ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂದಗಿ ಬರಡು ನೆಲ ಹಸಿರಾಗಿಸಿದ್ದು ಜೆಡಿಎಸ್‌: ಎಚ್‌.ಡಿ.ಕುಮಾರಸ್ವಾಮಿ

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ
Last Updated 20 ಅಕ್ಟೋಬರ್ 2021, 17:16 IST
ಅಕ್ಷರ ಗಾತ್ರ

ವಿಜಯಪುರ: ಸಿಂದಗಿ ತಾಲ್ಲೂಕಿನ ಬರಡು ನೆಲವನ್ನು ಹಸಿರಾಗಲು ದೇವೇಗೌಡರ ಕೊಡುಗೆ ಅಪಾರ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಚಾಂದಕವಠೆಯಲ್ಲಿ ಬುಧವಾರ ಜೆಡಿಎಸ್‌ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇವೇಗೌಡರ ಅವಧಿಯಲ್ಲಿ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಅನುಷ್ಠಾನ ಮಾಡಿದ ಪರಿಣಾಮ ಈ ಭಾಗದ ರೈತರು ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ ಎಂದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ಸಿಂದಗಿ ತಾಲ್ಲೂಕಿನ 21 ಸಾವಿರ ರೈತ ಕುಟುಂಬದ ₹ 135 ಕೋಟಿ ಸಾಲ ಮನ್ನಾ ಆಗಿದೆ. ಪ್ರತಿ ಕುಟುಂಬದವರು ಮೂರು ಮತ ಹಾಕಿದರೂ ಸಾಕು ನಮ್ಮ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ಹೇಳಿದರು.

ಬಿಜೆಪಿ, ಕಾಂಗ್ರೆಸ್‌ ಪಕ್ಷದವರಂತೆ ಬೃಹತ್‌ ಸಮಾವೇಶ ನಡೆಸಿ, ಭಾಷಣ ಮಾಡಿ ಹೋಗುವ ಬದಲು, ಕ್ಷೇತ್ರದ ಹಳ್ಳಿ, ಹಳ್ಳಿಗೆ ಭೇಟಿ ನೀಡಿ ಹಳ್ಳಿಗಳ ವಾಸ್ತವವನ್ನು ಅರ್ಥಮಾಡಿಕೊಳ್ಳುತ್ತಿದ್ದೇನೆ. ಈ ಸಮಸ್ಯೆಗಳಿಗೆ ಮುಂದಿನ ದಿನಗಳಲ್ಲಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕ್ಷೇತ್ರಕ್ಕೆ ₹ 1200 ಕೋಟಿ ಅನುದಾನ ನೀಡಲಾಗಿತ್ತು. ಆದರೆ, ಕ್ಷೇತ್ರದ ಹದಗೆಟ್ಟ ರಸ್ತೆಗಳು, ಒಳಚರಂಡಿ ವ್ಯವಸ್ಥೆ ಇಲ್ಲದೇ ರಸ್ತೆ ಮೇಲೆ ತ್ಯಾಜ್ಯ ನೀರು ಹರಿಯುತ್ತಿರುವುದನ್ನು ಕಂಡರೆ ಬೇಸರದಿಂದ ತಲೆ ತಗ್ಗಿಸುವಂತಾಗುತ್ತದೆ. ನಮ್ಮ ಸರ್ಕಾರದ ಅವಧಿಯಲ್ಲಿ ನೀಡಿದ್ದ ಸಾವಿರಾರು ಕೋಟಿ ಆನುದಾನ ಎಲ್ಲಿಗೆ ಹೋಯಿತು ಎಂದು ಅವರು ಪ್ರಶ್ನಿಸಿದರು.

2023ರ ಚುನಾವನೆಯಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ’ಪಂಚರತ್ನ‘ ಯೋಜನೆಗಳನ್ನು ಜಾರಿಗೆ ತರಲಾಗುವುದು. ಎಲ್ಲ ಸಮಾಜದವರಿಗೆ ಉಚಿತ ಮನೆ, ರೈತರು ಉಚಿತ ಬೀಜ, ಗೊಬ್ಬರ, ನರ್ಸರಿಯಿಂದ 12ನೇ ತರಗತಿ ವರೆಗೆ ಉಚಿತ ಶಿಕ್ಷಣ ಹಾಗೂ ಪ್ರತಿ ಗ್ರಾಮ ಪಂಚಾಯ್ತಿಗೆ ಒಂದು 30 ಬೆಡ್ ಸೌಲಭ್ಯವಿರುವ ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಜೆಡಿಎಸ್‌ ಅಭ್ಯರ್ಥಿ ನಾಜಿಯಾ ಅಂಗಡಿ, ಜೆಡಿಎಸ್‌ ಅಧಿಕಾರವಧಿಯಲ್ಲಿ ಸಿಂದಗಿ ಕ್ಷೇತ್ರ ಸಂಪೂರ್ಣ ನೀರಾವರಿಯಾಗಿದೆ. ಆಲಮೇಲ ಹೊಸ ತಾಲ್ಲೂಕು ಆಗಿದೆ. ಆಲಮೇಲಕ್ಕೆ ತೋಟಗಾರಿಕೆ ಕಾಲೇಜು ಮಂಜೂರು ಆಗಿದೆ ಎಂದು ಸ್ಮರಿಸಿದರು.

ಮಾಜಿ ಸಚಿವ ಬಂಡೆಪ್ಪ ಕಾಂಶಪುರ ಮಾತನಾಡಿ, ಕಾಂಗ್ರೆಸ್‌, ಜೆಡಿಎಸ್‌ ಉದ್ರಿ ಪಕ್ಷಗಳು. ಜೆಡಿಎಸ್‌ ಮಾತ್ರ ನಗದು ಪಕ್ಷ ಎಂದು ಹೇಳಿದರು.

ಜೆಡಿಎಸ್‌ ಮುಖಂಡರಾದ ಗೊಲ್ಲಾಳಪ್ಪಗೌಡ ಪಾಟೀಲ, ಗುರುರಾಜಗೌಡ ಪಾಟೀಲ, ಕೇದಾರ ಲಿಂಗಯ್ಯ, ಬಿ.ಡಿ.ಪಾಟೀಲ ಇದ್ದಾರೆ.

****

ಇಂಡಿ, ನಾಗಠಾಣ ಕ್ಷೇತ್ರದ 28 ಸಾವಿರ ಹೆಕ್ಟೆರ್‌ ಭೂಮಿಗೆ ನೀರು ಪೂರೈಸುವ ರೇವಣ ಸಿದ್ದೇಶ್ವರ ಏತ ನೀರಾವರಿ ಅನುಷ್ಠಾನಕ್ಕೆ ₹ 250 ಕೋಟಿ ಅನುದಾನ ನೀಡಿದೆ. ಆದರೆ, ಬಿಜೆಪಿ ಸರ್ಕಾರ ಅನುದಾನ ತಡೆಹಿಡಿದಿದೆ

–ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT