ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ಸಾವು ತಡೆಗೆ ಆದ್ಯತೆ ನೀಡಿ

ಸರ್ಕಾರಿ, ಖಾಸಗಿ ವೈದ್ಯರಿಗೆ ಜಿಲ್ಲಾಧಿಕಾರಿ ಪಿ. ಸುನಿಲ್‌ಕುಮಾರ್‌ ಸೂಚನೆ
Last Updated 9 ಸೆಪ್ಟೆಂಬರ್ 2020, 15:00 IST
ಅಕ್ಷರ ಗಾತ್ರ

ವಿಜಯಪುರ: ಕೋವಿಡ್‍ನಿಂದ ಆಗುತ್ತಿರುವ ಸಾವಿನ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ತಜ್ಞವೈದ್ಯರು ವಿಶೇಷ ಕಾಳಜಿ ವಹಿಸುವಂತೆ ಜಿಲ್ಲಾಧಿಕಾರಿ ಪಿ.ಸುನಿಲ್‌ಕುಮಾರ್‌ ಸೂಚನೆ ನೀಡಿದರು.

ನಗರದ ಬಿ.ಎಲ್.ಡಿ.ಇ ಡೀಮ್ಡ್‌ ವಿಶ್ವ ವಿದ್ಯಾಲಯದ ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ಶಿಕ್ಷಣ ವಿಭಾಗದಲ್ಲಿ ಬುಧವಾರ ಸರ್ಕಾರಿ ಹಾಗೂ ಖಾಸಗಿ ತಜ್ಞ ವೈದ್ಯರೊಂದಿಗೆ ನಡೆದ ತುರ್ತು ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಕೋವಿಡ್‌ನಿಂದ ಗುಣಮುಖವಾಗುತ್ತಿರುವವರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಿದ್ದರೂ, ಕೋವಿಡ್‍ನಿಂದ ಆಗುತ್ತಿರುವ ಸಾವಿನ ಪ್ರಮಾಣ ತಗ್ಗಿಸಲು ತಜ್ಞ ವೈದ್ಯರು ಪರಿಣಾಮಕಾರಿ ಚಿಕಿತ್ಸೆಗಳ ಮೂಲಕ ವಿಶೇಷ ಗಮನ ನೀಡಬೇಕು ಎಂದರು.

ಕೋವಿಡ್‍ ರೋಗಿಗಳ ಚಿಕಿತ್ಸೆ ಪರಿಶೀಲನೆಗೆ ತಜ್ಞರ ಸಮಿತಿ ಮತ್ತು ಉಪ ಸಮಿತಿಗಳು ಜಿಲ್ಲೆಯ ಪ್ರತಿ ಆಸ್ಪತ್ರೆಗಳಿಗೆ ಭೇಟಿ ನೀಡಬೇಕು. ಜಿಲ್ಲೆಯಲ್ಲಿ ಕೋವಿಡ್‍ನಿಂದ ಆಗುತ್ತಿರುವ ಸಾವು ಕುರಿತು ನಿಖರ ಅಂಕಿ ಅಂಶಗಳನ್ನು ವರದಿ ಮಾಡಿಕೊಳ್ಳಬೇಕು. ರಾಜ್ಯ ಆರೋಗ್ಯ ಸಚಿವರ ನಿರ್ದೇಶನದಂತೆ ಕೋವಿಡ್ 19 ದಿಂದ ಆಗುವಂತಹ ಮರಣ ಪ್ರಮಾಣ ತಗ್ಗಿಸಲು ಕ್ರಮ ಕೈಗೊಳ್ಳುವಂತೆ ಅವರು ತಿಳಿಸಿದರು.

ಕೋವಿಡ್‍ಗೆ ಸಂಬಂಧಪಟ್ಟಂತೆ ಅಧಿಕೃತ ಅಂಕಿ-ಅಂಶ ನಮೂದಿಸಬೇಕು. ಕೋವಿಡ್‍ನಿಂದ ಆಗುತ್ತಿರುವ ಸಾವಿನ ಪ್ರಮಾಣ, ಕಾರಣಗಳ ಬಗ್ಗೆ ಗಮನ ಇಟ್ಟು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಚಿಕಿತ್ಸೆ ಒದಗಿಸಿ ರೋಗಿಗಳನ್ನು ಗುಣಮುಖ ಪಡಿಸಬೇಕು ಎಂದರು.

ದಿನನಿತ್ಯ ಆಗುತ್ತಿರುವ ಕೋವಿಡ್-19 ರೋಗಿಗಳ ಸಾವು ಕುರಿತು ಸಮರ್ಪಕವಾಗಿ ಮಾಹಿತಿ ದಾಖಲಿಸಿ ರಾಜ್ಯ ಮತ್ತು ಜಿಲ್ಲೆಯ ವರದಿಯಲ್ಲಿ ವ್ಯತ್ಯಾಸ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದರು.

ಕೋವಿಡ್‌ ಸೋಂಕಿತರ ದೈಹಿಕವಾಗಿ ಎಷ್ಟೇ ಸದೃಡ ಇದ್ದರೂ ಕೂಡಾ ಇಂತಹ ಲಕ್ಷಣಗಳು ಇದ್ದಲ್ಲಿ ತಕ್ಷಣ ತಜ್ಞವೈದ್ಯರಲ್ಲಿ ಚಿಕಿತ್ಸೆಗೆ ಒಳಪಡಬೇಕು. ವಿದ್ಯಾರ್ಹತೆ ಇಲ್ಲದ ಮತ್ತು ಸ್ಥಳೀಯ ವೈದ್ಯರ ಬಳಿ ಹೋಗದೆ ನುರಿತ ತಜ್ಞ ವೈದ್ಯರ ಬಳಿಯೇ ಚಿಕಿತ್ಸೆ ಪಡೆಯುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.

ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಯಾವುದೇ ಲೋಪ ಆಗದಂತೆ ಎಚ್ಚರಿಕೆ ವಹಿಸಬೇಕು. ರೀ ಇನ್‍ಫೆಕ್ಷನ್ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಚಿಕಿತ್ಸೆಗೆ ಒಳಪಡಿಸಿದ ಕೋವಿಡ್ ಸೋಂಕಿತ ರೋಗಿ ಸಂಪೂರ್ಣ ಗುಣಮುಖವಾದ ಬಗ್ಗೆ ನೆಗೆಟಿವ್ ವರದಿ ಆಧಾರದ ಮೇಲೆ ಆಸ್ಪತ್ರೆಯಿಂದ ಬಿಡುಗಡೆ ಗೊಳಿಸಬೇಕು. ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸಬೇಕು ಎಂದರು.

ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗೆ ಸಕಾಲಕ್ಕೆ ಚಿಕಿತ್ಸೆಗಾಗಿ ಆಕ್ಸಿಜನ್‍ಗಳ ಸಮರ್ಪಕ ಬಳಕೆಗೆ ವಿಶೇಷ ಗಮನ ನೀಡುವಂತೆಯೂ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಕೋವಿಡ್ ಸೋಂಕಿತರ ಮತ್ತು ಸೋಂಕಿತರ ಸಾವಿನ ಕುರಿತು ರಿಪೊರ್ಟಿಂಗ್ ಮತ್ತು ಅಂಡರ್ ರಿಪೊರ್ಟಿಂಗ್‍ ಅನ್ನು ದಾಖಲಾತಿಗಳೊಂದಿಗೆ ಸಮರ್ಪಕವಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಂದ್ರ ಕಾಪಸೆ, ಐ.ಸಿ.ಯುನಲ್ಲಿರುವ ರೋಗಿಗಳನ್ನು ಮೇಲಿಂದ ಮೇಲೆ ಗಂಟಲುದ್ರವ ತಪಾಸಣೆಗೆ ಒಳಪಡಿಸಬೇಕು. ಬ್ಲಡ್ ಕಲ್ಚರ್ ಬಗ್ಗೆ ಗಮನ ವಹಿಸಬೇಕು ಎಂದರು.

ಕೋವಿಡ್ ಹೊರತುಪಡಿಸಿ ಇನ್ನಿತರ ಕಾರಣಗಳಿಂದ ಆಗುತ್ತಿರುವ ಸಾವಿನ ಕುರಿತು ವಿಶೇಷ ಗಮನ ನೀಡಬೇಕು. ಆರೋಗ್ಯ ಸಚಿವರ ನಿರ್ದೇಶನದ ಹಿನ್ನೆಲೆಯಲ್ಲಿ ಸಾವಿನ ಪ್ರಮಾಣ ತಗ್ಗಿಸಲು ಪ್ರಯತ್ನಿಸಬೇಕು. ಕೋವಿಡ್ ಸೊಂಕಿತರು ಸಹ ಅಸ್ವಸ್ಥತೆಗಳಿಂದ ಬಳಲುತ್ತಿರುವ ಕಾಯಿಲೆಗಳ ಬಗ್ಗೆ ವಿಶೇಷ ಚಿಕಿತ್ಸೆ ಮೂಲಕ ಗುಣ ಪಡಿಸಲು ಪ್ರಯತ್ನಿಸುವಂತೆ ಸಲಹೆ ನೀಡಿದರು.

ಬಿ.ಎಲ್.ಡಿ.ಇ ವಿಶ್ವ ವಿದ್ಯಾನಿಲಯದ ಉಪ ಕುಲಪತಿ ಡಾ.ಎಂ.ಎಸ್ ಬಿರಾದಾರ, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಅರವಿಂದ ಪಾಟೀಲ, ವೈದ್ಯಕೀಯ ಅಧಿಕ್ಷಕ ಡಾ.ಆರ್.ಎಂ ಹೊನ್ನುಟಗಿ, ಜಿಲ್ಲಾ ಆಸ್ಪತ್ರೆ ಸರ್ಜನ್ ಡಾ. ಶರಣಪ್ಪ ಕಟ್ಟಿ, ಡಾ.ಲಕ್ಕಣ್ಣವರ, ಕುಷ್ಟ ರೋಗ ನಿಯಂತ್ರಣಾಧಿಕಾರಿ ಡಾ. ಸಂಪತ್‍ಕುಮಾರ ಗೂಣಾರೆ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ತಜ್ಞ ವೈದ್ಯರು ಉಪಸ್ಥಿತರಿದ್ದರು.

ನೆಗಡಿ, ಕೆಮ್ಮು, ಜ್ವರ, ಉಸಿರಾಟ ತೊಂದರೆಯಿಂದ ಬಳಲುತ್ತಿರುವವರು ಯಾವುದೇ ರೀತಿಯ ನಿರ್ಲಕ್ಷ್ಯ ತೋರದೆ ತಕ್ಷಣ ಚಿಕಿತ್ಸೆಗೆ ಒಳಪಡಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನಿಲ್‌ಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT