ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರವಾದ ನುಗ್ಗೆಕಾಯಿ ವ್ಯಾಪಾರ

ಮಡ್ಡಿ ಜಮೀನಿನಲ್ಲೆ ತರಕಾರಿ ಬೆಳೆದು ಲಕ್ಷಾಂತರ ಆದಾಯ
Last Updated 9 ಫೆಬ್ರುವರಿ 2023, 19:45 IST
ಅಕ್ಷರ ಗಾತ್ರ

ತಿಕೋಟಾ: ಇರುವ ಆರು ಎಕರೆ ಆರು ಗುಂಟೆ ಜಮೀನಿನಲ್ಲಿ ಮೂರು ಎಕರೆ ನುಗ್ಗೆಕಾಯಿ ಕೃಷಿ ಮಾಡುತ್ತಾ ಉಳಿದ ಮೂರು ಎಕರೆಯಲ್ಲಿ ಬಗೆಬಗೆಯ ತರಕಾರಿ ಬೆಳೆದು ಪ್ರತಿ ದಿನ ಎರಡ್ಮೂರು ಸಾವಿರ ಆದಾಯ ಗಳಿಸುತ್ತಾ ವಾರ್ಷಿಕ ಲಕ್ಷಾಂತರ ರೂಪಾಯಿ ಆದಾಯ ಪಡೆಯುವ ಈ ಕೃಷಿಕ ದಂಪತಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ತಾಲ್ಲೂಕಿನ ಇಟ್ಟಂಗಿಹಾಳ ಗ್ರಾಮದ ಸುಶೀಲಾ ಹಾಗೂ ಮಲ್ಲಪ್ಪ ಹಟ್ಟೆನವರ ದಂಪತಿ ಮೂರು ಎಕರೆ ಜಮೀನಿನಲ್ಲಿ ಗಿಡದಿಂದ ಗಿಡಕ್ಕೆ 10 ಅಡಿ ಅಂತರದಲ್ಲಿ ನುಗ್ಗೆ ಸಸಿ ನೆಟ್ಟು, ಹನಿ ನೀರಾವರಿ ಅಳವಡಿಸಿದ್ದಾರೆ. ಆರಂಭಿಕ ಖರ್ಚು ₹50 ಸಾವಿರ ಮಾಡಿದ್ದು, ಮೊದಲ ವರ್ಷವೇ ₹1 ಲಕ್ಷ ಆದಾಯ ದೊರೆತಿದೆ. ಈಗ ಎರಡನೇ ವರ್ಷ ಈಗಾಗಲೇ ₹ 50 ಸಾವಿರ ಆದಾಯ ಕೈ ಸೇರಿದ್ದು, ಇನ್ನೂ ₹ 1.5 ಲಕ್ಷದವರೆಗೂ ಆದಾಯ ಆಗುತ್ತದೆ.

ಬಗೆಬಗೆಯ ಹಣ್ಣು ಬೆಳೆ:

ನುಗ್ಗೆಕಾಯಿ ಫಸಲು ಮುಗಿಯುತ್ತಿದ್ದಂತೆ ಆದಾಯ ಮೂಲಕ್ಕೆ ಉಳಿದ ಮೂರು ಎಕರೆ ಜಮೀನಿನಲ್ಲಿ 70 ಮಾವಿನ ಮರಗಳಿಂದ ₹60 ಸಾವಿರ, 190 ನೆರಳೆ ಮರಗಳಿಂದ ₹ 3 ಲಕ್ಷ, 100 ಚಿಕ್ಕು ಮರಗಳಿಂದ ₹70 ಸಾವಿರ, ಮೊಸಂಬಿ ಹಾಗೂ ಸಂತರಾ ಸಸಿಗಳಿಂದ ₹20 ಸಾವಿರ ಆದಾಯ ಪಡೆಯುವ ಮೂಲಕ ವರ್ಷಪೂರ್ತಿ ಆದಾಯ ಬರುವಂತೆ ಮಾಡಿದ್ದಾರೆ.

ವಿವಿಧ ತರಕಾರಿ:

ಹಣ್ಣಿನ ಫಸಲು ಕಡಿಮೆಯಾಗುತ್ತಿದ್ದಂತೆ ತರಕಾರಿ ಬೆಳೆ ಬರುವಂತೆ ಮಾಡಿದ ಈ ದಂಪತಿ, ಚವಳೆಕಾಯಿ, ಬೆಂಡೆಕಾಯಿ, ಹೀರೆಕಾಯಿ, ಬದನೆಕಾಯಿ, ಉಳ್ಳಾಗಡ್ಡಿ, ಕೊತಂಬ್ರಿ, ಪಾಲಕ, ಮೆಂತೆ ಇತರೆ ತರಕಾರಿ ಬೆಳೆದು ವಾರ್ಷಿಕ ₹ 1.5 ಲಕ್ಷಕ್ಕೂ ಹೆಚ್ಚು ಆದಾಯ ಪಡೆಯುತ್ತಾರೆ.

ಪ್ರತಿದಿನ ಬೆಳಗ್ಗೆ ಕಾರ್ಯಾರಂಭ:

ಪ್ರತಿ ದಿನ ಬೆಳಳಿಗ್ಗೆ 5 ಕ್ಕೆ ಏಳುವ ದಂಪತಿ ತರಕಾರಿ ಮೂಟೆಗಳನ್ನು ಹಿಂದಿನ ದಿನದ ರಾತ್ರಿಯೇ ವ್ಯವಸ್ಥಿತ ಜೋಡನೆ ಮಾಡಿಟ್ಟುಕೊಂಡಿರುತ್ತಾರೆ. ರೈತ ಮಲ್ಲಪ್ಪ ಪ್ರತಿದಿನ ವಿಜಯಪುರ ನಗರದ ಬಾರಾಕಮಾನ್‌ ಹತ್ತಿರ ಇರುವ ಮಾರುಕಟ್ಟೆ ಹಾಗೂ ಭಾನುವಾರ ಲಿಂಗದ ಗುಡಿ ರೋಡ್‌ ಮಾರುಕಟ್ಟೆಯ ಹತ್ತಿರ ಬೈಕ್ ಮೂಲಕ ಸಾಗಿ ಬೆಳಗ್ಗೆ 11 ಗಂಟೆಯೊಳಗೆ ವ್ಯಾಪಾರ ಮುಗಿಸಿಕೊಂಡು ಎರಡ್ಮೂರು ಸಾವಿರ ಸಂಪಾದನೆ ಮಾಡಿಕೊಂಡು ಮನೆ ಸೇರುತ್ತಾರೆ.

ಸಹಾಯಧನ: ತೋಟಗಾರಿಕೆ ಇಲಾಖೆಯಿಂದ ನರೇಗಾ ಯೋಜನೆಯಡಿ ನುಗ್ಗೆಕಾಯಿ ಕೃಷಿ ಮಾಡಲು ₹1.48 ಲಕ್ಷ ಸಹಾಯಧನ ಮುಂಜೂರಾಗಿದ್ದು, ಈಗಾಗಲೇ ₹ 73 ಸಾವಿರ ಸಹಾಯಧನ ಪಡೆದುಕೊಂಡಿದ್ದಾರೆ. ಇನ್ನೂ ₹ 75 ಸಾವಿರ ಕೂಲಿ ಹಣ ಬರುತ್ತವೆ.

ಮಡ್ಡಿ ಜಮೀನು:

ಜಮೀನು ಪೂರ್ಣ ಮಡ್ಡಿ ನೇಲವಿದೆ. ಎರಡು ಕೊಳವೆಬಾವಿ ಇದೆ, ಹನಿ ನೀರಾವರಿ ಮೂಲಕ ನೀರು ಪೂರೈಸಲಾಗುತ್ತದೆ.

ಈ ನಮ್ಮ ಮಡ್ಡಿ ಭಾಗಕ್ಕೆ ಬೇಸಿಗೆಯಲ್ಲಿ ನೀರೆ ಇರುತ್ತಿರಲಿಲ್ಲ. ಶಾಸಕ ಎಂ‌.ಬಿ.ಪಾಟೀಲರು ಕೆನಲ್ ಮಾಡಿದ್ದರಿಂದ ನೀರು ಬರಪೂರ ಬರುತ್ತಿದೆ. ನೀರಾವರಿ ಯೋಜನೆಗಳಿಂದ ಅಂತರ್ಜಲ ಮಟ್ಟ ಹೆಚ್ಚಾಗಿದ್ದು, ವರ್ಷದ ಪೂರ್ತಿ ನೀರು ಇರುವುದರಿಂದ ತರಕಾರಿ ಬೆಳಯಲು ಸಹಾಯವಾಗಿದೆ ಎನ್ನುತ್ತಾರೆ ದಂಪತಿ.

‘ಕೃಷಿ ಆದಾಯದಿಂದಲ್ಲೆ ಎರಡು ಗಂಡು ಮಕ್ಕಳಿಗೆ ಎಂಜಿನಿಯರ್ ಓದಿಸಿದ್ದೇವೆ’ ಎನ್ನುತ್ತಾರೆ ರೈತ ದಂಪತಿ.

****

ಒಂದು ತರಕಾರಿ ಬೆಳೆ ಮುಗಿಯುತ್ತಿದ್ದಂತೆ, ಬೇರೆ ತರಕಾರಿ ಹಾಗೂ ಹಣ್ಣುಗಳ ವ್ಯಾಪಾರ ಬರುವಂತೆ ಸಸಿ ನಾಟಿ ಮಾಡಿರುತ್ತೇವೆ. ಪ್ರತಿ ದಿನ ಪಟ್ಟಣಕ್ಕೆ ಹೋಗಿ ವ್ಯಾಪಾರ ಮಾಡುತ್ತೇವೆ. ವರ್ಷಕ್ಕೆ ಎಲ್ಲ ಬೆಳೆ ಸೇರಿ ₹ 8ರಿಂದ10 ಲಕ್ಷ ಆದಾಯ ಆಗುತ್ತದೆ.

ಸುಶೀಲಾ ಮಲ್ಲಪ್ಪ ಹಟ್ಟೆನವರ
ಇಟ್ಟಂಗಿಹಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT