ಶನಿವಾರ, ಡಿಸೆಂಬರ್ 5, 2020
19 °C
ಮೂರನೇ ಬಾರಿಗೆ ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನ; ₹ 10 ಲಕ್ಷ ನಗದು ಬಹುಮಾನ

ವಿಜಯಪುರ: ಜಿಲ್ಲಾಸ್ಪತ್ರೆ ಮುಡಿಗೆ ಮತ್ತೆ ‘ಕಾಯಕಲ್ಪ’ ಪ್ರಶಸ್ತಿ

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಮೂಲಕ ವಿಜಯಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯು ಸತತ ಮೂರನೇ ಬಾರಿಗೆ ರಾಜ್ಯಮಟ್ಟದ ‘ಕಾಯಕಲ್ಪ’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

‘ಸ್ವಚ್ಛ ಭಾರತ’ ಯೋಜನೆಯಡಿ ಕೊಡಮಾಡಲಾಗಿರುವ ‘ಕಾಯಕಲ್ಪ’ ಪ್ರಶಸ್ತಿಯನ್ನು 2015–16 ಹಾಗೂ 2016–17 ನೇ ಸಾಲಿನಿಂದ ವಿಜಯಪುರ ಜಿಲ್ಲಾಸ್ಪತ್ರೆಯೂ ಪ್ರಥಮ ಬಹುಮಾನ ಪಡೆದುಕೊಂಡಿದೆ. ಅಲ್ಲದೇ, 2017–18ರಲ್ಲಿ ರಾಷ್ಟ್ರೀಯ ಗುಣಮಟ್ಟ ಸೇವಾ ಪ್ರಶಸ್ತಿಯನ್ನು ಪಡೆದುಕೊಂಡಿರುವ ಹೆಗ್ಗಳಿಕೆಗೆ ಜಿಲ್ಲಾಸ್ಪತ್ರೆ ಪಾತ್ರವಾಗಿದೆ. ಪ್ರಸಕ್ತ ಸಾಲಿನಲ್ಲಿ ಶಿವಮೊಗ್ಗ ಜಿಲ್ಲಾಸ್ಪತ್ರೆಯೊಂದಿಗೆ ದ್ವಿತೀಯ ಬಹುಮಾನವನ್ನು ಹಂಚಿಕೊಂಡಿದೆ. 

ಆಸ್ಪತ್ರೆ ಒಳ ಮತ್ತು ಹೊರಗಿನ ಸ್ವಚ್ಛತೆ, ಗಾಳಿ, ಬೆಳಕಿನ ವ್ಯವಸ್ಥೆ, ದಾಖಲೆ ಪತ್ರಗಳ ಸಮರ್ಪಕ ನಿರ್ವಹಣೆ, ವೈದ್ಯಕೀಯ ತ್ಯಾಜ್ಯ ನಿರ್ವಹಣೆ, ವೈದ್ಯ ಸಿಬ್ಬಂದಿಯ ಸೇವೆಯನ್ನು ಪರಿಗಣಿಸಿ ‘ಕಾಯಕಲ್ಪ’ ಪ್ರಶಸ್ತಿಯನ್ನು ನೀಡಲಾಗುತ್ತದೆ. 

ಜಿಲ್ಲಾಸ್ಪತ್ರೆಗೆ ಪ್ರಶಸ್ತಿ ಬಂದಿರುವ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶರಣಪ್ಪ ಕಟ್ಟಿ, ‘ಆಸ್ಪತ್ರೆಯ ವೈದ್ಯರು, ನರ್ಸ್‌, ‘ಡಿ’ ಗ್ರೂಪ್‌ ನೌಕರರ ಶ್ರಮದಿಂದ ಪ್ರಶಸ್ತಿ ಲಭಿಸಿದ್ದು, ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಹೇಳಿದರು.

‘ಈ ಬಾರಿ ಪ್ರಶಸ್ತಿ ಸುತ್ತಿನಲ್ಲಿ ಆಸ್ಪತ್ರೆಗಳ ನಡುವೆ ಕಠಿಣ ಸ್ಪರ್ಧೆ ಏರ್ಪಟ್ಟಿತ್ತು. ಎರಡೆರಡು ಬಾರಿ ಪ್ರಶಸ್ತಿ ಆಯ್ಕೆ ಸಮಿತಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ, ಅಂಕಗಳನ್ನು ನೀಡಿದೆ. ₹ 20 ಲಕ್ಷ ಮೊತ್ತದ ದ್ವಿತೀಯ ಬಹುಮಾನವನ್ನು ಶಿವಮೊಗ್ಗ ಜಿಲ್ಲಾಸ್ಪತ್ರೆ ಜೊತೆಗೆ ನಮ್ಮ ಆಸ್ಪತ್ರೆ ಹಂಚಿಕೊಂಡಿದೆ. ಹೀಗಾಗಿ ಎರಡೂ ಆಸ್ಪತ್ರೆಗಳಿಗೆ ಪ್ರಶಸ್ತಿ ಮೊತ್ತ ತಲಾ ₹10 ಲಕ್ಷ ಲಭಿಸಲಿದೆ’ ಎಂದು ತಿಳಿಸಿದರು.

ಹೊರ ಜಿಲ್ಲೆ, ರಾಜ್ಯಗಳಿಂದಲೂ ಭೇಟಿ: 426 ಹಾಸಿಗೆ‌ ಸಾಮಾರ್ಥ್ಯವಿರುವ ವಿಜಯಪುರ ಜಿಲ್ಲಾಸ್ಪತ್ರೆಗೆ ಕೇವಲ ಜಿಲ್ಲೆ ಮಾತ್ರವಲ್ಲದೆ ನೆರೆಯ ಯಾದಗಿರಿ, ಬೆಳಗಾವಿ ಜಿಲ್ಲೆ ಹಾಗೂ ಮಹಾರಾಷ್ಟ್ರದ ಸೊಲ್ಲಾಪುರ, ಜತ್‌ ಭಾಗದಿಂದಲೂ ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಪ್ರತಿನಿತ್ಯ 1200ರಿಂದ 1300 ಜನ ಹೊರರೋಗಿಗಳು, 100ರಿಂದ 130 ಒಳರೋಗಿಗಳು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಾರೆ ಎಂದು ಡಾ.ಶರಣಪ್ಪ ಕಟ್ಟಿ ಹೇಳಿದರು.

ವಿವಿಧ ವಿಭಾಗಕ್ಕೆ ಸಂಬಂಧಿಸಿದ 60 ತಜ್ಞ ವೈದ್ಯರು, 110 ಸ್ಟಾಫ್‌ ನರ್ಸ್‌, 130 ‘ಡಿ’ಗ್ರೂ‍ಪ್‌ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ಒಪಿಡಿ, ಏಕ್ಸರೇ, ಆಲ್ಟ್ರಾಸೌಂಡ್‌, ರಕ್ತ ಪರೀಕ್ಷೆಗಳು, ಸಿಟಿ, ಎಂಆರ್‌ಐ ಸೌಲಭ್ಯ ಹಾಗೂ ಎಲ್ಲ ರೀತಿಯ ಶಸ್ತ್ರ ಚಿಕಿತ್ಸೆ ಸೇರಿದಂತೆ ಸೂಪರ್‌ ಸ್ಪೆಷಾಲಿಟಿ ಸೌಲಭ್ಯಗಳು ಆಸ್ಪತ್ರೆಯಲ್ಲಿ ಲಭ್ಯವಿವೆ.

100 ಬೆಡ್‌ಗಳ ಪ್ರತ್ಯೇಕ ಹೆರಿಗೆ ಆಸ್ಪತ್ರೆಯೂ ಇದ್ದು, ಪ್ರತಿ ತಿಂಗಳು ಸುಮಾರು 800 ಸಾಮಾನ್ಯ ಹೆರಿಗೆ ಹಾಗೂ 350ರಿಂದ 400 ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗುತ್ತದೆ ಎಂದರು. 152 ಎಕರೆ ಜಾಗ ಜಿಲ್ಲಾಸ್ಪತ್ರೆಗೆ ಇದೆ. ಇಷ್ಟೊಂದು ಜಾಗ ರಾಜ್ಯದ ಯಾವ ಜಿಲ್ಲಾಸ್ಪತ್ರೆಗೂ ಇಲ್ಲ. ನೀರಿನ ಕೊರತೆಯೂ ಇಲ್ಲ ಎಂದು ತಿಳಿಸಿದರು.

ಸ್ನಾತಕೋತ್ತರ ಕೋರ್ಸ್‌ಗಳಿಗೆ ಮಾನ್ಯತೆ: ಪ್ರಸಕ್ತ ಸಾಲಿನಲ್ಲಿ ಒಬಿಜಿ, ಜನರಲ್‌ ಸರ್ಜರಿ, ಜನರಲ್‌ ಮೆಡಿಸಿನ್‌ ಮತ್ತು ಡಿಎನ್‌ಬಿ ಸ್ನಾತಕೋತ್ತರ ಕೋರ್ಸ್‌ಗಳಿಗೆ ಮಾನ್ಯತೆ ದೊರೆತಿದ್ದು, ವಿದ್ಯಾರ್ಥಿಗಳು ಈಗಾಗಲೇ ದಾಖಲಾಗಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲೇ ನಮ್ಮದು ಅತ್ಯುತ್ತಮ ಜಿಲ್ಲಾಸ್ಪತ್ರೆಯಾಗಿದೆ. ವೈದ್ಯಕೀಯ ಕಾಲೇಜಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒಳಗೊಂಡಿದೆ. ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುತ್ತಿದ್ದೇವೆ ಜಿಲ್ಲಾಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ.ಶರಣಪ್ಪ ಕಟ್ಟಿ ನುಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು