ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಮಾ ತೀರದಲ್ಲಿ ಪ್ರವಾಹ ಭೀತಿ

ಉಜನಿ ಜಲಾಶಯದಿಂದ 1.31 ಲಕ್ಷ ಕ್ಯುಸೆಕ್ ನೀರು ಬಿಡುಗಡೆ; ನದಿತಟದ ಗ್ರಾಮಗಳಿಗೆ ಜಿಲ್ಲಾಧಿಕಾರಿ ಭೇಟಿ
Last Updated 17 ಸೆಪ್ಟೆಂಬರ್ 2022, 13:21 IST
ಅಕ್ಷರ ಗಾತ್ರ

ವಿಜಯಪುರ: ಉಜನಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗಿದೆ. ಇದರಿಂದಾಗಿ ಮುನ್ನಚ್ಚರಿಕೆಯ ಕ್ರಮ ವಹಿಸಲು, ಪ್ರವಾಹ ಭೀತಿ ಎದುರಿಸಲಿರುವ ಭೀಮಾ ನದಿಪಾತ್ರದ ಗ್ರಾಮಗಳಿಗೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ಶನಿವಾರ ಭೇಟಿ ನೀಡಿ, ಗ್ರಾಮಸ್ಥರಿಗೆ ತಿಳಿವಳಿಕೆ ಮೂಡಿಸಿದರು.

ಧೂಳಖೇಡ ಸೇತುವೆ ಬಳಿ ತೆರಳಿ ವೀಕ್ಷಣೆ ನಡೆಸಿದರು. ಬಳಿಕ ಚಣೆಗಾಂವ್ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ಸಹ ಭೇಟಿ ನೀಡಿ ಪರಿಶೀಲಿಸಿದರು.

ಉಜನಿ ಜಲಾಶಯದಿಂದ 91 ಸಾವಿರ ಕ್ಯೂಸೆಕ್ ಪ್ರಮಾಣದ ನೀರು ಮತ್ತು ಭೀಮಾ ನದಿಯ ಉಪ ನದಿಗಳಿಂದ 40 ಸಾವಿರ ಕ್ಯೂಸೆಕ್ ನೀರು ಸೇರಿ ಒಟ್ಟು 1.31 ಲಕ್ಷ ಕ್ಯೂಸೆಕ್ ನೀರು ರಾಜ್ಯಕ್ಕೆ ಹರಿದು ಬರುತ್ತಿದೆ. ದೊಡ್ಡ ಪ್ರಮಾಣದಲ್ಲಿ ನೀರು ಭೀಮಾ ನದಿಗೆ ಹರಿದು ಬರುವುದರಿಂದ ನದಿ ಪಾತ್ರದುದ್ದಕ್ಕೂ ಬರುವ ಎಲ್ಲ ಗ್ರಾಮಸ್ಥರು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ನದಿ ಹತ್ತಿರ ಹೋಗಬಾರದು. ಜಾನುವಾರುಗಳನ್ನು ನದಿಗೆ ಬಿಡಬಾರದು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

ಭೀಮಾ ನದಿಗೆ ವ್ಯಾಪಕ ಪ್ರಮಾಣದಲ್ಲಿ ನೀರು ಹರಿದು ಬರುವುದರಿಂದ ಹೊಳೆ ದಂಡೆಯ ಜನರು ಭೀತಿಗೊಳಗಾಗದೇ, ಮುನ್ನೆಚ್ಚರಿಕೆ ವಹಿಸಬೇಕು. ಅಡವಿ ವಸತಿ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಮನವಿ ಮಾಡಿದರು.

ಹಿಂಗಣಿಗೂ ಭೇಟಿ:

ಭೀಮಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜನರಲ್ಲಿ ಜಾಗೃತಿ ಮೂಡಿಸಲು ನದಿತಟದ ಗ್ರಾಮಗಳಲ್ಲಿ ಸಂಚಾರ ಕೈಗೊಂಡ ವೇಳೆ ಜಿಲ್ಲಾಧಿಕಾರಿ, ಇಂಡಿ ತಾಲ್ಲೂಕಿನ ಹಿಂಗಣಿ ಗ್ರಾಮಕ್ಕೆ ಭೇಟಿ ನೀಡಿ,ಗ್ರಾಮಸ್ಥರೊಂದಿಗೆ ಮಾತನಾಡಿ ಎಚ್ಚರಿಕೆ ವಹಿಸಲು ಸಲಹೆ ನೀಡಿದರು.

ಇಂಡಿ ಉಪ ವಿಭಾಗದ ಸಹಾಯಕ ಆಯುಕ್ತ ರಾಮಚಂದ್ರ ಗಡಾದೆ, ಚಡಚಣ ತಹಶೀಲ್ದಾರ್‌ ಎಚ್.ಎನ್.ಶಿರಹಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT