ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭೀಮ ಸಲಗ’ಕ್ಕೆ ಇನ್‌ಸ್ಪೈಯರ್ ಅವಾರ್ಡ್‌

ನಾದ ಕೆ.ಡಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದಲ್ಲಿ 28ನೇ ಸ್ಥಾನ
Last Updated 18 ಸೆಪ್ಟೆಂಬರ್ 2021, 16:44 IST
ಅಕ್ಷರ ಗಾತ್ರ

ವಿಜಯಪುರ: ಇಂಡಿ ತಾಲ್ಲೂಕಿನ ನಾದ ಕೆ.ಡಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಾದ ದೇವೆಂದ್ರ ಬಿ. ಬಿರಾದಾರ ಮತ್ತು ಕಾರ್ತಿಕ್‌ ನರಳೆ ಅನ್ವೇಶಿಸಿದ ‘ಭೀಮ ಸಲಗ’ ಬಹುಪಯೋಗಿ ಕೃಷಿ ಯಂತ್ರಕ್ಕೆ ರಾಷ್ಟ್ರಮಟ್ಟದ ಇನ್‌ಸ್ಪೈಯರ್ ಅವಾರ್ಡ್‌ ಲಭಿಸಿದೆ.

ಭೀಮಾ ತೀರದ ಸರ್ಕಾರಿ ಶಾಲೆ, ಅದರಲ್ಲೂ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ರಾಜ್ಯಕ್ಕೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

‘ಭೀಮ ಸಲಗ’ ಕೃಷಿ ಯಂತ್ರದ ಮೂಲಕ ಬೆಳೆಯನ್ನು ರಾಶಿ ಮಾಡುವುದು, ಕಳೆ ತೆಗೆಯುವುದು, ಕೀಟನಾಶಕ ಸಿಂಪಡಿಸುವುದು, ತೋಟದಲ್ಲಿ ಹುಲ್ಲು ತೆಗೆಯುವುದು, ಬದುವಿನಲ್ಲಿ ಬೆಳೆದ ಗಿಡಗಳನ್ನು ಕತ್ತರಿಸುವುದು, ಬೆಳೆ ನಾಟಿ ಮಾಡಲು, ತಗ್ಗು ಅಗೆಯುವುದು ಸೇರಿದಂತೆ ಒಂಬತ್ತು ಬಗೆಯ ಕೆಲಸವನ್ನು ಒಂದೇ ಯಂತ್ರದಲ್ಲಿ ಮಾಡಬಹುದಾಗಿದೆ.

2019–20ನೇ ಸಾಲಿನ ರಾಷ್ಟ್ರಮಟ್ಟದ ಇನ್‌ಸ್ಪೈರ್‌ ಅವಾರ್ಡ್‌ ಇದಾಗಿದೆ. ಕೋವಿಡ್‌ ಲಾಕ್‌ಡೌನ್‌ ಕಾರಣಕ್ಕೆ ಸ್ಪರ್ಧೆ ನಡೆದಿರಲಿಲ್ಲ. ಇದೀಗ ಆನ್‌ಲೈನ್‌ ಮೂಲಕ ನಡೆದ ಸ್ಪರ್ಧೆಯ ಫಲಿತಾಂಶ ಸೆಪ್ಟೆರಂಬರ್‌ 8ರಂದು ಪ್ರಕಟವಾಗಿದೆ.

ರಾಷ್ಟ್ರಮಟ್ಟದ ಇನ್‌ಸ್ಪೈರ್‌ ಅವಾರ್ಡ್‌ಗೆ ದೇಶದ 60 ವಿಜ್ಞಾನ ಮಾದರಿಗಳು ಆಯ್ಕೆಯಾಗಿದ್ದವು. ಇದರಲ್ಲಿ ಕರ್ನಾಟಕದಐದು ಮಾದರಿಗಳು ಪಾಲ್ಗೊಂಡಿದ್ದವು. ಜಿಲ್ಲೆಯ ‘ಭೀಮ ಸಲಗ’ಕ್ಕೆ 28ನೇ ಸ್ಥಾನ ಲಭಿಸಿದೆ.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದವಿದ್ಯಾರ್ಥಿ ದೇವೇಂದ್ರ ಬಿ.ಬಿರಾದಾರ, ಶಾಲೆಯ ವಿಜ್ಞಾನ ಶಿಕ್ಷಕಿ ಶಶಿಕಲಾ ಬಡಿಗೇರ ಅವರ ಮಾರ್ಗದರ್ಶನ ಮತ್ತು ಸಹಕಾರದಿಂದ ಕೇವಲ ₹ 25ಸಾವಿರ ವೆಚ್ಚದಲ್ಲಿ‘ಭೀಮ ಸಲಗ’ ಕೃಷಿ ಯಂತ್ರವನ್ನು ತಯಾರಿಸಿದ್ದೇವೆ ಎಂದರು.

ವಿದ್ಯುತ್‌ ಬ್ಯಾಟರಿ ಚಾಲಿತ ಈ ಯಂತ್ರಕ್ಕೆ ಬೇಕಾದರೆ ಸೋಲಾರ್‌ ಪವರ್‌ ಅಥವಾ ಡೀಸೆಲ್‌ ಬಳಕೆ ಮಾಡಲು ಅವಕಾಶವಿದೆ ಎಂದು ಹೇಳಿದರು.

‘ಭೀಮ ಸಲಗ’ಕ್ಕೆ ಇನ್‌ಸ್ಪೈರ್‌ ಅವಾರ್ಡ್‌ ಬಂದಿದೆ.ಮುಂದೆ ಈ ಸಾಧನಕ್ಕೆ ಪೇಟೆಂಟ್ ಪಡೆದು ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದಿಸಿ ಮಾರುಕಟ್ಟೆಯಲ್ಲಿ ರೈತರಿಗೆ ಕಡಿಮೆ ಬೆಲೆಯಲ್ಲಿ ಸಿಗುವಂತೆ ಮಾಡಿ, ರೈತನ ಬಾಳು ಹಸನಾಗಿಸುವಂತೆ ಮಾಡುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.

ಪ್ರಸಕ್ತ ದಿನಗಳಲ್ಲಿ ಕೃಷಿಗೆ ಕೂಲಿಕಾರ್ಮಿಕರು ಸಿಗದೇ ಕೃಷಿ ಚಟುವಟಿಕೆಗಳಿಗೆ ಹಿನ್ನೆಡೆಯಾಗಿದೆ. ಟ್ರ್ಯಾಕ್ಟರ್‌, ಟಿಲ್ಲರ್‌ಗಳಿದ್ದರೂ ಸಣ್ಣ ಮತ್ತು ಮಧ್ಯಮ ರೈತರಿಗೆ ಕೈಗೆಟುಕದ ಸ್ಥಿತಿ ಇದೆ. ಇದನ್ನು ಮನಗಂಡು ‘ಭೀಮ ಸಲಗ’ ಯಂತ್ರವನ್ನು ಶೋಧಿಸಲಾಗಿದೆ.ಇದರಿಂದ ಕೃಷಿಯಲ್ಲಿ ರೈತನಿಗೆ ಶ್ರಮ ಕಡಿಮೆಗೊಳಿಸುವ ಸಾಧನವಾಗಿದೆ ಎಂದು ತಿಳಿಸಿದರು.

ಹಳ್ಳಿ ಪ್ರದೇಶದ ವಿದ್ಯಾರ್ಥಿಗಳ ಸಾಧನೆಯನ್ನು ಮೆಚ್ಚಿ ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತ ಮೇಜರ್‌ ಸಿದ್ದಲಿಂಗಯ್ಯ ಹಿರೇಮಠ ಅವರು ದೂರವಾಣಿ ಕರೆ ಮಾಡಿ,ವಿದ್ಯಾರ್ಥಿಗಳಿಗೆ ಹಾಗೂ ಮಾರ್ಗದರ್ಶಿ ಶಿಕ್ಷಕಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ವಿದ್ಯಾರ್ಥಿ ದೇವೇಂದ್ರ ಬಿ.ಬಿರಾದಾರ ಸದ್ಯ ಹೊರ್ತಿ ಸರ್ವೋದಯ ಪಿಯು ಸೈನ್ಸ್‌ ಅಂಡ್‌ ಕಾಮರ್ಸ್‌ ಕಾಲೇಜಿನಲ್ಲಿ ದ್ವಿತೀಯ ಪಿಯು ಹಾಗೂಕಾರ್ತಿಕ್‌ ನರಳೆ ವಿಜಯಪುರದ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೊಮಾ ಕಲಿಯುತ್ತಿದ್ದಾರೆ.

***

ನಾವು ತಯಾರಿಸಿದ ಕೃಷಿ ಯಂತ್ರಕ್ಕೆ ರಾಷ್ಟ್ರಮಟ್ಟದಲ್ಲಿ ಸ್ಥಾನ ಲಭಿಸುತ್ತದೆ ಎಂಬ ನಿರೀಕ್ಷೆ ಇರಲಿಲ್ಲ. ಆದರೆ, ಪ್ರಮಾಣಿಕ ಪ್ರಯತ್ನ ಮಾಡಿದ್ದಕ್ಕೆ ಪ್ರತಿಫಲ ಲಭಿಸಿರುವುದಕ್ಕೆ ಸಂತಸವಾಗಿದೆ
–ದೇವೇಂದ್ರ ಬಿ.ಬಿರಾದಾರ, ವಿದ್ಯಾರ್ಥಿ

***

ನಾದ ಕೆ.ಡಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು, ಶಿಕ್ಷಕರ ಶ್ರಮ ಶ್ಲಾಘನೀಯ. ಇದು ಇತರೆ ಶಿಕ್ಷಕರಿಗೆ ಮಾದರಿಯಾಗಿದೆ. ಶೀಘ್ರದಲ್ಲೇ ಶಾಲೆಗೆ ಭೇಟಿ ನೀಡಿ ಅಭಿನಂದನೆ ಸಲ್ಲಿಸುತ್ತೇನೆ

ಮೇಜರ್‌ ಸಿದ್ದಲಿಂಗಯ್ಯ ಹಿರೇಮಠ, ಹೆಚ್ಚುವರಿ ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ, ಧಾರವಾಡ

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT