ಗುರುವಾರ , ಸೆಪ್ಟೆಂಬರ್ 23, 2021
21 °C
ಕೊಲ್ಹಾಪುರದಲ್ಲಿ ಭೂಕಂಪ; ವಿಜಯಪುರದಲ್ಲಿ ಆತಂಕ; ತಜ್ಞರ ವರದಿಯಲ್ಲಿ ಬಹಿರಂಗ

ದುರ್ಬಲ ಶಿಲಾ ರಚನೆಯಿಂದ ವಿಜಯಪುರದಲ್ಲಿ ಭೂಕಂಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಜಿಲ್ಲೆಯಲ್ಲಿ ಭೂಮಿಯ ಒಳಗೆ ದುರ್ಬಲ ಶಿಲಾರಚನೆ (Presence of the existing lineaments) ಇರುವುದೇ ಕಳೆದ ಶನಿವಾರ(ಸೆ.4) ಸಂಭವಿಸಿದ ಭೂಕಂಪನಕ್ಕೆ ಮುಖ್ಯ ಕಾರಣ ಎಂಬುದನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ತಜ್ಞರು ಪತ್ತೆ ಹಚ್ಚಿದ್ದಾರೆ.

ಅಂದು ರಾತ್ರಿ 11.47ರಿಂದ 11.49ರ ನಡುವೆ ಎರಡು ಭಾರಿ ಸಂಭವಿಸಿದ ಭೂಕಂಪನದ ಕೇಂದ್ರ ಬಿಂದು ಇರುವುದು ನೆರೆಯ ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ನಗರದ ಪಶ್ಚಿಮ ಭಾಗದ 19 ಕಿ.ಮೀ ಅಂತರದಲ್ಲಿ. ಆದರೆ, ಕೊಲ್ಹಾಪುರ ವ್ಯಾಪ್ತಿಯಲ್ಲಿ ಭೂಕಂಪದ ಅನುಭವವಾಗಿಲ್ಲ ಎಂಬ ಕುತೂಹಲ ಮತ್ತು ಅಚ್ಚರಿಯ ಅಂಶವನ್ನು ಒಳಗೊಂಡ ವರದಿಯನ್ನು ತಜ್ಞರು ವಿಜಯಪುರ ಜಿಲ್ಲಾಧಿಕಾರಿಗೆ ಮಂಗಳವಾರ ನೀಡಿದ್ದಾರೆ.

ರಿಕ್ಟರ್‌ ಮಾಪಕದಲ್ಲಿ 3.9 ತೀವ್ರತೆ ದಾಖಲು ಕೊಲ್ಹಾಪುರದ ಬಳಿ 38 ಕಿ.ಮೀ.ಆಳದಲ್ಲಿ ಭೂಕಂಪವಾದ ಬಳಿಕ ಅಲೆಗಳು ಭೂಕಂಪನ ಕೇಂದ್ರದಿಂದ ವಿಜಯಪುರ ಕಡೆಗೆ ಮರು ನಿರ್ದೇಶಿಸಲ್ಪಟ್ಟಿವೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ತಜ್ಞರ ಮೂರು ಸಲಹೆಗಳು: ಜಿಲ್ಲೆಯಲ್ಲಿ ಭೂಕಂಪನದಿಂದ ಆಗಬಹುದಾದ ಹಾನಿಗೆ ಸಂಬಂಧಿಸಿದಂತೆ ದೀರ್ಘಕಾಲಿನ ಕ್ರಮಗಳ ಬಗ್ಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ತಜ್ಞರು ಮೂರು ಪ್ರಮುಖ ಸಲಹೆಗಳನ್ನು ಜಿಲ್ಲಾಡಳಿತಕ್ಕೆ ನೀಡಿದ್ದಾರೆ.

ಮೊದಲನೆಯದಾಗಿ ಜಿಲ್ಲಾ ವ್ಯಾಪ್ತಿಯ ಭೂಮಿಯ ಒಳಗಿನ ದುರ್ಬಲ ಶಿಲಾ ರಚನೆ ಕುರಿತು ಭೂವೈಜ್ಞಾನಿಕ (Geological) ಅಧ್ಯಯನ ನಡೆಸಲು ಸಲಹೆ ನೀಡಿದ್ದಾರೆ.

ಎರಡನೆಯದಾಗಿ ಜಿಲ್ಲೆಯ ಅಂತರ್ಜಲದ (Micro Level) ಕುರಿತು ಸೂಕ್ಷ್ಮ ಮಟ್ಟದ ಅಧ್ಯಯನ ಹಾಗೂ ಮೂರನೆಯದಾಗಿ ಜಿಲ್ಲೆಯಲ್ಲಿ ಭೂಕಂಪನ ಸಂಭವಿಸಬಹುದಾದ ಸೂಕ್ಷ್ಮ ವಲಯಗಳನ್ನು ಗುರುತಿಸುವ ಬಗ್ಗೆಯೂ ವೈಜ್ಞಾನಿಕ ಅಧ್ಯಯನದ ಅಗತ್ಯವಿದೆ ಎಂದು ತಜ್ಞರ ತಂಡ ಜಿಲ್ಲಾಡಳಿತಕ್ಕೆ ಶಿಫಾರಸು ಮಾಡಿದೆ.

ಬಹುತೇಕ ಭೂಕಂಪನಗಳಿಗೆ ಫಾಲ್ಟ್ ರಚನೆ (Fault System) ಪ್ರಮುಖ ಕಾರಣಗಳಾಗಿದ್ದು, ಈ ಫಾಲ್ಟ್‌ಗಳನ್ನು ಗುರುತಿಸುವ ಹಾಗೂ ಮ್ಯಾಪಿಂಗ್ ಮಾಡುವ ಕೆಲಸ ಆಗಬೇಕು ಎಂದು ತಂಡ ತಿಳಿಸಿದೆ.

ಜಿಲ್ಲೆಯ ಭೂಮಿಯೊಳಗಿನ ಶಿಲೆಗಳ ರಚನೆ ಹಾಗೂ ಅಸ್ಥಿರತೆ (Rock De-formation) ಕುರಿತು ಹಾಗೂ ಅಂತರ್ಜಲ ಮಟ್ಟದಲ್ಲಿನ ಅಸಹಜ ಏರಿಳಿತಗಳು ಹಾಗೂ ಕೊಳವೆ ಭಾವಿ, ತೆರೆದ ಭಾವಿ, ಸ್ಥಳೀಯ ಕೆರೆಗಳು, ನದಿಗಳ ವ್ಯಾಪ್ತಿಯಲ್ಲಿ ತಾಪಮಾನದಲ್ಲಾಗುವ ಬದಲಾವಣೆ ಕುರಿತು ವೈಜ್ಞಾನಿಕವಾಗಿ ತಿಳಿಯುವ ಅಗತ್ಯ ಇದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಜಿಲ್ಲೆಯ ವಿವಿಧ ಭಾಗಗಳಲ್ಲಿ ಇತ್ತೀಚಿನ ದಿನಗಳಲ್ಲಿ ಆಗಾಗ ಭಾರಿ ಶಬ್ದ ಕೇಳಿ ಬರುತ್ತಿರುವುದು ಭೂಜಲ ವಿದ್ಯಾಮಾನಕ್ಕೆ (Hydrological Phenomena) ಸಂಬಂಧಿಸಿದೆ. ಶನಿವಾರ ಸಂಭವಿಸಿದ ಭೂಕಂಪಕ್ಕೂ ಇದಕ್ಕೂ ಸಂಬಂಧ ಇಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವೈಜ್ಞಾನಿಕ ಅಧಿಕಾರಿ ಎಸ್.ಜಗದೀಶ ಹಾಗೂ ಕಿರಿಯ ವೈಜ್ಞಾನಿಕ ಅಧಿಕಾರಿ ಡಾ.ರಮೇಶ ಎಲ್. ದಿಕ್ಪಾಲ್, ಕಲಬುರ್ಗಿಯ ವಿಪತ್ತು ನಿರ್ವಹಣಗಾರರಾದ ಅನ್ವೀರಪ್ಪ ಹಾಗೂ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಅಂತರ್ಜಲ ಇಲಾಖೆಯ ಹಿರಿಯ ಭೂ ವಿಜ್ಞಾನಿಗಳು, ಜಿಲ್ಲಾ ವಿಪತ್ತು ನಿರ್ವಹಣಾಗಾರರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಅಧ್ಯಯನ ತಂಡದಲ್ಲಿ ಇದ್ದರು.

ಜಿಲ್ಲೆಯು ಬಹುತೇಕ ಭಾಗವು ಭೂಕಂಪನ ವಲಯ 2 ರಲ್ಲಿ ಬರುತ್ತಿರುವುದರಿಂದ ಇದು ಕಡಿಮೆ ಅಪಾಯ ಇರುವ ವಲಯವಾಗಿದೆ. ಸಾರ್ವಜನಿಕರು ಯಾವುದೇ ಊಹಾಪೋಹಗಳಿಗೆ ಕಿವಿಗೊಡದಿರಲು ಮತ್ತು ಭಯಪಡಬಾರದು

- ಪಿ.ಸುನೀಲ್‌ ಕುಮಾರ್‌, ಜಿಲ್ಲಾಧಿಕಾರಿ, ವಿಜಯಪುರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು