ವಿಜಯಪುರ: ‘ಗುಮ್ಮಟ ನಗರಿ’ಯಲ್ಲಿ ಹದಗೆಟ್ಟ ರಸ್ತೆಗಳು ಜನ–ವಾಹನ ಸಂಚಾರಕ್ಕೆ ಮಾತ್ರ ಅಡಚಣೆ ಉಂಟು ಮಾಡುತ್ತಿಲ್ಲ. ಜನರ ಆರೋಗ್ಯವನ್ನು ಕೆಡೆಸುತ್ತಿವೆ. ಇಷ್ಟಾದರೂ ಮಹಾನಗರ ಪಾಲಿಕೆ ಅಧಿಕಾರಿಗಳು ಕನಿಷ್ಠ ದುರಸ್ತಿ ಮಾಡದೇ ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಜನಪ್ರತಿನಿಧಿಗಳ ತಾತ್ಸಾರಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಬಸ್ ನಿಲ್ದಾಣದ ಎದುರಿನ ರಸ್ತೆ, ಬಾಗಲಕೋಟೆ ರಸ್ತೆ(ಎಸ್‌ಪಿ ನಿವಾಸ–ಸರ್ಕಾರಿ ಪಾಲಿಟೆಕ್ನಿಕ್ ಎದುರಿನ ರಸ್ತೆ), ಜಲನಗರ ಮುಖ್ಯ ರಸ್ತೆ, ಮನಗೂಳಿ ರಸ್ತೆ(ಮರಾಠ ಸ್ಕೂಲ್ ಎದುರು), ಜೋಡು ಗುಮ್ಮಟ ರಸ್ತೆ, ಮೀನಾಕ್ಷಿ ಚೌಕಿ, ಸ್ಟೇಷನ್ ರಸ್ತೆ, ಅಥಣಿ ರಸ್ತೆ, ರಾಮನಗರ–ಬಬಲೇಶ್ವರ ನಾಕಾ ರಸ್ತೆ ಜನ ಸಂಚಾರಕ್ಕೆ ಅಯೋಗ್ಯವಾಗಿವೆ.
ಹೆಜ್ಜೆ ಹೆಜ್ಜೆಗೆ ಬೃಹದಾಕಾರದ ಗುಂಡಿಗಳು ಬಿದ್ದಿವೆ. ಮ್ಯಾನ್ ಹೋಲ್‌ಗಳು ಬಾಯ್ತೆರೆದು ಕೊಂಡಿವೆ. ಮಳೆ ಬಂದರೆ ಕೆಸರು, ಬಿಸಿಲಿದ್ದರೆ ದೂಳಿನ ಮಜ್ಜನವಾಗುತ್ತದೆ. ರಸ್ತೆಯಲ್ಲಿ ಊಸಿರಾಡುವುದೇ ಕಷ್ಟವಾಗಿ ಪರಿಣಮಿಸಿದೆ. ಬೈಕು, ಕಾರುಗಳನ್ನು ಚಲಾಯಿಸಿಕೊಂಡು ಹೋಗುವುದೇ ದುಸ್ತರವಾಗಿದೆ.
ರಸ್ತೆಯಲ್ಲಿರುವ ಗುಂಡಿ ತಪ್ಪಿಸುವ ಭರದಲ್ಲಿ ಎದುರಿನಿಂದ ಬರುವ ಅಥವಾ ಹಿಂದಿನಿಂದ ಬರುವ ವಾಹನಗಳು ಡಿಕ್ಕಿ ಹೊಡೆದು, ಜಗಳ ಕಾಯುವು, ಬಿದ್ದು ಪೆಟ್ಟು ಮಾಡಿಕೊಳ್ಳುವ ಘಟನೆಗಳು ನಿತ್ಯ ನಡೆಯುತ್ತಿವೆ.
ಹದಗೆಟ್ಟ ರಸ್ತೆಗಳಿಗೆ ತಾತ್ಕಾಲಿಕವಾಗಿ ಗುಂಡಿ ಮುಚ್ಚುವ ಕಾರ್ಯವನ್ನೂ ಪಾಲಿಕೆ ಕೈಗೊಂಡಿಲ್ಲ. ಬೃಹತ್ ಗುಂಡಿಗಳಿಗೆ ಇತ್ತೀಚೆಗೆ ಮಣ್ಣನ್ನು ಸುರಿಯಲಾಗಿದ್ದು, ಮಳೆ ಬಂದಾಗ ಕೆಸರು, ಬಿಸಿಲಿದ್ದಾಗ ದೂಳು ಮಯವಾಗುತ್ತಿವೆ.ಹದಗೆಟ್ಟ ರಸ್ತೆಗಳ ಆಜುಬಾಜು ನಿವಾಸಿಗಳಿಗೂ ಸಂಕಷ್ಟ ಎದುರಾಗಿದೆ.
ದೂಳು, ಕೆಸರಿನ ವಾತಾವರಣದಿಂದ ಈ ರಸ್ತೆಗಳಲ್ಲಿ ಸಂಚರಿಸುವವರಿಗೆ ಹಾಗೂ ಆಜುಬಾಜು ನಿವಾಸಿಗಳು, ವ್ಯಾಪಾರಿಗಳಿಗೆ ಉಸಿರಾಟ ತೊಂದರೆ, ಕಣ್ಣು ಉರಿ, ಮೈಕೈ ನೋವು, ಸೊಂಟ ನೋವು ಸೇರಿದಂತೆ ಹತ್ತುಹಲವು ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿವೆ.
ಮಾಡಿದ ರಸ್ತೆಗಳು ಅರೆಬರೆ:ಈಗಾಗಲೇ ನಿರ್ಮಾಣವಾಗಿರುವ ಮಹಾನಗರ ಪಾಲಿಕೆ ಎದುರಿನ ಬಾಗಲಕೋಟೆ ರಸ್ತೆ ಕಾಂಕ್ರೀಟಿಕರಣವೂ ಹತ್ತುಹಲವು ದೋಷಗಳಿಂದ ಕೂಡಿದೆ. ಸಿಸಿ ರಸ್ತೆ ಮೇಲ್ಬಾಗದ ಪದರ(ಸ್ಕಿನ್ ಔಟ್) ಅಲ್ಲಲ್ಲಿ ಕಿತ್ತುಹೋಗಿದೆ. ಪಾದಚಾರಿ ಮಾರ್ಗವೇ ಇಲ್ಲವಾಗಿದೆ. ಮ್ಯಾನ್‌ಹೋಲ್‌ಗಳನ್ನು ಹೊಸದಾಗಿ ಮಾಡಲಾಗುತ್ತಿದೆ.
ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆಯೂ ಅರೆಬರೆಯಾಗಿದೆ. ಪಾದಾಚಾರಿ ಮಾರ್ಗ ಇನ್ನೂ ಪೂರ್ಣಗೊಂಡಿಲ್ಲ. ಲಲಿತ್ ಮಹಲ್ ವರೆಗೆ ನಿರ್ಮಾಣವಾಗಬೇಕಿದ್ದಈ ರಸ್ತೆಯು ಅರ್ಧಕ್ಕೆ ನಿಂತಿದೆ.
ಇಬ್ರಾಹಿಂ ರೋಜಾ ಎದುರಿನ ಸಿಸಿ ರಸ್ತೆಯಲ್ಲೂ ಪಾದಚಾರಿ ಮಾರ್ಗ ಪೂರ್ಣಗೊಂಡಿಲ್ಲ. ಜಲನಗರದ ಕೆಕೆ ಕಾಲೊನಿಯಲ್ಲಿ ಸಿಸಿ ರಸ್ತೆ ನಿರ್ಮಾಣವಾಗಿದ್ದರೂ ಪಾದಾಚಾರಿ ಮಾರ್ಗ, ಚರಂಡಿ ನಿರ್ಮಿಸಿಲ್ಲ. ಇಷ್ಟಾದರೂ ಪಾಲಿಕೆ ಅಧಿಕಾರಿಗಳು, ಎಂಜಿನಿಯರ್ಸ್‌ಗಳು ಕಣ್ಮುಚ್ಚಿ ಕುಳಿತಿದ್ದಾರೆ.
ನಗರದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಯಾವೊಂದು ರಸ್ತೆಗಳು ಎಂಜಿನಿಯರ್ಸ್ ಮಾಡಿರುವಂತೆ ಕಂಡುಬರುತ್ತಿಲ್ಲ. ಪಾಲಿಕೆ ಎಂಜಿನಿಯರ್ಸ್‌ಗಳು ಸಹ ಇವುಗಳ ಉಸ್ತುವಾರಿ ನೋಡಿಕೊಳ್ಳುತ್ತಿಲ್ಲ. ಗುತ್ತಿಗೆದಾರರು, ಎಂಜಿನಿಯರ್ಸ್‌ಗಳು,ಅಧಿಕಾರಿಗಳು ಪರಸ್ಪರ ಶಾಮೀಲಾಗಿದ್ದಾರೆ ಎಂದು ಜಲನಗರದ ನಿವಾಸಿ ಸಂಗಮೇಶ ಬಿರಾದಾರ ಆರೋಪಿಸಿದರು.
ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ಈ ಸಂಬಂಧ ಈಗಾಗಲೇ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ನೋಟಿಸ್ ನೀಡಿ, ಸ್ವತಃ ಕಣ್ಗಾವಲು ವಹಿಸಿರುವ ಕಾರಣ ಒಂದಷ್ಟು ಸುಧಾರಣೆಯ ಹಾದಿ ನಿಧಾನವಾಗಿ ಕಾಣತೊಡಗಿದೆ.
***
₹4 ಕೋಟಿ ಮೊತ್ತದಲ್ಲಿ ಪ್ರಮುಖ ರಸ್ತೆಗಳ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದು, ವರ್ಕ್ ಆರ್ಡರ್ ನೀಡಲಾಗಿದೆ. ಮಳೆ ಕಾರಣಕ್ಕೆ ವಿಳಂಬವಾಗಿದೆ. ಶೀಘ್ರ ಕಾಮಗಾರಿ ಆರಂಭವಾಗಲಿವೆ
–ವಿಜಯ್ ಮೆಕ್ಕಳಕಿ, ಆಯುಕ್ತ, ಮಹಾನಗರ ಪಾಲಿಕೆ, ವಿಜಯಪುರ
***
ವಿಜಯಪುರ ನಗರದಲ್ಲೇ ನಾಲ್ಕೈದು ಜನ ಶಾಸಕರು, ಸಂಸದರು, ಹಿರಿಯ ಅಧಿಕಾರಿಗಳ ವಾಸವಾಗಿದ್ದರೂ. ಪ್ರತಿನಿತ್ಯ ಹದಗೆಟ್ಟ ರಸ್ತೆಗಳಲ್ಲೇ ಸಂಚರಿಸುತ್ತಿದ್ದರೂ ರಸ್ತೆಗಳ ದುರಸ್ತಿಗೆ ಕ್ರಮ ವಹಿಸದೇ ಅಸಡ್ಡೆ ತೋರಿರುವುದು ಖಂಡನೀಯ
–ಗಣೇಶ ಪಾಟೀಲ, ಜಲನಗರ ನಿವಾಸಿ, ವಿಜಯಪುರ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.