ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೈಪ್‌ಲೈನ್‌ ಮೂಲಕ ಮನೆಗಳಿಗೆ ಗ್ಯಾಸ್‌ ಪೂರೈಕೆ: ವಿಜಯಕುಮಾರ್ ಮೆಕ್ಕಳಕಿ

Last Updated 23 ಸೆಪ್ಟೆಂಬರ್ 2022, 13:04 IST
ಅಕ್ಷರ ಗಾತ್ರ

ವಿಜಯಪುರ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮನೆ,ಮನೆಗಳಿಗೆ ಪೈಪ್‌ಲೈನ್‌ ಮೂಲಕ ಗ್ಯಾಸ್‌(ಅಡುಗೆ ಅನಿಲ) ಪೂರೈಕೆ ಯೋಜನೆಗೆ ಸಿದ್ಧತೆ ಆರಂಭವಾಗಿದೆ ಎಂದು ಪಾಲಿಕೆ ಆಯುಕ್ತ ವಿಜಯ್‌ಕುಮಾರ್‌ ಮೆಕ್ಕಳಕಿ ತಿಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೈಪ್‌ಲೈನ್‌ ಮೂಲಕ ಗ್ಯಾಸ್‌ ಪೂರೈಕೆ ಯೋಜನೆ ಅನುಷ್ಠಾನ ಸಂಬಂಧ ಕೇಂದ್ರ ಸರ್ಕಾರ ನೇಮಿಸಿರುವ ಎ.ಜಿ ಆ್ಯಂಡ್‌ ಪಿ (AG&P) ಏಜೆನ್ಸಿ ಸರ್ವೇ ಕಾರ್ಯ ನಡೆಸಿದೆ ಎಂದು ಹೇಳಿದರು.

ಆರಂಭದಲ್ಲಿ ನಗರದ ಯಾವ ವಾರ್ಡ್‌ಗಳಲ್ಲಿ ಪೈಪ್‌ಲೈನ್‌ ಮೂಲಕ ಮನೆ, ಮನೆಗಳಿಗೆ ಗ್ಯಾಸ್‌ ಪೂರೈಕೆ ಮಾಡಬೇಕು. ಅದರ ಸಾಧಕ–ಬಾಧಕ ಕುರಿತು ಚರ್ಚೆ ನಡೆಯುತ್ತಿದೆ ಎಂದರು.

ಬಿಬಿಪಿಎಸ್‌ ಸೌಲಭ್ಯ:ತೆರಿಗೆ, ನೀರು, ವಿದ್ಯುತ್‌ ಸೇರಿದಂತೆ ಮತ್ತಿತರರ ಬಿಲ್‌ಗಳನ್ನು ಸುಲಭವಾಗಿ ಪಾವತಿಸಲು ಅನುಕೂಲವಾಗುವಂತೆ ಬಿ.ಬಿ.ಪಿ.ಎಸ್‌.(ಭಾರತ್ ಬಿಲ್‌ ಪೇಮೆಂಟ್‌ ವ್ಯವಸ್ಥೆ) ತಂತ್ರಾಂಶವನ್ನು ಆನ್‌ಲೈನ್‌ ಮೂಲಕ ಪಾವತಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.

ಪಾಲಿಕೆ ಕಚೇರಿಯಿಂದ ಲಭ್ಯವಾಗುವ ನಾಗರಿಕ ಸೇವೆಗಳಾದ ಕಟ್ಟಡ ಪರವಾನಗಿ, ಕಟ್ಟಡ ಮುಕ್ತಾಯ ಪ್ರಮಾಣ ಪತ್ರ, ಉದ್ದಿಮೆ ಪರವಾನಗಿ, ಸೇವೆಗಳನ್ನು ಆನ್‌ಲೈನ್‌ ಮೂಲಕ ಪಾರದರ್ಶಕವಾಗಿ ಹಾಗೂ ತ್ವರಿತವಾಗಿ ನೀಡಲು ಕ್ರಮಕೈಗೊಳ್ಳಲಾಗಿದೆ ಎಂದರು.

ಮೂರು ವಲಯ ಕಚೇರಿ:ಸಾರ್ವಜನಿಕರಿಗೆ ಪರಿಣಾಮಕಾರಿಯಾಗಿ ಸೇವೆ ನೀಡಲು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೂರು ವಲಯಗಳಾಗಿ ವಿಂಗಡಿಸಿ ವಲಯ ಕಚೇರಿಗಳನ್ನು ಪ್ರಾರಂಭಿಸಲಾಗಿದೆ ಎಂದರು.

ನಿರಾಶ್ರಿತರ ಕೇಂದ್ರ:ನಗರದಲ್ಲಿ ಕಂಡುಬರುವ ನಿರಾಶ್ರಿತರಿಗೆ ತಾತ್ಕಾಲಿಕ ಆಸರೆಗಾಗಿ ಡೇ ನಲ್ಮ್‌ ಯೋಜನೆಯಡಿ ಮೂರು ನಿರಾಶ್ರಿತ ಕೇಂದ್ರಗಳನ್ನು ಪಾಲಿಕೆ ವತಿಯಿಂದ ನಿರ್ವಹಿಸಲಾಗುತ್ತಿದೆ ಎಂದು ಹೇಳಿದರು.

ನಗರದ ಬೀದಿ ಬದಿ ವ್ಯಾಪಾರಸ್ಥರನ್ನು ಗುರುತಿಸಿ ಅವರಿಗೆ ಗುರುತಿನ ಚೀಟಿ ಹಾಗೂ ಮಾರಾಟ ಪ್ರಮಾಣ ಪತ್ರ ನೀಡಲಾಗುತ್ತಿದೆ ಎಂದರು.

ಪ್ರಧಾನಮಂತ್ರಿ ಸ್ವ ನಿಧಿ ಯೋಜನೆಯಡಿಯಲ್ಲಿ ಅರ್ಹ ಬೀದಿ ಬದಿ ವ್ಯಾಪಾರಸ್ಥರಿಗೆ ₹10 ಸಾವಿರ ಆರ್ಥಿಕ ಸಹಾಯ ನೀಡಲಾಗುತ್ತಿದೆ ಎಂದು ತಿಳಿಸಿದರು.

ಎಲ್‌ಇಡಿ ದೀಪ:ನಗರದಲ್ಲಿ ವಿದ್ಯುತ್‌ ಉಳಿತಾಯ ಹಾಗೂ ಸೌಂದರ್ಯೀಕರಣ ದೃಷ್ಟಿಯಿಂದ ಎಲ್‌ಇಡಿ ಬೀದಿ ದೀಪ ಅಳವಡಿಸಲು ₹33 ಕೋಟಿ ಮೊತ್ತದ ಟೆಂಡರ್‌ ಕರೆಯಲಾಗಿದೆ. ಬೀದಿ ದೀಪ ನಿರ್ವಹಣೆಯನ್ನು ಸಿಸಿಎಂಎಸ್‌ ತಂತ್ರಾಂಶದ ಮೂಲಕ ಕೇಂದ್ರೀಕೃತ ವ್ಯವಸ್ಥೆ ಮೂಲಕ ನಿರ್ವಹಿಸಲಾಗುವುದು ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ ಭೂತನಾಳ ಕೆರೆಯ ಪಕ್ಕದಲ್ಲಿ ಫುಡ್‌ ಪಾರ್ಕ್‌(ಆಹಾರ ಮಳಿಗೆ) ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿಯಲ್ಲಿ ₹ 125 ಕೋಟಿ ಮತ್ತು ₹ 30 ಕೋಟಿ ಪ್ರೋತ್ಸಾಹ ಅನುದಾನ ಬಳಸಿ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.

15ನೇ ಹಣಕಾಸು ಯೋಜನೆಯಡಿ ₹ 15 ಕೋಟಿ ಮೊತ್ತದಲ್ಲಿಹಾಗೂ ಮುಖ್ಯಮಂತ್ರಿಗಳ ವಿಶೇಷ ಅನುದಾನ ₹ 50 ಕೋಟಿಗಳಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು ಹಾಗೂ ಒಳಚರಂಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.

ಬಯೋ ಮೈನಿಂಗ್‌:ನಗರದಲ್ಲಿ ಬಹಳ ವರ್ಷಗಳಿಂದ ಸಂಗ್ರಹಣೆಯಾಗಿರುವ ತ್ಯಾಜ್ಯವನ್ನು ಬಯೋಮೈನಿಂಗ್‌ ಮಾಡುವುದರ ಮೂಲಕ 13 ಎಕರೆ ಜಾಗವನ್ನು ಪುನರ್ಬಳಕೆ ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಗವಿಸಿದ್ಧ ಹೊಸಮನಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

***

ನಗರದ ಜನತೆಗೆ ಮೂಲಸೌಕರ್ಯಗಳಾದ ಶುದ್ಧ ಕುಡಿಯುವ ನೀರು, ಸ್ವಚ್ಛತೆ, ಬೀದಿ ದೀಪ, ರಸ್ತೆ, ಒಳಚರಂಡಿ ವ್ಯವಸ್ಥೆಗೆ ಆದ್ಯತೆ ನೀಡಲಾಗಿದೆ

–ವಿಜಯಕುಮಾರ್ ಮೆಕ್ಕಳಕಿ, ಆಯುಕ್ತ, ಮಹಾನಗರ ಪಾಲಿಕೆ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT