ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಂ.ಬಿ.ಪಾಟೀಲ ತಮ್ಮ ಸುತ್ತಲಿನವರನ್ನು ದೂರ ಇಡಲಿ: ಯತ್ನಾಳ ಸಲಹೆ

ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಲಹೆ
Published 18 ಜೂನ್ 2024, 15:22 IST
Last Updated 18 ಜೂನ್ 2024, 15:22 IST
ಅಕ್ಷರ ಗಾತ್ರ

ವಿಜಯಪುರ: ‘ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ತಮ್ಮ ಸುತ್ತಮುತ್ತ ಇರುವವರನ್ನು ಆದಷ್ಟು ದೂರ ಇಡಬೇಕು, ಇಲ್ಲವಾದರೆ ಅವರ ಹೆಸರು ಸಂಪೂರ್ಣ ಹಾಳಾಗಲಿದೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಲಹೆ ನೀಡಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಿಲ್ಲಾ ಉಸ್ತುವಾರಿ ಸಚಿವರ ಸುತ್ತಮುತ್ತ ಭೂ ಮಾಫಿಯಾದವರು ಸೇರಿಕೊಂಡಿದ್ದಾರೆ. ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಅಮಾಯಕ ಜನರ ಆಸ್ತಿಯನ್ನು ಲಪಟಾಯಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ನಗರದ ಜನರು ತಿಂಗಳಿಗೊಮ್ಮೆಯಾದರೂ ಸಿಟಿ ಸರ್ವೆ ಆಫೀಸಿಗೆ ತೆರಳಿ ತಮ್ಮ ಆಸ್ತಿ, ನಿವೇಶನದ ಉತಾರೆ ಪರಿಶೀಲಿಸಿಕೊಳ್ಳಬೇಕು. ಇಲ್ಲವಾದರೆ ನಿಮ್ಮ ಆಸ್ತಿ ಬೇರೆಯರ ಪಾಲಾಗಲಿದೆ’ ಎಂದು ಎಚ್ಚರಿಕೆ ನೀಡಿದರು.

ಮೂರು ತಿಂಗಳಲ್ಲಿ ಕಾಂಗ್ರೆಸ್ ಶಾಸಕರು ಬಂಡಾಯ ಏಳಲಿದ್ದು ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಪಥನವಾಗಲಿದೆ.
ಬಸನಗೌಡ ಪಾಟೀಲ ಯತ್ನಾಳ, ಶಾಸಕ

‘ಸುಳ್ಳು ದಾಖಲೆ ಸೃಷ್ಟಿಸಿ ಭೂಮಿಯನ್ನು ಕಬಳಿಸುತ್ತಿರುವವರ ಪತ್ತೆಗೆ ಸಚಿವರು ತಕ್ಷಣ ತನಿಖಾ ತಂಡ ರಚನೆ ಮಾಡಬೇಕು, ಇಂತಹ ಘಟನೆಗಳು ಆಗದಂತೆ ಎಚ್ಚರ ವಹಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಶಾಸಕರು ಅಸಮಾಧಾನ:

‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಯಾವುದೇ ಸಚಿವ, ಶಾಸಕರ ಕ್ಷೇತ್ರಕ್ಕೆ ನಯಾ ಪೈಸೆ ಅನುದಾನ ನೀಡಿಲ್ಲ. ಈ ಕಾರಣಕ್ಕೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಜಿಲ್ಲೆಯ ಕಾಂಗ್ರೆಸ್‌ ಶಾಸಕರು ತೀವ್ರ ಅಸಮಾಧಾನಗೊಂಡಿದ್ದಾರೆ. ಗ್ಯಾರಂಟಿ ಬೇಡ, ಅಭಿವೃದ್ಧಿಗೆ ಹಣ ಕೊಡಿ ಎಂದು ಅನೇಕ ಶಾಸಕರು ಮುಖ್ಯಮಂತ್ರಿಗೆ ಬೇಡಿಕೆ ಇಟ್ಟಿದ್ದಾರೆ’ ಎಂದರು.

‘ಬಬಲೇಶ್ವರ ಕ್ಷೇತ್ರದ ಅಭಿವೃದ್ಧಿಗೆ ಎಷ್ಟು ಕೋಟಿ ಅನುದಾನವನ್ನು ತಂದಿದ್ದಾರೆ ಎಂಬುದಕ್ಕೆ ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರು ಉತ್ತರಿಸಲಿ?’ ಎಂದು ಹೇಳಿದರು.

‘17 ಬಜೆಟ್‌ ಮಂಡನೆ ಮಾಡಿರುವ ಸಿದ್ದರಾಮಯ್ಯ ಅವರು ಹೀಗೆ ಗ್ಯಾರಂಟಿ ಯೋಜನೆ ಕೊಡುತ್ತಾ ಹೋದರೆ ಸರ್ಕಾರ ಸಂಪೂರ್ಣ ದಿವಾಳಿಯಾಗಲಿದೆ. ನೌಕರರಿಗೆ ವೇತನ ಕೊಡಲು ಸಾಧ್ಯವಾಗದ ಸ್ಥಿತಿ ತಲುಪಲಿದೆ’ ಎಂದು ಟೀಕಿಸಿದರು.

‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಹಲ್ಲೆ, ಚಾಕು, ಚೂರಿ ಇರಿತ, ದೇಶದ್ರೋಹಿ ಘೋಷಣೆ ಕೂಗುವವರ ಸಂಖ್ಯೆ ಹೆಚ್ಚಾಗಿದೆ. ಗೃಹ ಸಚಿವರು ಸಂಪೂರ್ಣ ವಿಫಲರಾಗಿದ್ದಾರೆ. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.

‘ಮುಖ್ಯಮಂತ್ರಿ ಆಗುವ ಅರ್ಹತೆ ಇರುವ ಡಾ.ಜಿ. ಪರಮೇಶ್ವರ ಅವರನ್ನು ಗೃಹ ಸಚಿವರನ್ನಾಗಿ ಮಾಡುವ ಮೂಲಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌  ಬಲಿಪಶು ಮಾಡಿದ್ದಾರೆ’ ಎಂದು ಆರೋಪಿಸಿದರು.

ಬಿಜೆಪಿ ಹಿನ್ನಡೆಗೆ ಕಾರಣ ತಿಳಿಸಿದ ಯತ್ನಾಳ

ಲೋಕಸಭೆ ಚುನಾವಣೆಯಲ್ಲಿ ವಿಜಯಪುರ ನಗರ ಕ್ಷೇತ್ರದಲ್ಲಿ ಬಿಜೆಪಿ ಹಿನ್ನಡೆಯಾಗಲು ಕಾರಣ ಕುರಿತು ಮಾತನಾಡಿದ ಯತ್ನಾಳ  ‘ಕಾಂಗ್ರೆಸ್‌ನ ರಾಜು ಆಲಗೂರ ಸ್ಥಳೀಯರಾಗಿದ್ದ ಕಾರಣಕ್ಕೆ ವಿಜಯಪುರ ನಗರದಲ್ಲಿ ಲೀಡ್‌ ಸಿಕ್ಕಿದೆ. ವಿಧಾನಸಭೆ ಚುನಾವಣೆಯಲ್ಲಿ ಎಲ್ಲ ಎಸ್‌ಸಿ ಎಸ್‌ಟಿಗಳು ನನಗೆ ಮತ ಹಾಕಿದ್ದರು. ಆದರೆ ಈ ಚುನಾವಣೆಯಲ್ಲಿ ಎಸ್‌ಸಿ ಎಸ್‌ಟಿ ವೋಟ್‌ ಕಾಂಗ್ರೆಸ್‌ ಬಿಜೆಪಿ ನಡುವೆ ಹಂಚಿಹೋಗಿವೆ. ಜೊತೆಗೆ ತೊರವಿ ಮತ್ತು ಭೂತನಾಳ ತಾಂಡಾದಲ್ಲೂ ಕಾಂಗ್ರೆಸ್‌ಗೆ ಹೆಚ್ಚು ವೋಟ್‌ ಚಲಾವಣೆಯಾಗಿವೆ. ಈ ಕಾರಣಕ್ಕೆ ಕಾಂಗ್ರೆಸ್‌ಗೆ ಲೀಡ್‌ ಸಿಕ್ಕಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೇರೆ ಬೇರೆ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಜಿನಿಯರ್‌ ವೈದ್ಯರು ನೌಕರರು ಹೊರಗಿನಿಂದ ಬಂದು  ಮತ ಹಾಕಿದ್ದರು. ಆದರೆ ಲೋಕಸಭೆ ಚುನಾವಣೆಯಲ್ಲಿ ಅವರಾರೂ ಬಂದಿಲ್ಲ. ನಗರದಲ್ಲಿರುವ ಹಿಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ವೋಟ್‌ ಹಾಕಿಲ್ಲದ ಕಾರಣ ಬಿಜೆಪಿಗೆ ವಿಜಯಪುರ ನಗರ ಕ್ಷೇತ್ರದಲ್ಲಿ ಹಿನ್ನಡೆಯಾಗಿದೆ. ಹಾಗಂತ ಬಿಜೆಪಿಗೆ ಭಾರೀ ಹಿನ್ನಡೆಯಾಗಿಲ್ಲ’ ಎಂದು ವಿಶ್ಲೇಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT