ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳಗಿ: ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ ಆಗ್ರಹ

ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದಿಂದ ರಸ್ತೆ ತಡೆ
Last Updated 13 ಜನವರಿ 2021, 2:27 IST
ಅಕ್ಷರ ಗಾತ್ರ

ಕಾಳಗಿ: ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮಾರುಕಟ್ಟೆಯಲ್ಲಿ ರೈತರ ತೊಗರಿ ಖರೀದಿಸಬೇಕು ಮತ್ತು ನಫೇಡ್ ಮೂಲಕ ಕರೆದ ತೊಗರಿ ಟೆಂಡರ್ ಅನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಘಟಕದ ಮುಖಂಡರು ಸೋಮವಾರ ಕತ್ತೆಯೊಂದಿಗೆ ರಸ್ತೆಗಿಳಿದು ಪ್ರತಿಭಟಿಸಿದರು.

ತಾಲ್ಲೂಕಿನ ರಟಕಲ್ ನಲ್ಲಿ ಚಿಂಚೋಳಿ-ಕಲಬುರ್ಗಿ ಮುಖ್ಯರಸ್ತೆ ತಡೆ ನಡೆಸಿ ಅವರು ರೈತರ ಬೇಡಿಕೆಗಳಿಗೆ ಆಗ್ರಹಿಸಿದರು.

ಕಲಬುರ್ಗಿ, ಯಾದಗಿರಿ, ಬೀದರ್, ವಿಜಯಪುರ ಮತ್ತಿತರ ಜಿಲ್ಲೆಗಳಲ್ಲಿ ಕಳೆದ ವರ್ಷ ಖರೀದಿಸಿದ ಅಂದಾಜು 250 ಲಕ್ಷ ಕ್ವಿಂಟಲ್ ತೊಗರಿ ನಫೇಡ್ ಮೂಲಕ ಗೋದಾಮುಗಳಲ್ಲೇ ದಾಸ್ತಾನು ಮಾಡಿಕೊಳ್ಳಲಾಗಿದೆ. ಈಗಾಗಲೇ ಕೇಂದ್ರ ಸರ್ಕಾರದ ₹6,000 ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಸಲು ಖರೀದಿ ಕೇಂದ್ರ ತೆರೆಯುವಂತೆ ಸರ್ಕಾರ ಆದೇಶ ಹೊರಡಿಸಿದರೂ ಹಲವಾರು ಕಡೆಗಳಲ್ಲಿ ರೈತರ ಹೆಸರು ನೋಂದಣಿ ಇನ್ನೂ ಆರಂಭಿಸಿಲ್ಲ. ಈ ಪ್ರಕ್ರಿಯೆಗೆ ತಾಂತ್ರಿಕ ದೋಷವಿದೆ ಎಂಬ ನೆಪ ಮುಂದೆಮಾಡಿ ಸರ್ಕಾರ ರೈತರೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

ಈಗಾಗಲೇ ಜಿಲ್ಲೆಯಾದ್ಯಂತ ತೊಗರಿ ರಾಶಿ ನಡೆಯುತ್ತಿದೆ. ಆದರೆ ಖರೀದಿ ಕೇಂದ್ರ ತೆರೆದಿಲ್ಲದಕ್ಕೆ ರೈತರು ಅಡತಿಗಳತ್ತ
(ಖಾಸಗಿ ಮಾರಾಟ) ತೊಗರಿ ಮಾರಾಟಕ್ಕೆ ಹೋದರೆ ಕಡಿಮೆ ಬೆಲೆಗೆ ತೆಗೆದುಕೊಳ್ಳಲಾಗುತ್ತಿದೆ. ಇದರಿಂದ ರೈತರಿಗೆ ತೊಗರಿ ಬೆಳೆದ ಖರ್ಚು ಭರಿಸಲಾಗದೆ ಭಾರಿ ನಷ್ಟ ಉಂಟಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಹೋಬಳಿ ಸಂಚಾಲಕ ಗುರುನಂದೇಶ ಕೋಣಿನ, ಮುಖಂಡ ಮಲ್ಲು ಚಿಕ್ಕ ಅಗಸಿ, ಜಗನ್ನಾಥ ಚಾಟಿಕಾರ, ಕಲ್ಯಾಣಿ ತೆಟಕರಿ, ಚಂದು ತೆಳಕೇರಿ, ರಾಜು ಸ್ವಂತ, ಜಗನ್ನಾಥ ನೀಲಗಾರ, ಸಿದ್ದು ಕಂತಿ, ಸಂಗಣ್ಣಾ, ಜಗನ್ನಾಥ, ಆಕಾಶ, ಮಹೆಬೂಬ, ಶಿವರಾಜ ಇದ್ದರು.

ಮುಖ್ಯಮಂತ್ರಿಗೆ ಬರೆಯಲಾದ ಮನವಿ ಪತ್ರವನ್ನು ಸ್ಥಳಕ್ಕೆ ಭೇಟಿ ನೀಡಿದ ಕೋಡ್ಲಿ ಉಪ ತಹಶೀಲ್ದಾರ್ ವಿಜಯಕುಮಾರ ದಳವಾಯಿ ಅವರಿಗೆ ಸಲ್ಲಿಸಲಾಯಿತು. ಕೆಲಕಾಲ ಕಲಬುರ್ಗಿ-ಚಿಂಚೋಳಿ ಮಾರ್ಗ ಸ್ಥಗಿತಗೊಂಡು ವಾಹನ ಸವಾರರು ಪರದಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT