ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂದಗಿ: ಅಭಿವೃದ್ಧಿ ವಂಚಿತ ಹಂಚಿನಾಳ

ಶಿಥಿಲಾವಸ್ಥೆ ತಲುಪಿದ ಜಲಸಂಗ್ರಹಾಗಾರ: ಮಹಿಳೆಯರಿಗಿಲ್ಲ ಶೌಚಾಲಯ ಸೌಲಭ್ಯ
Published 13 ಸೆಪ್ಟೆಂಬರ್ 2023, 5:09 IST
Last Updated 13 ಸೆಪ್ಟೆಂಬರ್ 2023, 5:09 IST
ಅಕ್ಷರ ಗಾತ್ರ

ಸಿಂದಗಿ: ವಿಧಾನಸಭೆ ಕ್ಷೇತ್ರದ ಮೋರಟಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 2,300 ಜನಸಂಖ್ಯೆ ಹೊಂದಿದ ಗ್ರಾಮ ಹಂಚಿನಾಳ. ಈ ಗ್ರಾಮ ಅಭಿವೃದ್ಧಿಯಿಂದ ಸಂಪೂರ್ಣ ಕಡೆಗಣನೆಗೆ ಒಳಗಾಗಿದೆ. ಸೌಲಭ್ಯಗಳಿಂದ ವಂಚಿತವಾಗಿದೆ.

ಸದಾ ಕೊಳಚೆ ನೀರು ಹರಿಯುವ ರಸ್ತೆಯಲ್ಲಿ ಸಂಚರಿಸಲು ಆಯಾ ಮನೆಯವರೇ ಅಲ್ಲಲ್ಲಿ ಕೊಳಚೆ ನೀರು ದಾಟಲು ಕಲ್ಲಿನ ಪರಸಿ ಹಾಕಿಕೊಂಡಿದ್ದಾರೆ.

ಕುಡಿಯುವ ನೀರು ಪೂರೈಕೆ ಮಾಡುವ ಮೇಲ್ಮಟ್ಟದ ಜಲಸಂಗ್ರಹಾಗಾರ ಸೋರುವುದರಿಂದ ಶಿಥಿಲಾವಸ್ಥೆ ತಲುಪಿದೆ. ಅಪಾಯಕ್ಕೆ ಆಹ್ವಾನಿಸುವ ಸ್ಥಿತಿಯಲ್ಲಿದೆ. ಇದರ ಹತ್ತಿರ 4–5 ಮನೆಗಳಿವೆ. ಮಲಕಾರ ಸಿದ್ಧೇಶ್ವರ ದೇವಸ್ಥಾನವಿದೆ. ಜಲಸಂಗ್ರಹಾಗಾರಕ್ಕೆ ಅಪಾಯ ಸಂಭವಿಸಿದರೆ ನಮ್ಮ ಗತಿ ಏನು ಎಂದು ಅಲ್ಲಿರುವ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಮಹಿಳೆಯರಿಗಾಗಿ ಶೌಚಾಲಯಗಳಿಲ್ಲದ ಕಾರಣ ಗ್ರಾಮದ ಹೊರ ವಲಯದ ಬಯಲು ಪ್ರದೇಶವೇ ಶೌಚಾಲಯವಾಗಿದೆ. ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ಗ್ರಾಮ ಪಂಚಾಯ್ತಿ ಸಹಾಯ ಧನ ನೀಡುತ್ತಿಲ್ಲ ಎಂಬ ದೂರು ಕೇಳಿ ಬಂದಿತು.

ಅಂಗನವಾಡಿ ಕೇಂದ್ರ ನಂಬರ್‌ 2 ದುರ್ವಾಸನೆಯುಳ್ಳ ಪ್ರದೇಶದಲ್ಲಿದೆ. ಸುತ್ತ ಮುತ್ತ ಮಲಮೂತ್ರ ವಿಸರ್ಜನೆ ಮಾಡಲಾಗುತ್ತದೆ. ಇಂಥ ದುರ್ಗಮ ಪ್ರದೇಶದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಕಲಿಯುವ ಮಕ್ಕಳ ಆರೋಗ್ಯದ ಬಗ್ಗೆ ಪಾಲಕರ ಕಳವಳ ವ್ಯಕ್ತಪಡಿಸುತ್ತಾರೆ.

‘ಗ್ರಾಮ ಪಂಚಾಯ್ತಿ ಮಂಜೂರು ಮಾಡಿದ ಆಶ್ರಯ ಯೋಜನೆಯ ಫಲಾನುಭವಿಗಳು ಸಾಲ ಮಾಡಿ ಮನೆ ಕಟ್ಟಿಕೊಂಡಿದ್ದೇವೆ. ಈ ವರೆಗೂ ಸಹಾಯಧನ ಬಿಡುಗಡೆಗೊಳಿಸಿಲ್ಲ’ ಎಂದು ಫಲಾನುಭವಿ ಕಮಲಾಬಾಯಿ ದುದ್ದಗಿ ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

40 ಆಶ್ರಯ ಮನೆಗಳಿಗೆ ಸಂಬಂಧಿಸಿದಂತೆ ಗ್ರಾಮದ ಹಲವರು ಲೋಕಾಯುಕ್ತ ಕಾರ್ಯಾಲಯಕ್ಕೆ ದೂರು ಸಲ್ಲಿಸಿದ್ದರಿಂದ ಸಹಾಯಧನ ಬಿಡುಗಡೆಗೊಳಿಸಲಾಗಿಲ್ಲ ಎಂದು ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಆರ್.ಎಂ.ಚಕ್ರವರ್ತಿ ಪ್ರತಿಕ್ರಿಯಿಸಿದರು.

ಹಂಚಿನಾಳ ಗ್ರಾಮ ಅಭಿವೃದ್ಧಿಯಿಂದ ಸಂಪೂರ್ಣ ಕಡೆಗಣನೆಯಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಗ್ರಾಮ ಕೊಳಚೆಮಯವಾಗಿದೆ. ಶುದ್ಧ ಕುಡಿಯುವ ನೀರು, ರಸ್ತೆ, ಶೌಚಾಲಯಗಳು ಇಲ್ಲಿ ಮರೀಚಿಕೆಯಾಗಿದೆ.

ಹಂಚಿನಾಳ ಗ್ರಾಮದ ರಸ್ತೆಯ ದು:ಸ್ಥಿತಿ
ಹಂಚಿನಾಳ ಗ್ರಾಮದ ರಸ್ತೆಯ ದು:ಸ್ಥಿತಿ

ಹಂಚಿನಾಳ ಗ್ರಾಮದ ಅಭಿವೃದ್ಧಿಯನ್ನು ಹಿಂದಿನ ಸರ್ಕಾರ ಕಡಗಣಿಸಿದೆ. ಈಗಿನ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಅಭಿವೃದ್ಧಿ ಮಾಡುವ ಆಶಾಭಾವ ಇದೆ

-ಚನ್ನಬಸು ದುದ್ದಗಿ ಗ್ರಾಮ ಪಂಚಾಯ್ತಿ ಸದಸ್ಯ

ವೈಯಕ್ತಿಕ ಶೌಚಾಲಯಕ್ಕಾಗಿ ಗ್ರಾಮದಲ್ಲಿ ಫಲಾನುಭವಿಗಳು ಅಪೂರ್ಣ ಮಾಹಿತಿ ಇರುವ ಅರ್ಜಿ ಸಲ್ಲಿಸುತ್ತಿರುವುದರಿಂದ ಶೌಚಾಲಯಗಳು ಮಂಜೂರಾಗಿಲ್ಲ

-ಆರ್.ಎಂ.ಚಕ್ರವರ್ತಿ ಪಿಡಿಒ

ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆ ಮಾಡುವ ಮೇಲ್ಮಟ್ಟದ ಜಲಸಂಗ್ರಹಾಗಾರ ಅಪಾಯಕಾರಿ ಸ್ಥಿತಿಯಲ್ಲಿರದಿದ್ದರೂ ಮುಂಜಾಗೃತಾ ಕ್ರಮವಾಗಿ ಜಲಜೀವನ ಮಿಷನ್ ಯೋಜನೆಯಡಿ ಹೊಸ ಜಲಸಂಗ್ರಹಗಾರ ನಿರ್ಮಾಣಕ್ಕಾಗಿ ಮಂಜೂರಾತಿ ದೊರಕಿದೆ

-ಎಂ.ಎಸ್.ಹಿಕ್ಕನಗುತ್ತಿ ವಿಭಾಗಾಧಿಕಾರಿ ಗ್ರಾಮೀಣ ಕುಡಿಯುವ ನೀರು ಯೋಜನಾ ಇಲಾಖೆ

ಅಮೋಘಸಿದ್ಧೇಶ್ವರ ಹೇಳಿಕೆಗೆ ಪ್ರಸಿದ್ಧಿ ಹಂಚಿನಾಳ ಗ್ರಾಮದ ಅಮೋಘಸಿದ್ದೇಶ್ವರ ಜಾತ್ರೆಯ ಸಂದರ್ಭದಲ್ಲಿ ನಡೆಯುವ ಹೇಳಿಕೆ ತುಂಬಾ ಪ್ರಸಿದ್ಧಿ ಪಡೆದುಕೊಂಡಿದೆ. ಹೇಳಿಕೆ ಕೇಳಲು ನೆರೆಯ ವಿವಿಧ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಬಾದಾಮಿ ಅಮವಾಸ್ಯೆ ದಿನದಂದು ಗ್ರಾಮಕ್ಕೆ ಬರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT