ಶನಿವಾರ, ಜುಲೈ 31, 2021
27 °C
ಹೋಂ ಕ್ವಾರಂಟೈನ್‌ ಉಲ್ಲಂಘಿಸಿದರೆ ಶಿಸ್ತುಕ್ರಮ: ಡಿಸಿ ಎಚ್ಚರಿಕೆ

ಮುಂಬೈನಿಂದ ಜಿಲ್ಲೆಗೆ 210 ಕಾರ್ಮಿಕರ ಆಗಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಮುಂಬೈನಿಂದ ರೈಲಿನ ಮೂಲಕ ಜಿಲ್ಲೆಗೆ 210 ಜನ ವಲಸೆ ಕಾರ್ಮಿಕರು ಮಂಗಳವಾರ ಆಗಮಿಸಿದರು.

ವಿಜಯಪುರದ 95, ಇಂಡಿ ತಾಲ್ಲೂಕಿನ 40, ಸಿಂದಗಿ ತಾಲ್ಲೂಕಿನ 28, ಮುದ್ದೇಬಿಹಾಳ ತಾಲ್ಲೂಕಿನ 18 ಹಾಗೂ ಬಸವನಬಾಗೇವಾಡಿ ತಾಲ್ಲೂಕಿನ 29 ಜನರನ್ನು ಬಸ್‌ಗಳ ಮೂಲಕ ಅವರವರ ಗ್ರಾಮಗಳಿಗೆ ಕಳುಹಿಸಲಾಯಿತು.

ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಮುಂಬೈಯಿಂದ ಜಿಲ್ಲೆಗೆ ರೈಲಿನ ಮೂಲಕ ಬಂದಿರುವ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿ, ಆಯಾ ತಾಲ್ಲೂಕಿನಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುವುದು ಎಂದರು.

ಏಳು ದಿನಗಳ ಸಾಂಸ್ಥಿಕ ಕ್ವಾರಂಟೈನ್ ಸಂದರ್ಭದಲ್ಲಿ ಯಾರಿಗಾದರು ಲಕ್ಷಣಗಳು ಕಂಡುಬಂದರೆ ಅಂತವರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಲಾಗುವುದು ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು. ಲಕ್ಷಣಗಳು ಕಂಡು ಬರದೇ ಇರುವವರು ಏಳು ದಿನ ಸಾಂಸ್ಥಿಕ ಕ್ವಾರಂಟೈನ್ ಪೂರ್ಣಗೊಂಡ ನಂತರ ಅವರನ್ನು ಹೋಂಕ್ವಾರಂಟೈನ್ ಮಾಡಿ ನಿಗಾ ಇಡಲಾಗುವುದು ಎಂದರು.

ರೈಲಿನ ಮೂಲಕ ವಿಜಯಪುರ ಜಿಲ್ಲೆ ಸೇರಿದಂತೆ ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಯ ಜನರು ಆಗಮಿಸಿದ್ದು, ಅವರನ್ನು ಆಯಾ ಜಿಲ್ಲೆಗೆ ಕಳುಹಿಸಿಕೊಡಲು ಬಸ್ ವ್ಯವಸ್ಥೆ ಹಾಗೂ ಆಹಾರ ಕಿಟ್‍ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಶಿಸ್ತುಕ್ರಮ

ಮುಂಬೈ ಸೇರಿದಂತೆ ವಿವಿಧ ರಾಜ್ಯಗಳಿಂದ ಜಿಲ್ಲೆಗೆ ಬರುವವರಿಗೆ ಏಳು ದಿನ ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗುವುದು,  ಸಾಂಸ್ಥಿಕ ಕ್ವಾರಂಟೈನ್‌ ಮುಗಿದ ಬಳಿಕ ಬಿಡುಗಡೆ ಮಾಡಿ, ಏಳು ದಿನ ಹೋಂ ಕ್ವಾರಂಟೈನ್‌ ಕಡ್ಡಾಯ ಮಾಡಲಾಗುವುದು. ಈ ಸಂದರ್ಭದಲ್ಲಿ ಉಲ್ಲಂಘಿಸಿರುವುದು ಕಂಡುಬಂದರೆ ಅಂತವರ ವಿರುದ್ಧ ದೂರು ದಾಖಲಿಸಲಾಗುವುದು ಹಾಗೂ ಮರಳಿ ಅವರನ್ನು ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹೋಂ ಕ್ವಾರಂಟೈನ್‌ ಪರಿಶೀಲನೆಗಾಗಿ 12 ತಾಲ್ಲೂಕಿಗಳಿಗೂ ನೋಡೆಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು.

ಮಹಾರಾಷ್ಟ್ರದಿಂದ ಇದುವರೆಗೆ ಬಂದಿರುವ 21 ಸಾವಿರ ವಲಸೆ ಕಾರ್ಮಿಕರಲ್ಲಿ ಈಗಾಗಲೇ 17,500 ಜನರ ಗಂಟಲುದ್ರವ ಮಾದರಿ ವರದಿ ಬಂದಿದೆ. ಇನ್ನೂ 4,500 ಜನರ ವರದಿ ಬರುವುದು ಬಾಕಿ ಇದೆ. ಮಹಾರಾಷ್ಟ್ರದಿಂದ ಬಂದ 67 ಜನರಿಗೆ ಪಾಸಿಟಿವ್‌ ಬಂದಿದೆ ಎಂದು ತಿಳಿಸಿದರು.

16 ಸೀಲ್‌ಡೌನ್‌ ಪ್ರದೇಶ

ಜಿಲ್ಲೆಯ ವಿವಿಧೆಡೆ ಸೋಂಕು ವ್ಯಾ‍ಪಿಸಿದ್ದು, ಒಟ್ಟು 16 ಪ್ರದೇಶಗಳನ್ನು ಸೀಲ್‌ಡೌನ್‌ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ನಗರ ಅಥವಾ ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಸೋಂಕು ಕಂಡುಬಂದರೆ ಆ ಪ್ರದೇಶವನ್ನು ಮಾತ್ರ ಅಂದರೆ, ಓಣಿ ಅಥವಾ ವಾರ್ಡ್‌ ಅನ್ನು ಮಾತ್ರ ಸೀಲ್‌ಡೌನ್‌ ಮಾಡಲಾಗುವುದೇ ಹೊರತು ಇಡೀ ಗ್ರಾಮವನ್ನು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ, ವಿಜಯಪುರ ತಹಶೀಲ್ದಾರ್‌ ಮೋಹನ್‍ಕುಮಾರಿ, ವಿಜಯಪುರ ಉಪವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ಡಿ.ವೈ.ಎಸ್.ಪಿ ಲಕ್ಷೀನಾರಾಯಣ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು