ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರದ ಪ್ರಯಾಣಿಕರು; ನಷ್ಟದ ಹಾದಿಯಲ್ಲಿ ಬಸ್‌ ಸಂಚಾರ

ಇಂದಿನಿಂದ ಮಂಗಳೂರು, ದಾವಣಗೆರೆಗೆ ಜಿಲ್ಲೆಯಿಂದ ಬಸ್‌ ಸಂಚಾರ ಆರಂಭ
Last Updated 29 ಮೇ 2020, 13:35 IST
ಅಕ್ಷರ ಗಾತ್ರ

ವಿಜಯಪುರ: ಕೊರೊನಾ ಲಾಕ್‌ಡೌನ್‌ನಿಂದ ಎರಡು ತಿಂಗಳು ಸ್ಥಗಿತಗೊಂಡಿದ್ದ ಬಸ್‌ ಸಂಚಾರ ಪುನರಾರಂಭಗೊಂಡು 10 ದಿನಗಳಾದರೂ ನಿರೀಕ್ಷಿತ ಪ್ರಮಾಣದಲ್ಲಿ ಪ್ರಯಾಣಿಕರು ಬಾರದ ಕಾರಣ ಬಸ್‌ಗಳು ಖಾಲಿ ಓಡುತ್ತಿವೆ.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಅಂತರವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಬಸ್‌ ವೊಂದರಲ್ಲಿ ಗರಿಷ್ಠ 30 ಜನ ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆದರೂ ಸಹ 10 ರಿಂದ 15 ಜನರೂ ಬರುತ್ತಿಲ್ಲ. ಹೀಗಾಗಿ ಕೆಲವು ಬಸ್‌ಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಇನ್ನು ಕೆಲವು ಮಾರ್ಗಗಳಲ್ಲಿ ಪ್ರಯಾಣಿಕರ ಕೊರೆತೆಯಿಂದಾಗಿ ನಿಗದಿತ ಸಮಯಕ್ಕೆ ಬಸ್‌ ಹೊರಡದೇ 15ರಿಂದ 20 ಜನ ಪ್ರಯಾಣಿಕರು ಬಂದ ಬಳಿಕವೇ ಹೊರಡುತ್ತಿವೆ.

ಈಶಾನ್ಯ ಸಾರಿಗೆ ಸಂಸ್ಥೆ ವಿಜಯಪುರ ವಿಭಾಗದಿಂದ ಸಾರ್ವಜನಿಕರ ಅನುಕೂಲಕ್ಕಾಗಿಸದ್ಯ 160 ಮಾರ್ಗಗಳಲ್ಲಿ 150 ಬಸ್‌ಗಳನ್ನು ಓಡಿಸಲಾಗುತ್ತಿದೆ. ಆದರೆ, ನಿರೀಕ್ಷಿತ ಆದಾಯ ಬಾರದೇ ಇರುವುದರಿಂದ ಸಂಸ್ಥೆಗೆ ಭಾರೀ ನಷ್ಟವಾಗುತ್ತಿದೆ ಎಂದು ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್‌.ಜಿ.ಗಂಗಾಧರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಮೇ 19ರಿಂದ ಬಸ್‌ ಸಂಚಾರ ಆರಂಭವಾದ ಬಳಿಕ ಬೆಂಗಳೂರಿಗೆ ಪ್ರತಿದಿನ ಹಗಲು, ರಾತ್ರಿ ಒಟ್ಟು 18 ಬಸ್‌ಗಳನ್ನು ಓಡಿಸಲಾಯಿತು. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಪ್ರಯಾಣಿಕರು ಬಾರದ ಹಿನ್ನೆಲೆಯಲ್ಲಿ ಸದ್ಯ 5 ಬಸ್‌ಗಳನ್ನು ಮಾತ್ರ ಓಡಿಸಲಾಗುತ್ತಿದೆ ಎಂದರು.

ಈಶಾನ್ಯ ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗದಲ್ಲಿ 680 ಮಾರ್ಗಗಳಿದ್ದು, ಸದ್ಯ ಜಿಲ್ಲೆಯ ತಾಲ್ಲೂಕು ಕೇಂದ್ರಗಳು ಸೇರಿದಂತೆ ಹುಬ್ಬಳ್ಳಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಗೆ ಸುಮಾರು 160 ಮಾರ್ಗಗಳಲ್ಲಿ ಮಾತ್ರ ಬಸ್‌ ಓಡುತ್ತಿವೆ. ಜಿಲ್ಲೆಯ ಗ್ರಾಮೀಣ ಭಾಗಗಳಿಂದ ಬಸ್‌ ಸಂಚಾರ ಆರಂಭವಾಗಿಲ್ಲ ಎಂದು ಹೇಳಿದರು.

ರಾಜ್ಯ ಸರ್ಕಾರದ ನಿರ್ದೇಶನ ಮತ್ತು ಮಾರ್ಗಸೂಚಿ ನೋಡಿಕೊಂಡು ಜೂನ್‌ನಿಂದ ಬಸ್‌ ಸಂಚಾರ ಹೆಚ್ಚಿಸಬೇಕೇ, ಬೇಡವೇ ಎಂಬುದರ ಬಗ್ಗೆ ಕ್ರಮಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದರು.

ವಿಭಾಗದಲ್ಲಿ ಒಟ್ಟು 3260 ಸಿಬ್ಬಂದಿ ಇದ್ದು, ಸದ್ಯ 800 ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಪೂರ್ಣಪ್ರಮಾಣದಲ್ಲಿ ಬಸ್‌ ಸಂಚಾರ ಆರಂಭವಾದರೆ ಎಲ್ಲ ಸಿಬ್ಬಂದಿ ಕೆಲಸಕ್ಕೆ ಹಾಜರಾಗಲಿದ್ದಾರೆ ಎಂದರು.

ಇಂದಿನಿಂದ ಮಂಗಳೂರಿಗೆ:ಮೇ 30 ರಿಂದ ಮಧ್ಯಾಹ್ನ 3ಕ್ಕೆ ಸಿಂದಗಿ, ವಿಜಯಪುರ, ಹುಬ್ಬಳ್ಳಿ ಮಾರ್ಗವಾಗಿ ಮಂಗಳೂರಿಗೆ ಬಸ್‌ ಸಂಚಾರ ಆರಂಭವಾಗಲಿದೆ. ಅದೇ ರೀತಿ ದಾವಣಗೆರೆಯೂ ಆರಂಭಿಸಲಾಗುವುದು ಎಂದು ಹೇಳಿದರು.

ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ ವಿವಿಧ ಮಾರ್ಗಗಳಲ್ಲಿ ಬಸ್‌ ಸಂಚಾರ ಹೆಚ್ಚಿಸಲಾಗುವುದು ಎಂದು ತಿಳಿಸಿದರು.

ಪ್ರತಿ ದಿನ ವಿಭಾಗಕ್ಕೆ ₹ 70ರಿಂದ ₹ 80 ಲಕ್ಷ ಆದಾಯ ಬರಬೇಕಿತ್ತು. ಆದರೆ, ಸದ್ಯ ಓಡುತ್ತಿರುವ ಬಸ್‌ಗಳಿಂದ ಪ್ರತಿ ಕಿ.ಮೀ.ಗೆ ₹ 9 ರಿಂದ ₹ 10 ನಷ್ಟವಾಗುತ್ತಿದೆ ಎಂದು ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್‌.ಜಿ.ಗಂಗಾಧರ್‌ ತಿಳಿಸಿದ್ದಾರೆ.

ದಿನದಿಂದ ದಿನಕ್ಕೆ ಕೊರೊನಾ ಸೋಂಕು ವ್ಯಾಪಿಸುತ್ತಿರುವುದರಿಂದ ಬಸ್‌, ರೈಲಿನಲ್ಲಿ ಪ್ರಯಾಣಿಸಲು ಭಯವಾಗುತ್ತಿದೆ. ಹೀಗಾಗಿ ಪ್ರಯಾಣವನ್ನೇ ಮುಂದಕ್ಕೆ ಹಾಕಿದ್ದೇವೆ ಎಂದು ವಿಜಯಪುರ ನಿವಾಸಿ ಸಂಗಮೇಶ ಚವ್ಹಾಣ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT