ಮಂಗಳವಾರ, ಅಕ್ಟೋಬರ್ 26, 2021
24 °C
ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಭವಾನಿ ಶಂಕರ್

ಸರ್ಕಾರದ ಜನವಿರೋಧಿ ನೀತಿಯಿಂದ ಬೆಲೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಜನ ಸಾಮಾನ್ಯರನ್ನು ಬಿಟ್ಟುಬಿಡದೇ ಕಾಡುತ್ತಿರುವ ಬೆಲೆ ಏರಿಕೆ ಮತ್ತು ನಿರುದ್ಯೋಗ ಸಮಸ್ಯೆಗಳಿಗೆ ಸಂಘಟಿತ ಹೋರಾಟದಿಂದ ಮಾತ್ರ ಪರಿಹಾರ ಸಾಧ್ಯ ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯರಾದ ಭವಾನಿ ಶಂಕರ್ ಹೇಳಿದರು.

ಜನಾಂದೋಲನಗಳ ಮಹಾಮೈತ್ರಿ ವತಿಯಿಂದ ಶನಿವಾರ ಆಕಾಶಕ್ಕೆ ಬೆಲೆ ಏರಿಕೆ, ಪಾತಾಳಕ್ಕೆ ಉದ್ಯೋಗ, ಸಂಘಟಿತ ಹೋರಾಟ ಹೇಗೆ? ಎಂಬ ವಿಷಯದ ಕುರಿತು ಆಯೋಜಿಸಿದ್ದ ವೆಬಿನಾರ್‌ನಲ್ಲಿ ಅವರು ಮಾತನಾಡಿದರು.

ಹಿಂದಿನ ಮತ್ತು ಈಗಿನ ಸರ್ಕಾರಗಳು ಅನುಸರಿಸುತ್ತಿರುವ ಜನವಿರೋಧಿ ನೀತಿಗಳಿಂದಾಗಿ ಅಗತ್ಯವಸ್ತುಗಳ ಬೆಲೆ ಏರಿಕೆ ಗಗನಕ್ಕೇರುತ್ತಿದೆ. ಜಾಗತೀಕರಣ ನೀತಿಯ ಫಲವಾಗಿ ಅಸಂಖ್ಯಾತ ಕೈಗಾರಿಕೆಗಳು ಮುಚ್ಚಿಹೋಗಿದ್ದು, ಕಾರ್ಮಿಕರು ಬೀದಿ ಪಾಲಾಗಿದ್ದಾರೆ. ಅಲ್ಲದೇ, ಬಿ.ಜೆ.ಪಿ ನೇತೃತ್ವದ ಕೇಂದ್ರ ಸರ್ಕಾರದ ನೋಟು ಅಮಾನ್ಯೀಕರಣ, ಜಿಎಸ್‍ಟಿಯಂತಹ ಅವೈಜ್ಞಾನಿಕ ತಪ್ಪು ಆರ್ಥಿಕ ನೀತಿಗಳಿಂದಾಗಿ ನಿರುದ್ಯೋಗದ ಪ್ರಮಾಣ ಮತ್ತಷ್ಟು ಉಲ್ಬಣಗೊಂಡಿದೆ ಎಂದರು.

ಕೋವಿಡ್ ನಂತರ ವಲಸೆ ಕಾರ್ಮಿಕರು ಕೆಲಸ ಕಳೆದುಕೊಂಡು ತಮ್ಮ ಊರುಗಳಿಗೆ ತೆರಳಿದ್ದಾರೆ. ನಗರಗಳಲ್ಲಿ ಲಕ್ಷಾಂತರ ಲಘು ಉತ್ಪಾದನಾ ಘಟಕಗಳು ಮುಚ್ಚುವೆ. ಕೈಗಾರಿಕಾ ಉತ್ಪಾದನೆ ನೆಲಕಚ್ಚಿದೆ. ಆದಾಗ್ಯೂ ಖಾಸಗಿ ಮಾಲೀಕರ ಲಾಭ ಗಳಿಕೆ ಏರಿಕೆಯಾಗುತ್ತಲೇ ಇದೆ. 2020 ರಿಂದ 2021ರ ಒಂದೇ ವರ್ಷದ ಅವಧಿಯಲ್ಲಿ ದೇಶದ ಕೇವಲ 10 ಮಂದಿ ಉದ್ಯಮಪತಿಗಳ ಆದಾಯದಲ್ಲಿ ರೂ. 9.20 ಲಕ್ಷ ಕೋಟಿ ಏರಿಕೆಯಾಗಿದೆ. ಎಲ್ಲದರ ಪರಿಣಾಮವಾಗಿ ಬೆಲೆ ಏರಿಕೆ ತೀವ್ರವಾಗಿದೆ. ಸರ್ಕಾರವು ಉದ್ದಿಮೆದಾರರ ಹಿತಾಸಕ್ತಿಯನ್ನು ಕಾಪಾಡುವ ಸಲುವಾಗಿ ಅನುಸರಿಸುತ್ತಿರುವ ನೀತಿಗಳು ಇಂದಿನ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿವೆ ಎಂದು ಹೇಳಿದರು.

ಸರ್ಕಾರ ಘೋಷಿಸುತ್ತಿರುವ ಪುಡಿಗಾಸಿನ ಯೋಜನೆಗಳು ಜನರ ಹಸಿವನ್ನು ನೀಗಿಸಲು ಸಾಧ್ಯವಿಲ್ಲ. ಅಲ್ಪಸ್ವಲ್ಪ ಯೋಜನೆಯ ಫಲವು ಜನಗಳಿಗೆ ಸಿಗುತ್ತಿಲ್ಲ. ಹೀಗೆ ಜನಜೀವನವು ನರಕ ಸದೃಶವಾಗಿದೆ. ಜನಾಕರ್ಷಕವಾದ ಭಾರೀ ಭರವಸೆಗಳೊಂದಿಗೆ ಅಧಿಕಾರಕ್ಕೆ ಬರುವ ರಾಜಕೀಯ ಪಕ್ಷಗಳು ತಮ್ಮ ಆಡಳಿತ ಅವಧಿಯಲ್ಲಿ ತಮ್ಮ ಪಕ್ಷಕ್ಕೆ ದೇಣಿಗೆ ನೀಡಿದ ಬಂಡವಾಳಶಾಹಿಗಳ ಸೇವೆಗೈಯಲು ಟೊಂಕಕಟ್ಟಿ ನಿಂತಿವೆ ಎಂದರು.

ಬಂಡವಾಳಗಾರರು ತಮ್ಮ ಲಾಭದಾಹವನ್ನು ತೀರಿಸಿಕೊಳ್ಳಲು ಈಗ ಕೃಷಿ ಕ್ಷೇತ್ರಕ್ಕೆ ಲಗ್ಗೆಯಿಟ್ಟಿದ್ದಾರೆ. ಅದಕ್ಕಾಗಿಯೇ ಸರ್ಕಾರ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲು ಹೊರಟಿದೆ ಎಂದು ಆರೋಪಿಸಿದರು. 

ಎಐಡಿವೈಓ ರಾಜ್ಯ ಸಮಿತಿ ಸದಸ್ಯರಾದ ಸುನೀಲ್, ಜನಾಂದೋಲನಗಳ ಮಹಾ ಮೈತ್ರಿಯ ಅಭಿರುಚಿ ಗಣೇಶ್, ಸಿದ್ಧಲಿಂಗ ಬಾಗೇವಾಡಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.