ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂದಗಿ | ಪಾದಚಾರಿಗಳಿಗಿಲ್ಲ ಫುಟ್‌ಪಾತ್‌

ಗೂಡಂಗಡಿಗಳಿಗೆ ವರದಾನವಾದ ಫುಟ್‌ಪಾತ್‌ಗಳು; ಪಟ್ಟಣದ ಫುಟ್‌ಪಾತ್‌ಗಳ ಅತಿಕ್ರಮಣ
Published 30 ಅಕ್ಟೋಬರ್ 2023, 5:51 IST
Last Updated 30 ಅಕ್ಟೋಬರ್ 2023, 5:51 IST
ಅಕ್ಷರ ಗಾತ್ರ

ಸಿಂದಗಿ: ವಿಜಯಪುರ ಜಿಲ್ಲೆಯಲ್ಲಿಯೇ ಸಿಂದಗಿ ಪಟ್ಟಣ ಅತ್ಯಂತ ವೇಗವಾಗಿ ವಿಸ್ತಾರಗೊಳ್ಳುತ್ತ ಸಾಗುತ್ತಿದೆ. ಶೈಕ್ಷಣಿಕವಾಗಿ ಉತ್ತಮ ಹೆಸರು ಮಾಡಿರುವ ಸಿಂದಗಿ ಪಟ್ಟಣವನ್ನು ಸುತ್ತಲಿನ ಜಿಲ್ಲೆಗಳ ಜನರು ವಿದ್ಯಾಭ್ಯಾಸಕ್ಕಾಗಿಯೂ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ವ್ಯಾಪಾರ ವ್ಯವಹಾರಗಳೂ ವೃದ್ಧಿಯಾಗುತ್ತಿವೆ. ಪಟ್ಟಣ ಅಭಿವೃದ್ಧಿಯಾದಂತೆ ರಸ್ತೆ ಪಕ್ಕದಲ್ಲಿನ ಮನೆಗಳು ವ್ಯಾಪಾರಕ್ಕಾಗಿ ಮಳಿಗೆಗಳಾಗಿ ಮಾರ್ಪಾಡು ಹೊಂದುತ್ತಾ ಸಾಗಿವೆ. ಈ ವೇಗದಲ್ಲಿ ಬೆಳವಣಿಗೆ ಕಾಣುತ್ತಿರುವ ಪಟ್ಟಣಕ್ಕೆ ಪೂರಕವಾಗಿ ಉತ್ತಮ ರಸ್ತೆ, ಪಾದಚಾರಿ ಮಾರ್ಗಗಳ ನಿರ್ಮಾಣವೂ ಅಷ್ಟೇ ಅಗತ್ಯವಾಗಿದೆ. 

ಪಟ್ಟಣದ ಬಹುತೇಕ ರಸ್ತೆಗಳು  ವಿಸ್ತರಣೆಯಾಗಿ ಫುಟ್‌ಪಾತ್‌ಗಳು ನಿರ್ಮಾಣಗೊಂಡಿದ್ದರೂ ಪ್ರಯೋಜನವಿಲ್ಲ ಅನ್ನುವಂತಾಗಿದೆ. ಫುಟ್‌ಪಾತ್‌ಗಳು ಪಾದಚಾರಿಗಳಿಗೆ ಬಳಕೆಯಾಗದೇ ಬೀದಿ ಬದಿ ವ್ಯಾಪಾರಿಗಳಿಗೆ, ಆಟೊ ಸ್ಟ್ಯಾಂಡ್‌, ಗೂಡ್ಸ್ ವಾಹನಗಳ ಸ್ಟ್ಯಾಂಡ್, ಜೆಸಿಬಿಗಳ ಸ್ಟ್ಯಾಂಡ್, ಚಹಾ ಅಂಗಡಿ, ಗ್ಯಾರೇಜುಗಳಿಗೆ, ವ್ಯಾಪಾರಿ ಮಳಿಗೆಗಳಿಗೆ ಬಳಕೆಯಾಗುತ್ತಿವೆ.

ಪಟ್ಟಣದ ನಾಲ್ಕೂ ದಿಕ್ಕಿನಲ್ಲಿ ಸಂಚರಿಸಿದರೂ ಎಲ್ಲ ರಸ್ತೆಯಲ್ಲಿನ ಫುಟ್‌ಪಾತ್‌ಗಳು ಅತಿಕ್ರಮಣಗೊಂಡಿವೆ. ಪಾದಚಾರಿಗಳು ಸಂಚರಿಸಲು ತೊಂದರೆ ಪಡುತ್ತಿದ್ದಾರೆ. ವಾಹನಗಳ ಸಂಚಾರ ವಿಪರೀತವಾಗುತ್ತಿದೆ. ರಸ್ತೆ ಬದಿಯಲ್ಲಿ ಪಾದಚಾರಿಗಳು ಸಂಚರಿಸಲು ಭಯ ಪಡುವಂತಾಗಿದೆ. 

ರಸ್ತೆ ಮೇಲೆ ವ್ಯಾಪಾರ:

ಪಟ್ಟಣದ ಬಸ್‌ನಿಲ್ದಾಣದ ರಸ್ತೆಯ ಮೇಲೆಯೇ ಎಲ್ಲೆಂದರಲ್ಲಿ ವ್ಯಾಪಾರ ನಡೆಯುತ್ತದೆ. ವಾಹನಗಳ ಓಡಾಟಕ್ಕೂ ಅಡ್ಡಿಯಾಗುತ್ತಿದೆ. ಬಸ್‌ನಿಲ್ದಾಣದ ಒಳಗೆ ಹಾಗೂ ಹೊರಗೆ ಹೋಗಲು ಬಸ್‌ಗಳು ಪ್ರಯಾಸ ಪಡಬೇಕು. ರಸ್ತೆಯಲ್ಲೇ ರಾಜಾರೋಷವಾಗಿ ತಳ್ಳು ಗಾಡಿಗಳನ್ನು ನಿಲ್ಲಿಸಿ ವ್ಯಾಪಾರ ವಹಿವಾಟು ಮಾಡುವುದು ಇಲ್ಲಿ ಸಾಮಾನ್ಯವಾಗಿದೆ.

ಪಟ್ಟಣದ ಸಂಚಾರದಲ್ಲಿ ಇಷ್ಟೊಂದು ಸಂಚಕಾರ ಎದುರಾದರೂ ಪೊಲೀಸರು ಕಣ್ಮುಚ್ಚಿ ಕುಳಿತಿರುತ್ತಾರೆ. ಆಗಾಗ ಠಾಣಾಧಿಕಾರಿ ತಮ್ಮ ವಾಹನದಲ್ಲಿ ಕುಳಿತು ಸೈರನ್ ಬಾರಿಸಿದರೇ ಇಲ್ಲಿನವರ ಕಿವಿಗೆ ಬೀಳುವುದಿಲ್ಲ. ತಪ್ಪಿ ಆ ಶಬ್ದ ಕೇಳಿಸಿದರೂ ರಸ್ತೆ ಮೇಲಿನ ವ್ಯಾಪಾರಿಗಳು ಕಿವಿಗೆ ಹಾಕಿಕೊಳ್ಳುವುದಿಲ್ಲ. ಗ್ರಾಹಕರಿಗೆ ಅಂಗಡಿ ಸಂಕೀರ್ಣಗಳಿಗೆ ಹೋಗಲು ಆಗುವುದಿಲ್ಲ.

ದುಬಾರಿ ಬಾಡಿಗೆ ಕೊಟ್ಟು ಅಂಗಡಿ ಪಡೆದುಕೊಂಡು ವ್ಯಾಪಾರಿಗಳ ಗೋಳು ಕೇಳುವವರಿಲ್ಲ. ಒಂದು ವೇಳೆ ಪೊಲೀಸರು ಇವರನ್ನು ಎಚ್ಚರಿಸಿದರೆ ಜನಪ್ರತಿನಿಧಿಯಿಂದ ಎಚ್ಚರಿಕೆ ಕರೆ ಬಂದರೂ ಆಶ್ಚರ್ಯ ಪಡಬೇಕಿಲ್ಲ. ಪೊಲೀಸರ ಅಸಹಾಯಕತೆಯೂ ಗಣನೆಗೆ ಬರುತ್ತದೆ.

ಇಕ್ಕಟ್ಟಾದ ರಸ್ತೆಯ ಮಧ್ಯದಲ್ಲಿರುವ ಟಿಪ್ಪು ಸುಲ್ತಾನ್ ವೃತ್ತದಿಂದ ಪ್ರಾರಂಭಗೊಂಡ ಬೀದಿ ಬದಿ ವ್ಯಾಪಾರವೂ ಪಟ್ಟಣದ ಸ್ವಾಮಿ ವಿವೇಕಾನಂದ ವೃತ್ತದವರೆಗೂ ಎರಡೂ ಇಕ್ಕೆಲಗಳಲ್ಲಿ ಪಾದಚಾರಿಗಳು ತಿರುಗಾಡಲು ಆಗದಿರುವ ದುಃಸ್ಥಿತಿ ನಿರ್ಮಾಣವಾಗಿದೆ.

ಎಲ್ಲೆಡೆ ಗೂಂಡಗಡಿ, ಒತ್ತುವರಿ:

ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಿಂದ ಬಸ್‌ನಿಲ್ದಾಣ ರಸ್ತೆಯ ಎಡ ಬದಿಯಲ್ಲಿ ಫುಟ್‌ಪಾತ್‌ ಮೇಲೆ, ಸರ್ಕಾರಿ ಶಾಲೆ ಮುಖ್ಯದ್ವಾರದಲ್ಲಿಯೇ ಎಗ್‌ ಸೆಂಟರ್, ಚಿಕನ್ ಸೆಂಟರ್‌ ಅಂಗಡಿಗಳು, ಆಲಮೇಲ ರಸ್ತೆಯಲ್ಲಿ ಗ್ಯಾರೇಜುಗಳು, ಬಸವೇಶ್ವರ ವೃತ್ತದಲ್ಲಿ ವಿಸ್ತಾರವಾದ ಫುಟ್‌ಪಾತ್‌ಗಳು ನಿರ್ಮಾಣಗೊಂಡಿದ್ದರೂ ಅಲ್ಲಿ ವಿವಿಧ ಗೂಡಂಗಡಿಗಳು ಮೇಲೆದ್ದು ನಿಂತಿವೆ.

ತಾಲ್ಲೂಕು ಆಡಳಿತ ಸೌಧದ ಸುತ್ತಲೂ ಫುಟ್‌ಪಾತ್‌ಗಳ ಮೇಲೆ ಗೂಡಂಗಡಿಗಳು ನಿರ್ಮಾಣಗೊಂಡಿವೆ. ಈ ಬಗ್ಗೆಯೂ ತಾಲ್ಲೂಕು ಆಡಳಿತ ಕೂಡ ಮೌನ ವಹಿಸಿದಿದೆ. ಮೋರಟಗಿ ರಸ್ತೆಯೂ ಇದಕ್ಕೆ ಹೊರತಾಗಿಲ್ಲ. ಒಟ್ಟಿನಲ್ಲಿ ಪಟ್ಟಣದಾದ್ಯಂತ ಒತ್ತುವರಿಯಾಗಿರುವ ಪಾದಚಾರಿ ಮಾರ್ಗಗಳು ತೆರವುಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ಸಿಂದಗಿ ಪಟ್ಟಣದ ಡಾ.ಅಂಬೇಡ್ಕರ್ ವೃತ್ತದ ಬಳಿ ಲೋಕೋಪಯೋಗಿ ಇಲಾಖೆ ಕಾರ್ಯಾಲಯದ ಎದುರಿನ ಫುಟ್‌ಪಾತ್‌ ಆಟೊಸ್ಟ್ಯಾಂಡ್ ಆಗಿರುವುದು
ಸಿಂದಗಿ ಪಟ್ಟಣದ ಡಾ.ಅಂಬೇಡ್ಕರ್ ವೃತ್ತದ ಬಳಿ ಲೋಕೋಪಯೋಗಿ ಇಲಾಖೆ ಕಾರ್ಯಾಲಯದ ಎದುರಿನ ಫುಟ್‌ಪಾತ್‌ ಆಟೊಸ್ಟ್ಯಾಂಡ್ ಆಗಿರುವುದು
ಸಿಂದಗಿ ಬಸ್ ನಿಲ್ದಾಣದ ಎದುರಿನ ರಸ್ತೆಯಲ್ಲಿ ಇನ್ನೂ ನಿರ್ಮಾಣಗೊಳ್ಳದ ಫುಟ್‌ಪಾತ್‌
ಸಿಂದಗಿ ಬಸ್ ನಿಲ್ದಾಣದ ಎದುರಿನ ರಸ್ತೆಯಲ್ಲಿ ಇನ್ನೂ ನಿರ್ಮಾಣಗೊಳ್ಳದ ಫುಟ್‌ಪಾತ್‌
ರಸ್ತೆಯ ಒಂದು ಬದಿಯಲ್ಲಿ ಫುಟ್‌ಪಾತ್‌ ಮಾಡದ ಕಾರಣ ಸಂಚಾರ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಿದೆ. ಫುಟ್‌ಪಾತ್‌ ಅತಿಕ್ರಮಣದ ಕುರಿತು ಸಭೆ ಕರೆದು ಸೂಚನೆ ನೀಡಲಾಗುವುದು
ಡಿ.ಹುಲಗಪ್ಪ ಸಿಪಿಐ ಸಿಂದಗಿ
ಫುಟ್‌ಪಾತ್‌ಗಳ ಮೇಲೆ ಹಾಕಿರುವ ಅಂಗಡಿಗಳನ್ನು ಹಾಗೂ ಗೂಡು ಅಂಗಡಿಗಳನ್ನು ತೆರವು ಗೊಳಿಸಲು ಕ್ರಮ ಕೈಗೊಳ್ಳಲಾಗುವುದು  
ಅಬೀದ್ ಗದ್ಯಾಳ ಉಪವಿಭಾಗಾಧಿಕಾರಿ ಸಿಂದಗಿ ಪುರಸಭೆ ಆಡಳಿತಾಧಿಕಾರಿ
ರಸ್ತೆ ವಿಸ್ತರಣೆಗೊಳಿಸಿ ಫುಟ್‌ಪಾತ್‌ಗಳನ್ನು ನಿರ್ಮಾಣ ಮಾಡುವ ಮೂಲಕ ಪುರಸಭೆಗೆ ಹಸ್ತಾಂತರಿಸಲಾಗಿದೆ. ತೆರುವುಗೊಳಿಸಲು ಪುರಸಭೆ ಅಧಿಕಾರಿಗಳು ಮುಂದಾಗಬೇಕು
ತಾರಾನಾಥ ಎಇಇ ಲೋಕೋಪಯೋಗಿ ಇಲಾಖೆ
ವಾಹನಗಳ ಓಡಾಟ ವಿಪರೀತವಾಗಿದೆ. ರಸ್ತೆಗಳಲ್ಲಿ ಪಾದಚಾರಿಗಳು ಅಡ್ಡಾಡಲು ಭಯ ಪಡುತ್ತಿದ್ದಾರೆ. ಅತಿಕ್ರಮಣಗೊಂಡಿರುವ ಫುಟ್‌ಪಾತ್‌ಗಳನ್ನು ಪುರಸಭೆ ಅಧಿಕಾರಿಗಳು ತೆರುವುಗೊಳಿಸಬೇಕು
ಹಣಮಂತ ಸುಣಗಾರ ಪುರಸಭೆ ಸದಸ್ಯ
ನಮಗೆ ಬಸ್ ನಿಲ್ದಾಣದ ಸುತ್ತ-ಮುತ್ತ ರಸ್ತೆಯಲ್ಲಿಯೇ ಮಾತ್ರ ವ್ಯಾಪಾರ ಆಗುತ್ತದೆ. ಪರ್ಯಾಯ ವ್ಯವಸ್ಥೆ ಮಾಡಿದರೆ ನಮ್ಮ ಒಪ್ಪಿಗೆ ಇಲ್ಲ. ಬೇಕಿದ್ದರೆ ಫುಟ್‌ಪಾತ್‌ ದಂಡೆಗೆ ಸರಿಯುತ್ತೇವೆ
ಬೀದಿಬದಿ ವ್ಯಾಪಾರಿ
ಬೀದಿ ಬದಿ ವ್ಯಾಪಾರಿಗಳು ಫುಟ್‌ಪಾತ್‌ಗಳನ್ನು ಬಿಟ್ಟು ಪರ್ಯಾಯವಾಗಿ ಸ್ಥಳ ಗುರುತಿಸಿಕೊಳ್ಳಬೇಕು. ರಸ್ತೆ ವಿಸ್ತರಣೆ ಮಾಡಿ ಫುಟ್‌ಪಾತ್‌ ಮಾಡಿರುವ ಪ್ರಯೋಜನವೇನು?
ಅಶೋಕ ಅಲ್ಲಾಪೂರ ನಗರ ಸುಧಾರಣಾ ವೇದಿಕೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT