ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ಕೋವಿಡ್‌ ಉಲ್ಬಣ: ಒಂದೇ ದಿನ 53 ಜನರಿಗೆ ಸೋಂಕು

ಗುಮ್ಮಟನಗರ ವಿಜಯಪುರಕ್ಕೆ ಕೊರೊನಾಘಾತ
Last Updated 5 ಜೂನ್ 2020, 15:52 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್‌ ಸೋಂಕು ಉಲ್ಭಣಗೊಳ್ಳತೊಡಗಿದೆ. ಶುಕ್ರವಾರ ಒಂದೇ ದಿನ 53 ಜನರಲ್ಲಿ ಕೋವಿಡ್‌ ಸೋಂಕು ದೃಢಪಟ್ಟಿದ್ದು, ಆತಂಕ ಮೂಡಿಸಿದೆ.

ಕಂಟೈನ್ಮೆಂಟ್‌ ಪ್ರದೇಶದ ಸಂಪರ್ಕದಿಂದ 14 ಜನರಿಗೆ, ದೆಹಲಿ ಸಂಪರ್ಕದಿಂದ ಮೂವರಿಗೆ ಹಾಗೂ ಇನ್ನುಳಿದ 36 ಜನರಿಗೆ ಮಹಾರಾಷ್ಟ್ರದ ಮುಂಬೈ ಸಂಪರ್ಕದಿಂದ ಸೋಂಕು ತಗುಲಿದೆ. ಇದರಲ್ಲಿ ನಾಲ್ವರು ಬಾಲಕಿಯರು ಮತ್ತು ಇಬ್ಬರು ಬಾಲಕರು ಸೇರಿದ್ದಾರೆ.

ಕೊರೊನಾ ವಾರಿಯರ್ಸ್‌ಗೆ ಸೋಂಕು: ಕಂಟೈನ್ಮೆಂಟ್‌ ಜೋನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಆಶಾ ಕಾರ್ಯಕರ್ತೆಯರಿಗೆ ಸೋಂಕು ತಗುಲಿದೆ. ಅಲ್ಲದೇ, ಕಂಟೈನ್ಮೆಂಟ್‌ ಜೋನ್‌ ನಿವಾಸಿ ಅಂಗನವಾಡಿ ಕಾರ್ಯಕರ್ತೆಯೊಬ್ಬರಿಗೂ ಸೋಂಕು ತಗುಲಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 187ಕ್ಕೆ ಏರಿಕೆಯಾಗಿದೆ. ಈಗಾಗಲೇ 5 ಜನ ಕೋವಿಡ್‌ ಸೋಂಕಿನಿಂದ ಸಾವಿಗೀಡಾಗಿದ್ದಾರೆ. 65 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ದಿನದಿಂದ ದಿನಕ್ಕೆ ಸೋಂಕು ವ್ಯಾಪಿಸುತ್ತಿರುವುದು ಜಿಲ್ಲೆಯ ಜನರನ್ನು ಆತಂಕಕ್ಕೆ ದೂಡಿದೆ. ಮಹಾರಾಷ್ಟ್ರದಿಂದ ಬಂದವರಲ್ಲೇ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿರುವುದು ಜಿಲ್ಲೆಯ ಜನರನ್ನು ಅಲ್ಪ ನಿರಾಳವಾಗಿಸಿದೆ.

ಮಾಹಿತಿ ನೀಡಲು ಮನವಿ: ಜಿಲ್ಲೆಯಲ್ಲಿ ಯಾರಿಗಾದರೂ ಶೀತ, ಜ್ವರ, ಕೆಮ್ಮು, ಉಸಿರಾಟ ತೊಂದರೆ ಸೇರಿದಂತೆ ಕೊರೊನಾ ಲಕ್ಷಣಗಳು ಕಂಡುಬಂದರೆ ತಕ್ಷಣ ಜಿಲ್ಲಾಡಳಿತವನ್ನು ಸಂಪರ್ಕಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ಕಂಟೈನ್ಮೆಂಟ್‌ ಪ್ರದೇಶಗಳಿಗೆ ಈಗಾಗಲೇ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರೊಂದಿಗೆ ಭೇಟಿ ನೀಡಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯೊಂದಿಗೆ ಚರ್ಚಿಸುತ್ತಿದ್ದೇವೆ. ಅವರ ಮತ್ತು ಅಲ್ಲಿಯ ಜನರ ಕುಂದುಕೊರತೆ ಆಲಿಸಿ, ಸಮಸ್ಯೆಗಳ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT