿಸುತ್ತಿದ್ದೇವೆ’ ಎಂದರು.

ಯತ್ನಾಳ, ಜಿಗಜಿಣಗಿ ಗೈರು:ಕೋರ್ ಕಮಿಟಿ ಹಾಗೂ ಜಿಲ್ಲಾ ಮಟ್ಟದ ಕಾರ್ಯಕಾರಿಣಿ ಸಭೆಗೆ ಶಾಸಕರಾದ ಬಸನಗೌಡ ಪಾಟೀಲ (ಯತ್ನಾಳ), ಸೋಮನಗೌಡ ಪಾಟೀಲ (ಸಾಸನೂರ) ಹಾಗೂ ಸಂಸದ ರಮೇಶ ಜಿಗಜಿಣಗಿ ಗೈರು ಎದ್ದು ಕಾಣುತ್ತಿತ್ತು.

ಶಾಸಕ ಎ.ಎಸ್. ಪಾಟೀಲ ನಡಹಳ್ಳಿ, ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪುರ, ಎಸ್.ಕೆ. ಬೆಳ್ಳುಬ್ಬಿ, ರಮೇಶ ಭೂಸನೂರ, ಅಪ್ಪು ಪಟ್ಟಣಶೆಟ್ಟಿ, ಪ್ರಭುಗೌಡ ಪಾಟೀಲ, ವಿಜುಗೌಡ ಪಾಟೀಲ ಇದ್ದರು.

ಜಿಲ್ಲಾ ಮಟ್ಟದ ಕಾರ್ಯಕಾರಣಿ ಸಭೆಯಲ್ಲಿ ನಿರ್ಮಲಕುಮಾರ ಸುರಾನಾ, ಅರುಣಕುಮಾರ, ಆರ್.ಎಸ್. ಪಾಟೀಲ (ಕೂಚಬಾಳ) ಭಾಗವಹಿಸಿದ್ದರು. 70 ಮಂದಿ ಪದಾಧಿಕಾರಿಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಕಾರ್ಯಕಾರಿಣಿ ಸಮಿತಿಗೂ ಮುನ್ನ ಸೀತಮ್ಮನಗುಡ್ಡದ ಕೆಎಸ್‌ಟಿಡಿಸಿ ಪ್ರವಾಸಿ ಮಂದಿರದಲ್ಲಿ ವಿಜಯಪುರ ಜಿಲ್ಲಾ ಕೋರ್ ಕಮಿಟಿ ಸಭೆ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT