ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲ್ಹಾರ: ಶಿಥಿಲಾವಸ್ಥೆ ಕಟ್ಟಡಗಳು, ಸಮಸ್ಯೆಗಳ ಸಾಗರ ಹಣಮಾಪುರ

Last Updated 31 ಜನವರಿ 2023, 19:30 IST
ಅಕ್ಷರ ಗಾತ್ರ

ಕೊಲ್ಹಾರ: ಗ್ರಾಮದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೇ ಮನೆಗಳ ಮುಂದೆ, ಕುಡಿಯುವ ನೀರಿನ ಘಟಕದ ಮುಂದೆ, ರಸ್ತೆಗಳುದ್ದಕ್ಕೂ ಎಲ್ಲೆಂದರಲ್ಲಿ ನಿಂತ ಕೊಳಚೆ ನೀರು. ಮಳೆ ಬಂದರೆ ಸೋರುವ ಸರ್ಕಾರಿ ಶಾಲೆ, ಅಂಗವಾಡಿ ಕಟ್ಟಡಗಳು, ಉಪ ಆರೋಗ್ಯ ಕೇಂದ್ರ ಕಟ್ಟಡ ಶಿಥಿಲಾವಸ್ಥೆ. ಹೀಗೆ ಹಲವಾರು ಸಮಸ್ಯೆಗಳ ಸಾಗರದಲ್ಲಿ ಸಿಲುಕಿರುವುದು ತಾಲ್ಲೂಕಿನ ಹಣಮಾಪೂರ ಗ್ರಾಮ.

ಸುಮಾರು ಎರಡೂವರೇ ಸಾವಿರ ಜನಸಂಖ್ಯೆ ಹೊಂದಿರುವ ತಾಲ್ಲೂಕಿನ ಹಣಮಾಪುರ ಗ್ರಾಮ ಪಂಚಾಯ್ತಿ ಕೇಂದ್ರ ಸ್ಥಾನ. ಚರಂಡಿ ಅವ್ಯವಸ್ಥೆಯಿಂದ ಗ್ರಾಮದ ರಸ್ತೆಗಳಲ್ಲಿ, ಮನೆಗಳ ಮುಂದೆ ಕೊಳಚೆ ನೀರು ಹರಿಯುತ್ತಿದ್ದು, ದುರ್ವಾಸನೆ ಹಬ್ಬಿ ಗ್ರಾಮದಲ್ಲಿ ಸಾಂಕ್ರಾಮಿಕ ರೋಗದ ಭೀತಿ ಹುಟ್ಟಿಸಿದೆ.

ಜಲಜೀವನ್ ಮಿಷನ್ ಕಾಮಗಾರಿ ಕಳಪೆ ಗುಣಮಟ್ಟ ಹಾಗೂ ಅಪೂರ್ಣವಾಗಿದೆ ಎಂಬ ಆರೋಪವಿದ್ದು, ಇನ್ನೂ ಸಾಕಷ್ಟು ಮನೆಗಳಿಗೆ ನಳ ಸಂಪರ್ಕ ಕಲ್ಪಿಸಿಲ್ಲ. ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದಡಿಯಲ್ಲಿ ಕೊಳಚೆ ನೀರು ಹರಿಯುತ್ತಿದ್ದು, ರಾತ್ರಿ ಹೊತ್ತು ಕೆಲವರು ಪಕ್ಕದಲ್ಲೇ ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ಸುತ್ತಲೂ ಮಲಿನತೆ ಉಂಟಾಗಿದೆ.

ಗ್ರಾಮದಲ್ಲಿ 250 ವಿದ್ಯಾರ್ಥಿಗಳಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳಲ್ಲೇ ಮಕ್ಕಳು ಪಾಠ ಕಲಿಯುವಂತಾಗಿದೆ. ಸದ್ಯ 6 ಕೊಠಡಿಗಳಿದ್ದು, ಇನ್ನೂ ಮೂರು ಕೊಠಡಿಗಳು ಅತಿ ಅವಶ್ಯವಾಗಿದೆ.

ಶಾಲೆ ಹಿಂಬದಿಯಲ್ಲೇ ನಿರ್ಮಿಸಲಾಗುತ್ತಿರುವ ಬಿಸಿಯೂಟದ ಕೋಣೆ ಹಾಗೂ ಶಾಲಾ ಕಂಪೌಂಡ್ ಸಹ ಅಪೂರ್ಣವಾಗಿದೆ. ಶಾಲಾ ಮೈದಾನದಲ್ಲಿ ಗ್ರಾಮ ಪಂಚಾಯ್ತಿಯಿಂದ ವಾಲಿಬಾಲ್, ಕಬಡ್ಡಿ ಹಾಗೂ ಕೊಕ್ಕೊ ಅಂಕಣಗಳನ್ನು ನಿರ್ಮಿಸಲು ಮೈದಾನ ತೋಡಿ ತಿಂಗಳಿಂದ ಹಾಗೇ ಬಿಟ್ಟಿರುವ ಕಾರಣ ಅಲ್ಲಿಯೂ ಕಿರುಕಾಲುವೆ ನೀರು ಸಂಗ್ರಹಗೊಂಡಿದೆ. ಇದರಿಂದ ಮಕ್ಕಳಿಗೆ ಆಟದ ಮೈದಾನವಿದ್ದರೂ ಇಲ್ಲದಂತಾಗಿದೆ.

ಹೆಗ್ಗಣಗಳ ಕಾಟ: ಗ್ರಾಮದಲ್ಲಿ ಎರಡು ಅಂಗನವಾಡಿ ಕೇಂದ್ರಗಳಿದ್ದು, ತಗ್ಗು ಪ್ರದೇಶದಲ್ಲಿ ಪೂರ್ಣ ಶಿಥಿಲಗೊಂಡಿರುವ ಅಂಗನವಾಡಿ ಕೇಂದ್ರ 1ರಲ್ಲಿ ಹೆಗ್ಗಣಗಳ ಕಾಟ ತೀವ್ರವಾಗಿ ಮಕ್ಕಳು ಕೂರುವ ನೆಲ, ಆಹಾರ ಪದಾರ್ಥ ಹಾಗೂ ಕಲಿಕಾ ಪುಸ್ತಕಗಳು ಹಾಳಾಗಿವೆ.

ಶೌಚಾಲಯವಂತೂ ಇಲ್ಲವೇ ಇಲ್ಲ, ಸುತ್ತಲೂ ಮುಳ್ಳುಕಂಟಿಗಳು ಬೆಳೆದಿವೆ. ಪಕ್ಕದಲ್ಲೇ ನಾಲ್ಕು ಗ್ರಾಮಗಳ ವ್ಯಾಪ್ತಿಗೆ ಬರುವ ಉಪ ಆರೋಗ್ಯ ಕೇಂದ್ರವಿದ್ದು, ನೀರಿನ ಸಂಪರ್ಕ ಹಾಗೂ ಶೌಚಾಲಯವಿಲ್ಲದೇ ವೈದ್ಯಕೀಯ ಸಿಬ್ಬಂದಿ ಮತ್ತು ಬರುವ ರೋಗಿಗಳು ಪರದಾಡುವ ಪರಿಸ್ಥಿತಿ ಇದೆ. ಮಳೆಗಾಲದಲ್ಲಿ ಅಂಗನವಾಡಿ ಹಾಗೂ ಆರೋಗ್ಯ ಕೇಂದ್ರ ಕಟ್ಟಡಗಳು ಪೂರ್ಣ ಜಲಾವೃತವಾಗುತ್ತವೆ.

ಗ್ರಾ.ಪಂ ಪಕ್ಕದಲ್ಲೇ ಸುಮಾರು ₹ 28 ಲಕ್ಷ ವೆಚ್ಚದಲ್ಲಿ ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡ ನಿರ್ಮಿಸಲಾಗುತ್ತಿದ್ದು, ಕಳೆದೆರಡು ವರ್ಷಗಳಿಂದ ಕಾಮಗಾರಿ ಸ್ಥಗಿತವಾಗಿದೆ.

ಸಾರ್ವಜನಿಕ ಸಮಸ್ಯೆಗಳನ್ನು ಹೇಳಿಕೊಳ್ಳಲು ಗ್ರಾ.ಪಂ.ಗೆ ಹೋದರೆ ಪಿಡಿಒ ಪ್ರತಿದಿನ ಲಭ್ಯವಿರುವುದಿಲ್ಲ.ಅಲ್ಲದೇ, ಸಂಪರ್ಕಕ್ಕೂ ಸಿಗುವುದಿಲ್ಲ. ಗ್ರಾಮದ ಜ್ವಲಂತ ಸಮಸ್ಯೆಗಳ ಕುರಿತು ಬಳೂತಿಯ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಡಿಸಿಯವರ ಗಮನಕ್ಕೆ ತಂದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಗ್ರಾಮದ ಹಿರಿಯರಾದ ಸಗರೆಪ್ಪ ಮುರನಾಳ, ಭೀಮಪ್ಪ ಹೊನ್ಯಾಳ ಹಾಗೂ ನಾಗನಗೌಡ ಬಿರಾದಾರ ಬೇಸರ ವ್ಯಕ್ತಪಡಿಸುತ್ತಾರೆ.

ಪಾಳುಬಿದ್ದ ಕಟ್ಟಡದಲ್ಲೇ ಅಂಗವಾಡಿ
ಪಾಳು ಬಿದ್ದಿರುವ ಹಣಮಾಪುರ ಗ್ರಾಮದ ಹಳೆ ಸರ್ಕಾರಿ ಶಾಲಾ ಕಟ್ಟಡದಲ್ಲೇ ಒಂದು ಅಂಗನವಾಡಿ ಕೇಂದ್ರ ಮತ್ತು ಗ್ರಂಥಾಲಯವಿದ್ದು, ಯಾವುದೇ ವ್ಯವಸ್ಥೆ ಇಲ್ಲ. ಹೆಸರಿಗಷ್ಟೇ

ಗ್ರಂಥಾಲವಿದ್ದು, ವಿದ್ಯುತ್ ಸಂಪರ್ಕವಿಲ್ಲದ ಕಾರಣ ಬಳಕೆಯಾಗುತ್ತಿಲ್ಲ. ಗ್ರಾಮದಲ್ಲಿ ಸರ್ಕಾರಿ ಜಾಗದ ಕೊರತೆಯಿದ್ದು, ಏಳೆಂಟು ಕೋಣೆಗಳಿರುವ ಶಿಕ್ಷಣ ಇಲಾಖೆಯ ಈ ಕಟ್ಟಡ ದುರಸ್ತಿಗೊಳಿಸಿದರೆ ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ, ಬಾಡಿಗೆ ಜಾಗದಲ್ಲಿರುವ ಅಂಚೆ ಕಚೇರಿಗೆ ಸೇರಿ ಹಲವು ಸರ್ಕಾರಿ ಕಚೇರಿಗಳಿಗೆ ಸ್ಥಳಾವಕಾಶ ಸಿಕ್ಕಂತಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT