ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೃಷ್ಣಾ ನದಿಯಲ್ಲಿ ತೆಪ್ಪ ದುರಂತ: ಮೂವರ ಶವ ಪತ್ತೆ

ಪೊಲೀಸರ ಕಾರ್ಯಾಚರಣೆ ಭೀತಿಯಿಂದ ನೀರುಪಾಲು
Published 3 ಜುಲೈ 2024, 15:46 IST
Last Updated 3 ಜುಲೈ 2024, 15:46 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯ ಕೊಲ್ಹಾರದಲ್ಲಿ ಮಂಗಳವಾರ ಸಂಜೆ ಪೊಲೀಸರ ಕಾರ್ಯಾಚರಣೆಯಿಂದ ಭಯಪಟ್ಟು ಕೃಷ್ಣಾ ನದಿಯಲ್ಲಿ ತೆಪ್ಪದ ಮೂಲಕ ತಪ್ಪಿಸಿಕೊಳ್ಳಲು ಯತ್ನಿಸಿ ನೀರುಪಾಲಾದ ಐವರ ಪೈಕಿ ಮೂವರ ಶವ ಪತ್ತೆಯಾಗಿವೆ. ಇನ್ನೂ ಮೂವರಿಗಾಗಿ ಶೋಧ ಮುಂದುವರೆದಿದೆ. 

‘ಕೊಲ್ಹಾರದ ನಿವಾಸಿಗಳಾದ ಪುಂಡಲೀಕ ಯಂಕಂಚಿ (36), ತಯ್ಯಬ್ ಚೌಧರಿ (35) ಮತ್ತು ದಶರಥ ಗೌಡರ (58) ಎಂಬುವರ ಶವ ಪತ್ತೆಯಾಗಿವೆ.‌ ಮೆಹಬೂಬ್ ವಾಲಿಕಾರ (40) ಮತ್ತು ರಫೀಕ್ ಬಾಂಬೆ (45) ಎಂಬುವರು ಪತ್ತೆ ಆಗಬೇಕಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ತಿಳಿಸಿದರು.

‘ಜೂಜಾಟದ ಬಗ್ಗೆ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದಾಗ, ಕೆಲ ಗ್ರಾಮಸ್ಥರು ಓಡಿ ಹೋದರು. ಇನ್ನೂ ಕೆಲವರು ತೆಪ್ಪದಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ, ತೆಪ್ಪ ಮಗುಚಿದ್ದರಿಂದ ಎಲ್ಲರೂ ನೀರಿಗೆ ಬಿದ್ದರು. ತೆಪ್ಪದಲ್ಲಿದ್ದ ಬಶೀರ್ ಹೊನವಾಡ, ಫಾರುಕ್ ಫತೇಹ್ ಅಹಮದ್‌ ಹಾಗೂ ಸಚಿನ್‌ ಕಟಬರ ಎಂಬುವರು ಈಜಿ ದಡ ಸೇರಿದರು. ಉಳಿದ ಐವರು ನೀರು ಪಾಲಾದರು’ ಎಂದು ಅವರು ತಿಳಿಸಿದರು.

ಅಗ್ನಿಶಾಮಕ ಸಿಬ್ಬಂದಿ, ಮೀನುಗಾರರು ಮತ್ತು ಪೊಲೀಸರು ಎಂಟು ತಂಡಗಳನ್ನು ರಚಿಸಿಕೊಂಡು ದೋಣಿ, ತೆಪ್ಪಗಳಲ್ಲಿ ಬುಧವಾರ ಶೋಧ ಕಾರ್ಯಾಚರಣೆ ನಡೆಸಿದರು. ಜಿಲ್ಲಾ ಆಸ್ಪತ್ರೆಯಲ್ಲಿ ಶವಗಳ ಮರಣೋತ್ತರ ಪರೀಕ್ಷೆ ನಡೆಯಿತು.

ಕುಟುಂಬಕ್ಕೆ ಸಾಂತ್ವನ: ಬಸವನಬಾಗೇವಾಡಿ ಕ್ಷೇತ್ರದ ಶಾಸಕರೂ ಆದ ಸಚಿವ ಶಿವಾನಂದ ಪಾಟೀಲ ಅವರು ಬುಧವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು. ‘ಸಾವಿಗೀಡಾದವರ ಕುಟುಂಬಕ್ಕೆ ಪರಿಹಾರ ನೀಡುವ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ, ತೀರ್ಮಾನಿಸಲಾಗುವುದು’ ಎಂದು ಅವರು ತಿಳಿಸಿದರು.

ವಿಜಯಪುರ ಜಿಲ್ಲೆಯ ಕೊಲ್ಹಾರ ಸಮೀಪ ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿ ನಾಪತ್ತೆಯಾದವರಿಗಾಗಿ ಮೀನುಗಾರರು ಬುಧವಾರ ಶೋಧ ನಡೆಸಿದರು

ವಿಜಯಪುರ ಜಿಲ್ಲೆಯ ಕೊಲ್ಹಾರ ಸಮೀಪ ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿ ನಾಪತ್ತೆಯಾದವರಿಗಾಗಿ ಮೀನುಗಾರರು ಬುಧವಾರ ಶೋಧ ನಡೆಸಿದರು

–ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT