ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ಕನ್ನಡಿಗರಿಗೆ ಮಹಾರಾಷ್ಟ್ರ ಆರೋಗ್ಯ ಯೋಜನೆಗೆ ವಿರೋಧ

ವಿಜಯಪುರ ಜಿಲ್ಲಾ 18ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸಿದ್ಧಣ್ಣ ಉತ್ನಾಳ
Last Updated 23 ಮಾರ್ಚ್ 2023, 13:29 IST
ಅಕ್ಷರ ಗಾತ್ರ

ವಿಜಯಪುರ: ಮಹಾರಾಷ್ಟ್ರವು ಕರ್ನಾಟಕ ಗಡಿ ಭಾಗದಲ್ಲಿರುವ ಗ್ರಾಮಗಳ ಜನರಿಗೆ ಆರೋಗ್ಯ ಯೋಜನೆ ವಿಸ್ತರಣೆ ಮಾಡುವ ಮೂಲಕ ವಿವಾದ ಎಬ್ಬಿಸಿರುವುದು ಖಂಡನೀಯ. ಗಡಿಭಾಗದ ಜನರ ಆರೋಗ್ಯ ನೋಡಿಕೊಳ್ಳಲು ಕರ್ನಾಟಕ ಸರ್ಕಾರ ಇದೆ. ಇದರಲ್ಲಿ ಬೇರೆ ರಾಜ್ಯ ಮಧ್ಯ ಪ್ರವೇಶಿಸುವುದು ಬೇಡ, ಈ ವಿಷಯದಲ್ಲಿ ನಮ್ಮ ರಾಜ್ಯ ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳಬೇಕು ಹಾಗೂ ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಗೆ ತೊಂದರೆಯಾಗದಂತೆ ಮಧ್ಯಸ್ಥಿಕೆ ವಹಿಸಬೇಕು ಎಂದು ವಿಜಯಪುರ ಜಿಲ್ಲಾ 18 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ, ಸಾಹಿತಿ ಡಾ.ಸಿದ್ಧಣ್ಣ ಉತ್ನಾಳ ಹೇಳಿದರು.

ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಗುರುವಾರ ಆರಂಭವಾದ ಎರಡು ದಿನಗಳ 18 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಇಂಗ್ಲಿಷ್‌ ಅಂಕಿ–ಸಂಖ್ಯೆಗಳ ಬಳಕೆಗೆ ಬದಲು ಕನ್ನಡ ಅಂಕಿಗಳ ಬಳಕೆ ಸರ್ಕಾರ ಪ್ರೋತ್ಸಾಹ ಹಾಗೂ ಪ್ರೇರಣೆ ನೀಡಬೇಕು ಎಂದು ಒತ್ತಾಯಿಸಿದರು.

ಮಕ್ಕಳಲ್ಲಿ ಬಾಲ್ಯದಲ್ಲಿಯೇ ಅವರು ನೆಲೆಸಿದ ಪ್ರದೇಶಗಳ ಕಲೆ, ಸಂಸ್ಕೃತಿ, ಸಾಹಿತ್ಯ, ವಾಸ್ತುಶಿಲ್ಪ, ಕೃಷಿಯ ಬಗ್ಗೆ ಅರಿವು ಮೂಡಿಸಲು ‘ಪ್ರಿಯದರ್ಶಿನಿ' ಯೋಜನೆಯನ್ನು ಸರ್ಕಾರ ರೂಪಿಸಿ ಅನುಷ್ಠಾನಗೊಳಿಸಬೇಕು ಎಂದು ಸಲಹೆ ನೀಡಿದರು.

ವಚನ ಸಾಹಿತ್ಯ, ರಂಗಭೂಮಿ, ಬಂಡಾಯ, ಮಕ್ಕಳ ಸಾಹಿತ್ಯ, ಶಿಶು ಸಾಹಿತ್ಯ, ಚರಿತ್ರ ಸಾಹಿತ್ಯ, ಚುಟುಕು, ಹನಿಗನವನ, ನಾಟಕ, ಕಥೆ, ಕಾದಂಬರಿ ಜನಪದ ಸಾಹಿತ್ಯ, ಸಂಗೀತ, ರಂಗಭೂಮಿ, ಚಿತ್ರಕಲೆ, ಶಿಲ್ಪಕಲೆ, ಸಾಹಿತ್ಯ ಮತ್ತು ಸಂಶೋಧನೆಗೆ ವಿಜಯಪುರ ಜಿಲ್ಲೆಯ ಕೊಡುಗೆ ಅಪಾರ ಮತ್ತು ಅನುಮಪವಾಗಿದೆ ಎಂದರು.

ಆಲಮಟ್ಟಿ ಜಲಾಶಯದ ಎತ್ತರವನ್ನು 524 ಮೀಟರ್‌ಗೆ ಏರಿಸಿದರೆ ಮಾತ್ರ ರೈತರಿಗೆ ಲಾಭವಾಗಲಿದೆ, ಈ ಯೋಜನೆಯನ್ನು ಹಂತ,ಹಂತವಾಗಿ ತೀವ್ರಗತಿಯಲ್ಲಿ ಅನುಷ್ಠಾನಗೊಳಿಸಬೇಕು ಎಂಬ ಒತ್ತಾಯಿಸಿದರು.

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಶಿಕ್ಷಣ ತಜ್ಞ ಪ್ರೊ.ಎನ್.ಜಿ. ಕರೂರ, ಸಾಹಿತ್ಯದ ಎಲ್ಲ ಪ್ರಕಾರಗಳಿಗೂ ನೆಲೆ ಒದಗಿಸಿದ ವಿಜಯಪುರ ಸಾರಸ್ವತ ಲೋಕದ ಶ್ರೀಮಂತ ಜಿಲ್ಲೆ ಎಂದು ಬಣ್ಣಿಸಿದರು.

ಶಾಸಕ ಡಾ.ದೇವಾನಂದ ಚವ್ಹಾಣ ಮಾತನಾಡಿ, ಸಾಹಿತಿ ಆಗಲು ದೊಡ್ಡ ತಪಸ್ಸು ಬೇಕು, ಸಾಹಿತ್ಯ ರಚನೆ ಸುಲಭದ ಕೆಲಸವಲ್ಲ. ತನುಮನಧನದಿಂದ ಕನ್ನಡಮ್ಮನ ಸೇವೆ ನಾನು ಸದಾ ಬದ್ಧ, ಸದಾ ಸಿದ್ಧ ಎಂದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಮಾತನಾಡಿ, ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಮಠಾಧೀಶರ ಸಾನಿಧ್ಯ ಇರಲೇಬೇಕು ಎಂಬ ನಿಲುವು ಹಾಗೂ ಆಶಯ ನನ್ನದು. ಈ ಆಶಯ ಸಾಕಾರಕ್ಕಾಗಿ ಕಸಾಪ ವತಿಯಿಂದ ಹಮ್ಮಿಕೊಳ್ಳುವ ಪ್ರತಿ ಕಾರ್ಯಕ್ರಮಕ್ಕೂ ನಾಡಿನ ವಿವಿಧ ಮಠಾಧೀಶರನ್ನು ಆಹ್ವಾನಿಸುವ ಪರಂಪರೆ ರೂಪಿಸಲಾಗಿದೆ. ಆದರೆ, ಈ ಪರಂಪರೆಗೂ ಕೆಲವರು ವಿರೋಧ ವ್ಯಕ್ತಪಡಿಸುತ್ತಿರುವುದು ನನಗೆ ತೋವು ತಂದಿದೆ. ಇದಕ್ಕೆ ತಲೆಕೆಡಿಸಿಕೊಂಡಿಲ್ಲ ಎಂದರು.

ನಿಕಟಪೂರ್ವ ಸಮ್ಮೇಳನದ ಸರ್ವಾಧ್ಯಕ್ಷೆ ಡಾ.ಭುವನೇಶ್ವರಿ ಮೇಲಿನಮಠ, ಕನ್ನಡ ಭಾಷೆ ಬಗ್ಗೆ ಪ್ರತಿಯೊಬ್ಬರೂ ಗೌರವ ಇಟ್ಟುಕೊಂಡು, ಉಳಿಸಿ, ಬೆಳಸಬೇಕು ಎಂದರು.

ಹಂಪಿ ಕನ್ನಡ ವಿವಿಯಲ್ಲಿ ಕಂಪ್ಯೂಟರ್ ಭಾಷಾ ಸಂಶೋಧನಾ (ಕಂಪಿಟೇಷನ್ ಲಿಂಗ್ವೆಸ್ಟಿಕ್ ) ಕೇಂದ್ರ ತೆರೆಯಯುವ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್‌ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದರು.

ಬಸವನ ಬಾಗೇವಾಡಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೆಡಶ್ಯಾಳ, ಕೋಶಾಧ್ಯಕ್ಷ ಜುಬೇರ್ ಕೆರೂರ ಇದ್ದರು.

ಸಿದ್ಧೇಶ್ವರ ಶ್ರೀಗಳಿಂದ ಸನ್ಯಾಸತ್ವಕ್ಕೆ ಘನತೆ
ವಿಜಯಪುರ:
ವಿರಕ್ತ, ಸನ್ಯಾಸ ಪರಂಪರೆಗೆ ಘನತೆ ತಂದುಕೊಟ್ಟವರು ಸಿದ್ದೇಶ್ವರ ಶ್ರೀಗಳಾಗಿದ್ದಾರೆ ಎಂದು ಬೆಂಗಳೂರು ನಿಡುಮಾಮಿಡಿ ಮಠದ ಡಾ.ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಹೇಳಿದರು.

ಸಮ್ಮೇಳನದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸಿದ್ದೇಶ್ವರ ಶ್ರೀಗಳು ಬಹುದೊಡ್ಡ ವಿದ್ವಾಂಸ, ಜ್ಞಾನಿ, ಆಸೆರಹಿತರಾಗಿ ಬದುಕಿದರು ಎಂದು ಶ್ಲಾಘಿಸಿದರು.

ನಾನು ಗೌರವಿಸುವ ಕೆಲವೇ ಕೆಲವರಲ್ಲಿ ಸಿದ್ದೇಶ್ವರ ಶ್ರೀಗಳು ಒಬ್ಬರು. ಅರ್ಧ ಶತಮಾನಗಳ ಕಾಲ ಪ್ರವಚನದ ಮೂಲಕ ಸಮಾಧಾನ, ಸಾಂತ್ವನದ ಮಾತುಗಳನ್ನಾಡಿದರು. ಕ್ಷೋಭೆಗೊಂಡಿರುವ ಸಮಾಜಕ್ಕೆ ಅವರ ಮಾತು ಬೇಕಿತ್ತು. ಅವರ ಉಪದೇಶವನ್ನು ನಿರಾಕರಣೆ ಮಾಡಲು ಸಾಧ್ಯವಿಲ್ಲ. ಆದರೆ, ಅವರು ತಮ್ಮ ಮಾತಿನಲ್ಲಿ ಪರಿವರ್ತನೆ ವಿಷಯ ಮಂಡಿಸಲಿಲ್ಲ ಎಂದು ಅಭಿಪ್ರಾಯ ಪಟ್ಟರು.

ಸರ್ವಾಧ್ಯಕ್ಷರ ಮೆರವಣಿಗೆ ಅದ್ದೂರಿ
ವಿಜಯಪುರ:
ಸಮ್ಮೇಳನದ ಸರ್ವಾಧ್ಯಕ್ಷ ಡಾ.ಸಿದ್ಧಣ್ಣ ಉತ್ನಾಳ ಅವರ ಮೆರವಣಿಗೆ ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಸಮ್ಮೇಳನ ನಡೆದ ಕಂದಗಲ್‌ ಹನುಮಂತರಾಯ ರಂಗಮಂದಿರದ ವರೆಗೆ ಅದ್ಧೂರಿಯಾಗಿ ನಡೆಯಿತು.

ಗೊಂಬೆ ಕುಣಿತ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಿದವು. ಬಂಗಾರ ವರ್ಣದ ಸಾರೋಟಿನಲ್ಲಿ ಆಸೀನರಾಗಿದ್ದ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಉತ್ನಾಳರಿಗೆ ಸಾಹಿತ್ಯಾಭಿಮಾನಿಗಳು ಪುಷ್ಪವೃಷ್ಠಿ ಮಾಡಿದರು.

ಮೆರವಣಿಗೆಗೆ ಮಾಜಿ ಶಾಸಕ ವಿಠ್ಠಲ ಕಟಕಧೋಂಡ ಚಾಲನೆ ನೀಡಿದರು. ಪಾಲಿಕೆ ಮಾಜಿ ಸದಸ್ಯ ಉಮೇಶ ವಂದಾಲ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಇದ್ದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT