ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಸ್ಥಾನದಲ್ಲಿ ಸರಿಸಮನಾಗಿ ಕುಳಿತಿದ್ದಕ್ಕೆ ಕೊಲೆ: ಆರೋಪ

ಹತ್ಯೆಯಾದ ಎಸ್ಸಿ ಯುವ ಮುಖಂಡನ ಶವವಿಟ್ಟು ಪ್ರತಿಭಟನೆ
Last Updated 27 ಆಗಸ್ಟ್ 2020, 16:38 IST
ಅಕ್ಷರ ಗಾತ್ರ

ಸಿಂದಗಿ(ವಿಜಯಪುರ): ‘ದೇವಸ್ಥಾನದ ಕಟ್ಟೆ ಮೇಲೆ ತಮಗೆ ಸರಿಸಮನಾಗಿ ಕುಳಿತಿದ್ದಾನೆ’ ಎಂಬ ಕಾರಣಕ್ಕೆ ಮೇಲ್ಜಾತಿಯವರಿಂದ ಹತ್ಯೆಗೀಡಾದ ಪರಿಶಿಷ್ಟ ಜಾತಿಯ ಯುವ ಮುಖಂಡಅನಿಲ ಇಂಗಳಗಿ (28)ಯ ಶವವಿಟ್ಟು ಪಟ್ಟಣದಲ್ಲಿ ಗುರುವಾರಪ್ರತಿಭಟನೆ ನಡೆಸಲಾಯಿತು.

ಬೂದಿಗಾಳ ಪಿ.ಎಚ್‌. ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ಕಟ್ಟೆಯ ಮೇಲೆಕೆಲವು ದಿನಗಳ ಹಿಂದೆ ಅನಿಲ ಇಂಗಳಗಿ ತಮಗೆ ಸರಿಸಮನಾಗಿ ಕುಳಿತಿದ್ದಕ್ಕೆ ಅದೇ ಗ್ರಾಮದ ಮೇಲ್ಜಾತಿಯ ಸಿದ್ದು ಸುಭಾಸ ಬಿರಾದಾರ ಎಂಬುವವರು ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ, ಜಾತಿಯ ಹೆಸರಲ್ಲಿ ಹೀಯಾಳಿಸಿದ್ದರು.

ಇದೇ ಕಾರಣಕ್ಕೆ ಆರೋಪಿ ಸಿದ್ದು, ಬುಧವಾರ ತನ್ನ ಸಂಬಂಧಿ ಸಂತೋಷ ಎಂಬಾತನ ಜತೆಗೂಡಿ ಅನಿಲ ಇಂಗಳಗಿ ಕಣ್ಣಿಗೆ ಕಾರದ ಪುಡಿ ಎರಚಿ, ಚೂರಿಯಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಸಿಂದಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ಹಿನ್ನೆಲೆಯಲ್ಲಿ ಎಸ್ಸಿ ಸಮುದಾಯದ ನೂರಾರು ಜನರು ಸಿಂದಗಿಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿ, ವಿಜಯಪುರ ಮುಖ್ಯ ರಸ್ತೆ ಸಂಪೂರ್ಣ ಬಂದ್ ಮಾಡಿ ಮಾನವ ಸರಪಳಿ ನಿರ್ಮಿಸಿದರು. ಅನಿಲ ಇಂಗಳಗಿ ಶವವನ್ನು ಇಟ್ಟು ಕೆಲಕಾಲ ರಸ್ತೆ ತಡೆ ನಡೆಸಿದರು.

ಮುಖಂಡರಾದ ಸಾಯಬಣ್ಣ ದೇವರಮನಿ, ಅಶೋಕ ಸುಲ್ಪಿ ಮಾತನಾಡಿ, ‘ಹಾಡಹಗಲೇ ಮೇಲ್ವರ್ಗದ ವ್ಯಕ್ತಿಗಳಿಂದ ಯುವ ಮುಖಂಡನ ಬರ್ಬರ ಹತ್ಯೆ ನಡೆದಿರುವುದು ಇಡೀ ಸಮಾಜ ತಲೆ ತಗ್ಗಿಸುವಂಥ ಘಟನೆಯಾಗಿದೆ. ಇಂಥ ಘಟನೆ ನಡೆದಿದ್ದರೂ ಜನಪ್ರತಿನಿಧಿಗಳು ಮೌನದಿಂದಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಟೀಕಿಸಿದರು.

‘ಕೂಡಲೇ ಆರೋಪಿಗಳನ್ನು ಬಂಧಿಸಿ, ಗಲ್ಲು ಶಿಕ್ಷೆಗೊಳಪಡಿಸಬೇಕು. ಮೃತರ ಕುಟುಂಬದವರಿಗೆ ಸೂಕ್ತ ರಕ್ಷಣೆನೀಡಬೇಕು. ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳುಕೂಡಲೇ ಮೃತನ ಕುಟುಂಬದವರಿಗೆ ಪರಿಹಾರ ನೀಡಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪರಿಹಾರ ವಿತರಣೆ: ಬೂದಿಹಾಳ ಪಿ.ಎಚ್.ಗ್ರಾಮಕ್ಕೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ ಭೇಟಿ ನೀಡಿ, ಮೃತರ ಕುಟುಂಬಕ್ಕೆ ಸರ್ಕಾರದಿಂದ ನೀಡಲಾಗುವ ₹8.25ಲಕ್ಷ ಪರಿಹಾರದಲ್ಲಿತುರ್ತಾಗಿ ₹ 4.12 ಲಕ್ಷ ನೀಡಲಾಗುವುದು. ಅವರ ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ, ಅಲ್ಲದೇ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಯೋಜನೆಗಳಲ್ಲಿ ಇವರಿಗೆ ಪ್ರಥಮ ಆದ್ಯತೆ ನೀಡುವ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT