ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲತವಾಡ|ಪತ್ನಿ ಮೇಲೆ ಅತ್ಯಾಚಾರ, ಕೊಲೆ ಶಂಕೆ: ತನಿಖೆಗೆ ಪತಿ ಆಗ್ರಹ

Published 2 ಆಗಸ್ಟ್ 2023, 5:02 IST
Last Updated 2 ಆಗಸ್ಟ್ 2023, 5:02 IST
ಅಕ್ಷರ ಗಾತ್ರ

ನಾಲತವಾಡ (ವಿಜಯಪುರ ಜಿಲ್ಲೆ): ‘ನನ್ನ ಪತ್ನಿಯನ್ನು ಐವರು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಶಂಕೆ ಇದೆ. ಇದರ ಬಗ್ಗೆ ತನಿಖೆ ನಡೆಸಬೇಕು’ ಎಂದು ಆರೋಪಿಸಿ ಸಂಗಪ್ಪ ಚಲವಾದಿ ಎಂಬುವರು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಘಾಳಪೂಜಿ ಗ್ರಾಮಕ್ಕೆ ಬಸವನ ಬಾಗೇವಾಡಿ ಡಿವೈಎಸ್ಪಿ ಕುರುಣಾಕರ ಶೆಟ್ಟಿ ನೇತೃತ್ವದಲ್ಲಿ ಪೊಲೀಸ್ ತಂಡವು ಗ್ರಾಮಕ್ಕೆ ಭೇಟಿ ನೀಡಿ, ಪರಿಶೀಲಿಸಿತು.

‘ಘಾಳಪೂಜಿ ಗ್ರಾಮದ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆಯಲ್ಲಿ ಹೊರಗುತ್ತಿಗೆ ನೌಕರ ಸಂಗಪ್ಪ ಚಲವಾದಿ ಅವರ ಪತ್ನಿ ಭೀಮಬಾಯಿ ಚಲವಾದಿ (29) ಅದೇ ವಸತಿ ಶಾಲೆಯಲ್ಲಿ ಕಾವಲುಗಾರ್ತಿ ಆಗಿದ್ದರು. ಜುಲೈ 29ರ ಸಂಜೆ ವಸತಿ ಶಾಲೆ ಬಳಿಯಿರುವ ಚನ್ನಬಸವೇಶ್ವರ ಪಾದಗಟ್ಟಿಯ ಬಳಿ ಭೀಮಬಾಯಿ ಪ್ರಜ್ಞಾಹೀನರಾಗಿ ಬಿದ್ದಿದ್ದರು. ಅವರನ್ನು ತಕ್ಷಣವೇ ಮುದ್ದೇಬಿಹಾಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅವರು ಮೃತಪಟ್ಟಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

‘ನಾಗರಾಜ ಬಡಿಗೇರ, ಬಸವರಾಜ ನಾಗರಬೆಟ್ಟ, ಪ್ರವೀಣ ನಾಗರಬೆಟ್ಟ, ವೀರೇಶ ನಾಗರಬೆಟ್ಟ ಮತ್ತು ಅಮರೇಶ ನಾಗರಬೆಟ್ಟ ವಿರುದ್ಧ ಸಂಗಪ್ಪ ದೂರು ನೀಡಿದ್ದಾರೆ. ಐವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಅವರು ತಿಳಿಸಿದ್ದಾರೆ.

ಡಿವೈಎಸ್ಪಿ ಕರುಣಾಕರ ಶೆಟ್ಟಿ, ಪಿಎಸೈ ಆರೀಫ್ ಮುಶಾಪುರಿ, ಎ.ವೈ ಸಾಲಿ, ಪಿ.ಎಸ್.ಪಾಟೀಲ ಅವರು ದಲಿತ ಸಂಘಟನೆ ಮುಖಂಡರಿಂದ ಪ್ರಕರಣದ ಕುರಿತು ಮಾಹಿತಿ ಸಂಗ್ರಹಿಸಿದರು.

‘ಆರೋಪಿಗಳನ್ನು ಯಾವುದೇ ಕಾರಣಕ್ಕೂ ಕ್ಷಮಿಸಬಾರದು, ನೊಂದ ಕುಟುಂಬಕ್ಕೆ ಸರ್ಕಾರಿ ನೌಕರಿ ನೀಡಬೇಕು. ಗ್ರಾಮದಲ್ಲಿ ದಲಿತರಿಗೆ ರಕ್ಷಣೆ ನೀಡಬೇಕು’ ಎಂದು ದಲಿತ ಮುಖಂಡರಾದ ಬಸವರಾಜ ಚಲವಾದಿ, ಮಂಜು ಕಟ್ಟಿಮನಿ, ಸುಭಾಷ್ ಚಲವಾದಿ, ಡಿ.ದೊಡಮನಿ, ಬಸವರಾಜ ಅಚನೂರ, ಸಿದ್ದಪ್ಪ ಚಲವಾದಿ, ಭೀಮಣ್ಣ ಲೊಟಗೇರಿ, ವೀರೇಶ ಚಲವಾದಿ, ಶರಣಪ್ಪ ಚಲವಾದಿ, ಗುರುಬಸಪ್ಪ ಚಲವಾದಿ, ಮುದಿಯಪ್ಪ ಚಲವಾದಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT