ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಮೇಶ್ ರೆಡ್ಡಿಗಿಂತ ಹತ್ತು ಪಟ್ಟು ವಿಕೃತಕಾಮಿ ಪ್ರಜ್ವಲ್ ರೇವಣ್ಣ: ಪುಷ್ಪಾ ಅಮರನಾಥ್

Published 1 ಮೇ 2024, 9:46 IST
Last Updated 1 ಮೇ 2024, 9:46 IST
ಅಕ್ಷರ ಗಾತ್ರ

ಬೀದರ್: 'ವಿಕೃತಕಾಮಿ ಉಮೇಶ್ ರೆಡ್ಡಿಗಿಂತ ಹತ್ತು ಪಟ್ಟು ಹೆಚ್ಚು ವಿಕೃತಕಾಮಿ ಸಂಸದ ಪ್ರಜ್ವಲ್ ರೇವಣ್ಣ' ಎಂದು ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ಪುಷ್ಪಾ ಅಮರನಾಥ್ ಆರೋಪಿಸಿದರು.

ಪ್ರಜ್ವಲ್ ರೇವಣ್ಣ ಒಬ್ಬ ನಾಲಾಯಕ್ ಸಂಸದ. ನಿರ್ಭಯಾ ಅತ್ಯಾಚಾರ, ವಿಕೃತಕಾಮಿ ಉಮೇಶ್ ರೆಡ್ಡಿ ಪ್ರಕರಣದ ಮಾದರಿಯಲ್ಲಿ ಅವರಿಗೆ ಕಾನೂನಿನ ಪ್ರಕಾರ ಶಿಕ್ಷೆ ವಿಧಿಸಬೇಕು. ಭವಿಷ್ಯದಲ್ಲಿ ಈ ರೀತಿಯ ಘಟನೆಗಳು ಮರುಕಳಿಸಬಾರದು ಎಂದು ಆಗ್ರಹಿಸಿದರು.

ತಾಯಿ ಸ್ಥಾನದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಸಂತ್ರಸ್ತ ಮಹಿಳೆಯರಿಗೆ ರಕ್ಷಣೆ ಕೊಡುತ್ತೇನೆ ಎಂದು ಹೇಳಬೇಕಿತ್ತು. ಆದರೆ, ಅವರು ಹಾಗೇ ಮಾಡಿಲ್ಲ. ಅವರು ವಿಶ್ವಗುರು ಅಂತ ಅವರನ್ನು ಕರೆದುಕೊಳ್ಳುತ್ತಾರೆ. ಆದರೆ, ಸಂತ್ರಸ್ತೆಯರ ಪರ ಮಾತನಾಡಿಲ್ಲ. ಅವರ ಜೊತೆ ನಾವಿದ್ದೇವೆ ಎಂದು ಬಿಜೆಪಿ ಮುಖಂಡರಾದರೂ ಹೇಳಬೇಕಿತ್ತು ಎಂದರು.

ಮೂರು ಸಾವಿರ ಹೆಣ್ಣು ಮಕ್ಕಳು‌ ಇದ್ದೂ ಸತ್ತಂತಿದ್ದಾರೆ. ಅವರ ಬದುಕಿಗೆ ಭದ್ರತೆ ಇಲ್ಲದಂತಾಗಿದೆ. ಅದರ ಬಗ್ಗೆ ಬಿಜೆಪಿಯವರೇಕೆ ಮಾತನಾಡುತ್ತಿಲ್ಲ. ಮೋದಿ ಅವರ ಪರಿವಾರದಲ್ಲಿ ಕೊಲೆಗಡುಕರು ಇದ್ದಾರೆಯೇ? ಇಂತಹವರ ರಕ್ಷಣೆಗೆ ಕೇಂದ್ರ ಸರ್ಕಾರವಿದೆಯೇ? ಬಿಲ್ಕಿಸ್ ಬಾನು, ಉನ್ನಾವ್ ದಲ್ಲಿ ಜೀವಂತ ಸುಟ್ಟರೂ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿದರು.

ಎಸ್.ಐ.ಟಿ ರಚನೆಗೂ ಮುನ್ನ ಪ್ರಜ್ವಲ್ ದೇಶ ಬಿಟ್ಟು ಹೋಗಿದ್ದಾನೆ. ಅದಕ್ಕೆ ಅವಕಾಶ ಮಾಡಿದ್ದು ಯಾರು? ವಿಮಾನ ನಿಲ್ದಾಣ ಪ್ರಾಧಿಕಾರ, ಪಾಸ್ ಪೋರ್ಟ್ ಇಲಾಖೆ ಕೇಂದ್ರದ ವ್ಯಾಪ್ತಿಗೆ ಬರುತ್ತೆ. ಹೀಗಿದ್ದರೂ ತಡೆಯಲಿಲ್ಲವೇಕೆ? ಎಂದು ಕೇಳಿದರು.

ಹಾಸನದಲ್ಲಿ ನಡೆದ ಪೆನ್ ಡ್ರೈವ್ ಘಟನೆ ಇಡೀ‌ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಮನುಷ್ಯನ ಮನಃಸ್ಥಿತಿ ಈ ರೀತಿ ಇರುತ್ತದೆಯೇ? ಒಬ್ಬ ಬಿಜೆಪಿ ನಾಯಕ ಇದರ ಬಗ್ಗೆ ಮಾನವೀಯತೆ ದೃಷ್ಟಿಯಿಂದ ಪ್ರತಿಕ್ರಿಯಿಸಿಲ್ಲ. ನಾರಿಶಕ್ತಿ, ಮಹಿಳಾ ಸಬಲೀಕರಣ, ಬೇಟಿ ಬಚಾವೋ ಬೇಟಿ ಪಡಾವೋ ಎಂದು ಬಿಜೆಪಿಯವರು ಹೇಳುತ್ತಾರೆ. ಪ್ರಧಾನಿ ಮೋದಿ ಅವರು ಅವರ ಭಾಷಣಗಳಲ್ಲಿ ಮಹಿಳೆಯರ ಬದುಕು ಬಂಗಾರ ಮಾಡುತ್ತೇವೆ ಎನ್ನುತ್ತಾರೆ.

ಹಾಸನದ ಘಟನೆಯನ್ನು ಎನ್ ಡಿಎ ನಾಯಕರು ಸುಳ್ಳು ಎಂದು ಹೇಳುತ್ತಿದ್ದಾರೆ. ಒಂದುವೇಳೆ ಇದು ಸುಳ್ಳಾಗಿದ್ದರೆ‌ ಪ್ರಜ್ವಲ್ ರೇವಣ್ಣ ದೇಶಬಿಟ್ಟು ಏಕೆ ಹೋಗುತ್ತಿದ್ದರು. ಮಾಧ್ಯಮಗಳಲ್ಲಿ ತನ್ನ ವಿರುದ್ಧ ಸುದ್ದಿ ಪ್ರಕಟಿಸಬಾರದು ಎಂದು ಇಂಜೆಕ್ಷನ್ ಆರ್ಡರ್ ತಂದಿದ್ದೇಕೆ? ತಪ್ಪು ಮಾಡಿರದಿದ್ದರೆ ಪ್ರಜ್ವಲ್ ನನ್ನು ಪಕ್ಷದಿಂದ ಉಚ್ಚಾಟಿಸಿದ್ದು ಏಕೆ? ಎಚ್.ಡಿ. ರೇವಣ್ಣ ವಿರುದ್ದವೂ ಆರೋಪ ಕೇಳಿ ಬಂದಿದ್ದು ಅವರ ವಿರುದ್ದವೂ ತನಿಖೆ ನಡೆಸಬೇಕಿದೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳಿಂದ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಈಗ ದಾರಿ ತಪ್ಪಿದವರು ಯಾರು ಅಂತ ಹೇಳಬೇಕು? ಬಿಜೆಪಿ ನಾಯಕಿಯರಾದ ಸ್ಮೃತಿ ಇರಾನಿ, ಶೋಭಾ ಕರಂದ್ಲಾಜೆ,‌ಶ್ರುತಿ, ಮಾಳವಿಕಾ ಅವರು ಈಗೇಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುಳಾ ನಾಯ್ಡು ಮಾತನಾಡಿ, ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳೆಯರ ಮಾಂಗಲ್ಯ ಕಸಿದುಕೊಳ್ಳುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸುಮಾರು ಮೂರು ಸಾವಿರ ಜನರ ಮಾಂಗಲ್ಯಸೂತ್ರ ಕಸಿದಿದ್ದರೂ ಮೋದಿಯವರೇಕೆ ಏನು ಮಾಡುತ್ತಿಲ್ಲ. ಪ್ರಜ್ವಲ್ ಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದ್ದೇಕೆ? ಪುರಾವೆ ಕೊಟ್ಟಿದ್ದರೂ ಟಿಕೆಟ್ ಕೊಟ್ಟಿದ್ದೇಕೆ? ಹೀಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದರು.

ಮನೆಯ ವಯಸ್ಸಾದ ಅಡುಗೆ ಮಾಡುವವಳ ಮೇಲೆಯೂ ಪ್ರಜ್ವಲ್ ಅತ್ಯಾಚಾರ ಎಸಗಿ ವಿಕೃತಿ ತೋರಿಸಿದ್ದಾನೆ. ಮೋದಿ, ಕುಮಾರಸ್ವಾಮಿ‌ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಪೂಜಾ ಜಾರ್ಜ್ ಸ್ಯಾಮುವೆಲ್, ರಾಜ್ಯ ಪ್ರಧಾನ ಕಾರ್ಯದರ್ಶಿ ವನಿಲಾ ಸೂರ್ಯವಂಶಿ, ಕೆಪಿಸಿಸಿ‌ ಸದಸ್ಯೆಯರಾದ ಗುರಮ್ಮ ಸಿದ್ದಾರೆಡ್ಡಿ, ರಾಜಶ್ರೀ ಸ್ವಾಮಿ, ಅಕ್ಕಮಹಾದೇವಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT