ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಸಾವುಗಳಿಗೆ ವಿರೋಧ ಪಕ್ಷಗಳೇ ಹೊಣೆ: ಲಕ್ಷ್ಮಣ ಸವದಿ ಆರೋಪ

Last Updated 9 ಜುಲೈ 2021, 15:26 IST
ಅಕ್ಷರ ಗಾತ್ರ

ವಿಜಯಪುರ: ಕೋವಿಡ್ ಲಸಿಕೆಯ ಬಗ್ಗೆ ಅಪಪ್ರಚಾರ ಮಾಡಿ ಜನರಲ್ಲಿ ಭಯ ಸೃಷ್ಟಿಸಿದ ಪರಿಣಾಮ ಲಸಿಕೆ ಪಡೆಯದೇ ಅನೇಕರು ಪ್ರಾಣ ಕಳೆದುಕೊಂಡಿದ್ದು, ಎಲ್ಲ ಸಾವು-ನೋವುಗಳಿಗೆ ವಿರೋಧ ಪಕ್ಷಗಳೇ ನೇರ ಹೊಣೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಆರೋಪಿಸಿದರು.

ಶ್ರೀ ಸಿದ್ರಾಮಪ್ಪ ಪಾಟೀಲ ಫೌಂಡೇಷನ್ ವತಿಯಿಂದ ನಗರದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಕೊರೊನಾ ವೀರಯೋಧರಿಗೆ ಹೃದಯ ಸ್ಪರ್ಶಿ ಸನ್ಮಾನ ಹಾಗೂ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರುಮಾತನಾಡಿದರು.

ಭಾರತದಲ್ಲಿಯೇ ಉತ್ಪಾದನೆಯಾಗಿರುವ ಕೋವಿಡ್‌ ಲಸಿಕೆಯ ಬಗ್ಗೆ ವಿರೋಧ ಪಕ್ಷದವರು ಅಪಪ್ರಚಾರ ಮಾಡಿದರು.ಲಸಿಕೆ ಹಾಕಿಸಿಕೊಳ್ಳಿ ಎಂದಾಗ ಜನತೆ ಓಡಿ ಹೋಗುವ ರೀತಿಯಲ್ಲಿ ಭಯವನ್ನು ವಿರೋಧ ಪಕ್ಷಗಳು ಮೂಡಿಸಿದ್ದರು. ಇದರಿಂದಾಗಿ 38 ಕೋಟಿ ವ್ಯಾಕ್ಸಿನ್‌ ಉಪಯೋಗವಾಗಲೇ ಇಲ್ಲ ಎಂದರು.

ವಿರೋಧ ಪಕ್ಷದವರು ಎಲ್ಲರಿಗಿಂತಲೂ ಮೊದಲು ಲಸಿಕೆ ಪಡೆದುಕೊಂಡರು. ಜನಸಂಖ್ಯೆಗೆಗನುಗುಣವಾಗಿ ಲಸಿಕೆ ಇರಲಿಲ್ಲ, ಲಸಿಕೆಯನ್ನು ವಿದೇಶಕ್ಕೆ ರಫ್ತು ಮಾಡಲಾಗಿದೆ ಎಂದು ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಈ ರೀತಿಯಾದ ಪರಿಸ್ಥಿತಿ ಸೃಷ್ಟಿಗೆ ವಿರೋಧ ಪಕ್ಷದಲ್ಲಿರುವ ಪುಣ್ಯಾತ್ಮರೇ ಕಾರಣ ಎಂದು ವ್ಯಂಗ್ಯವಾಡಿದರು.

ದುರ್ಬಳಕೆ ಬೇಡ:

ಅನೇಕ ಆಸ್ಪತ್ರೆಗಳು ಸಂಜೀವಿನಿಯಂತೆ ಕಾರ್ಯನಿರ್ವಹಿಸಿ ಜನರ ಪ್ರಾಣ ಉಳಿಸಿವೆ. ಆದರೆ, ಕೆಲವೊಂದು ಆಸ್ಪತ್ರೆಗಳು ಜೀವ ಉಳಿಸಿದ್ದರೂ ಜನರ ಶಕ್ತಿ ಕಸಿದುಕೊಂಡಿವು. ಕೆಲವೊಂದು ಆಸ್ಪತ್ರೆಗಳು ರೆಮ್‌ಡಿಸಿವರ್ ಔಷಧಿಯನ್ನು ಮನಬಂದ ರೀತಿಯಲ್ಲಿ ಮಾರಾಟ ಮಾಡಿ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡವು. ಈ ರೀತಿಯಾದ ದುರ್ಬಳಕೆ ವೈದ್ಯ ವಲಯದಲ್ಲಿ ನಡೆಯಬಾರದು ಎಂದರು.

ಕೋವಿಡ್ ಪ್ರತಿಬಂಧಕ ಲಸಿಕೆ ಎರಡು ಡೋಸ್ ಪಡೆದವರಿಗೆ ಯಾವುದೇ ರೀತಿಯಲ್ಲಿ ಕೊರೊನಾ ತೀವ್ರತೆ ಕಾಡುತ್ತಿಲ್ಲ, ಇದಕ್ಕೆ ನಾನೇ ಉದಾಹರಣೆ ಎಂದರು.

ಕರ್ನಾಟಕ ಸಾವಯವ ಬೀಜ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ಮಾತನಾಡಿ, ಕೊರೊನಾ ಕಾಲಘಟ್ಟದಲ್ಲಿ ಅನೇಕ ಹಿರಿಯರನ್ನು, ಹಿತೈಷಿ, ಸ್ನೇಹಿತರನ್ನು ಕಳೆದುಕೊಂಡಿದ್ದೇನೆ. ಸಾಲು-ಸಾಲು ಸಾವು ನೋವುಗಳು ಮನಸ್ಸನ್ನು ಘಾಸಿಗೊಳಿಸಿವೆ ಎಂದು ಭಾವುಕರಾಗಿ ಕಣ್ಣೀರು ಸುರಿಸಿದರು.

ಮುಗಳಖೋಡ-ಜಿಡಗಾ ಮಠದ ಡಾ.ಮುರುಘರಾಜೇಂದ್ರ ಸ್ವಾಮೀಜಿ, ಬಬಲೇಶ್ವರ ಬೃಹನ್ಮಠದ ಡಾ.ಮಹಾದೇವ ಶಿವಾಚಾರ್ಯರು, ಮನಗೂಳಿ ಮಠದ ಸಂಗನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಆರ್‌ಎಸ್‍ಎಸ್ ಉತ್ತರ ಕರ್ನಾಟಕ ಸಹ ಕಾರ್ಯವಾಹ ಅರವಿಂದ ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ, ಶಿವಶರಣಗೌಡ ಪಾಟೀಲ, ಡಾ.ಬಾಬು ರಾಜೇಂದ್ರ ನಾಯಕ, ಚಂದ್ರಶೇಖರ ಕವಟಗಿ ಪಾಲ್ಗೊಂಡಿದ್ದರು.

***

ಕೋವಿಡ್‌ ಸಂದರ್ಭದಲ್ಲಿ ಸಾರಿಗೆ ಇಲಾಖೆಗೆ ಬಹಳ ನಷ್ಟವಾಗಿದೆ. ಹೀಗಾಗಿ ಸಂಬಳ ನೀಡುವುದು ವಿಳಂಬವಾಗಿದೆ. ನಾಳೆಯಿಂದ ಸಾರಿಗೆ ನೌಕರರಿಗೆ ಎರಡು ಹಂತದಲ್ಲಿ ಸಂಬಳ ನೀಡಲಾಗುವುದು

–ಲಕ್ಷ್ಮಣ ಸವದಿ,

ಉಪಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT