ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರದ ಗೋಳಗುಮ್ಮಟದ ಆವರಣ: ಪ್ರವಾಸಿಗರಿಗೆ ಮೂಲ ಸೌಕರ್ಯ ಕಲ್ಪಿಸುವಿಕೆ

ಜಗದ್ವಿಖ್ಯಾತ ಗುಮ್ಮಟದ ಆವರಣದಲ್ಲಿ ವಿವಿಧ ಕಾಮಗಾರಿ
Last Updated 19 ಮೇ 2019, 19:33 IST
ಅಕ್ಷರ ಗಾತ್ರ

ವಿಜಯಪುರ:ಐತಿಹಾಸಿಕ, ಜಗದ್ವಿಖ್ಯಾತ ವಿಜಯಪುರದ ಗೋಳಗುಮ್ಮಟ ಸ್ಮಾರಕದ ಆವರಣದಲ್ಲಿ ಪ್ರವಾಸಿಗರಿಗೆ ಮೂಲ ಸೌಕರ್ಯ ಕಲ್ಪಿಸುವಿಕೆಯ ವಿವಿಧ ಕಾಮಗಾರಿ ಚುರುಕಿನಿಂದ ನಡೆದಿವೆ.

ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಸ್ಮಾರಕಗಳ ಆವರಣದಲ್ಲಿ ಮೂಲ ಸೌಕರ್ಯ ಒದಗಿಸಲು ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆ ಮುಂದಾಗಿದ್ದು, ಗೋಳಗುಮ್ಮಟದ ಆವರಣದಲ್ಲೂ ವಿವಿಧ ಕಾಮಗಾರಿ ಕೈಗೆತ್ತಿಕೊಂಡಿದೆ.

ಗೋಳಗುಮ್ಮಟ ವೀಕ್ಷಿಸುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಇದಕ್ಕೆ ಪೂರಕವಾಗಿ ಸ್ಮಾರಕದ ಆವರಣದಲ್ಲಿ ಅತ್ಯಾಧುನಿಕ ಮೂಲ ಸೌಕರ್ಯ ಕಲ್ಪಿಸಲು ಹಲವು ಹೊಸ ಕಾಮಗಾರಿ ನಡೆದಿವೆ.

ಗೋಳಗುಮ್ಮಟ ‘ಆದರ್ಶ ಸ್ಮಾರಕ’ ಎಂದು ಘೋಷಣೆಯಾಗಿದ್ದು, ಇದಕ್ಕೆ ತಕ್ಕಂತೆ ಸ್ಮಾರಕದ ಆವರಣದಲ್ಲಿ ಹಲವು ಮೂಲ ಸೌಕರ್ಯ ಒದಗಿಸಲಾಗುತ್ತಿದೆ. ಈ ಹಿಂದಿದ್ದ ವಾಹನ ನಿಲ್ದಾಣವನ್ನು, ಇದೀಗ ಮತ್ತಷ್ಟು ವಿಸ್ತರಿಸಿದ್ದು, ಆಧುನಿಕ ಶೈಲಿಯಲ್ಲಿ ನಿರ್ಮಿಸಲಾಗುತ್ತಿದೆ.

ಸ್ಮಾರಕದ ಆವರಣ ಪ್ರವೇಶಿಸುತ್ತಿದ್ದಂತೆ ಎಡ ಭಾಗದಲ್ಲಿ ನೂತನ ವಾಹನ ನಿಲ್ದಾಣ ನಿರ್ಮಾಣಗೊಳ್ಳುತ್ತಿದೆ. ಈ ಹಿಂದೆ 100 ಕಾರು, ದ್ವಿಚಕ್ರ ವಾಹನ, 8 ಬಸ್‌ ನಿಲುಗಡೆಗೆ ಮಾತ್ರ ಸ್ಥಳಾವಕಾಶವಿತ್ತು. ಇದೀಗ ನಿರ್ಮಾಣಗೊಳ್ಳುತ್ತಿರುವ ನೂತನ ವಾಹನ ನಿಲ್ದಾಣದಲ್ಲಿ 50 ಬಸ್‌, 100ಕ್ಕೂ ಹೆಚ್ಚು ಕಾರು, ಇಷ್ಟೇ ಸಂಖ್ಯೆಯ ಬೈಕ್‌ಗಳ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಲಾಗುತ್ತಿದೆ ಎಂದು ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆಯ ಸ್ಮಾರಕ ವಿಭಾಗದ ಅಧಿಕಾರಿ ಮೌನೇಶ್ವರ ಬಿ.ಕುರಬತ್ತಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಬಲ ಭಾಗದಲ್ಲಿ ಟಿಕೆಟ್‌ ಕೌಂಟರ್‌, ಪ್ರವಾಸಿಗರ ಲಗೇಜ್‌ ಕಾಯ್ದಿರಿಸುವ ಕೊಠಡಿ ನಿರ್ಮಾಣಗೊಳ್ಳುತ್ತಿದೆ. ಇದರ ಹಿಂಭಾಗದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಶೌಚಾಲಯ, ಸ್ನಾನಗೃಹ ನಿರ್ಮಿಸಲಾಗುತ್ತಿದೆ. ಉಳಿದಂತೆ ಅಂಗವಿಕಲರ ಬಳಕೆಗಾಗಿ ವಿಶೇಷ ಸೌಲಭ್ಯಗಳನ್ನೊಳಗೊಂಡ ಎರಡು ಶೌಚಾಲಯ ನಿರ್ಮಾಣಗೊಳ್ಳುತ್ತಿವೆ.

ಗೋಳಗುಮ್ಮಟದ ಆವರಣದಲ್ಲಿ ಈ ಹಿಂದಿದ್ದ ಸ್ಥಳದಲ್ಲೇ ಇದೀಗ ಹೊಸದಾಗಿ ಶುದ್ಧ ಕುಡಿಯುವ ನೀರಿನ ನಾಲ್ಕು ಘಟಕಗಳನ್ನು ನಿರ್ಮಿಸಲಾಗುತ್ತಿದ್ದು, ಮುಂಬರುವ ಅಕ್ಟೋಬರ್‌ನೊಳಗೆ ಈ ಎಲ್ಲ ಕಾಮಗಾರಿ ಸಂಪೂರ್ಣಗೊಳ್ಳಲಿವೆ ಎಂದು ಅವರು ಹೇಳಿದರು.

ವಾಹನ ನಿಲ್ದಾಣದ ಕಾಮಗಾರಿ ಒಂದು ತಿಂಗಳೊಳಗೆ ಪೂರ್ಣಗೊಳ್ಳಲಿದೆ. ಈಗಾಗಲೇ ಅಂತಿಮ ಹಂತದ ಕಾಮಗಾರಿ ನಡೆದಿದ್ದು, ಕ್ಯೂರಿಂಗ್ ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ವ್ಯಾಪ್ಕೋಸ್‌ ಸಂಸ್ಥೆ ಕಾಮಗಾರಿಯ ನಿರ್ಮಾಣದ ಹೊಣೆ ಹೊತ್ತಿದೆ ಎಂದು ಮೌನೇಶ್ವರ ತಿಳಿಸಿದರು.

ವಾಹನ ನಿಲುಗಡೆಯ ಕಿರಿಕಿರಿ

ವಾಹನ ನಿಲುಗಡೆಗಾಗಿ ಗೋಳಗುಮ್ಮಟ ಸ್ಮಾರಕದ ಆವರಣದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಇದು ವಾಹನ ನಿಲ್ದಾಣದ ಉಸ್ತುವಾರಿ ಹಾಗೂ ವಾಹನಗಳಿಂದ ನಿಲುಗಡೆ ಶುಲ್ಕ ವಸೂಲಿ ಮಾಡುವ ಗುತ್ತಿಗೆದಾರರ ಕೆಲಸಗಾರರು ಹಾಗೂ ವಾಹನ ಚಾಲಕರಿಗೂ ಕಿರಿಕಿರಿ ಸೃಷ್ಟಿಸಿದೆ.

ನೂತನ ವಾಹನ ನಿಲ್ದಾಣ ಕಾಮಗಾರಿ ಆರಂಭಕ್ಕೂ ಮುನ್ನವೇ ಲಭ್ಯವಿದ್ದ ಜಾಗದಲ್ಲೇ ವಾಹನ ನಿಲುಗಡೆ ನಡೆದಿತ್ತು. ಬೇರೆಲ್ಲೂ ಅವಕಾಶವಿರಲಿಲ್ಲ. ಇದೀಗ ಪರ್ಯಾಯ ವ್ಯವಸ್ಥೆಗಾಗಿ ಸ್ಮಾರಕದ ಸನಿಹ ಅವಕಾಶ ನೀಡಿರುವುದು ಹಲವು ಸಮಸ್ಯೆ ಸೃಷ್ಟಿಸಿದೆ.

ಬಹುತೇಕ ಪ್ರಯಾಣಿಕರು ನೆರಳಿಗಾಗಿ ತಮ್ಮ ವಾಹನಗಳನ್ನು ಉದ್ಯಾನದೊಳಗೆ ನುಗ್ಗಿಸಿ, ನಿಲ್ಲಿಸಲು ಯತ್ನಿಸುವುದು ಮಾಮೂಲಿಯ ಚಿತ್ರಣವಾಗಿದೆ. ಈ ಸಂದರ್ಭ ತಕರಾರು ಎತ್ತುವ ವಾಹನ ನಿಲುಗಡೆ ಶುಲ್ಕ ವಸೂಲಿ ಗುತ್ತಿಗೆದಾರರ ಹುಡುಗರ ಜತೆ ವಾಹನ ಮಾಲೀಕರು ಜಟಾಪಟಿ ನಡೆಸುವುದು ಸಹಜವಾಗಿದೆ. ಭಾನುವಾರವೂ ಈ ಚಿತ್ರಣ ಜಗದ್ವಿಖ್ಯಾತ ಸ್ಮಾರಕದ ಆವರಣದಲ್ಲಿ ಗೋಚರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT