ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿ: ಉದ್ಯಾನವಿಲ್ಲದ ತಾಲ್ಲೂಕು ಕೇಂದ್ರ

ಜಾಗ ಮೀಸಲಿಟ್ಟಿದ್ದರೂ ಅಭಿವೃದ್ಧಿಗೆ ಮುಂದಾಗದ ಇಂಡಿ ಅಧಿಕಾರಿಗಳು
Published 25 ಮಾರ್ಚ್ 2024, 6:15 IST
Last Updated 25 ಮಾರ್ಚ್ 2024, 6:15 IST
ಅಕ್ಷರ ಗಾತ್ರ

ಇಂಡಿ: ತಾಲ್ಲೂಕು ಕೇಂದ್ರವಾಗಿದ್ದರೂ ಇಂಡಿ ಪಟ್ಟಣದಲ್ಲಿ ಇದುವರೆಗೂ ಸುಸಜ್ಜಿತವಾದ ಒಂದು ಉದ್ಯಾನವಿಲ್ಲ. ಜನಸಂಖ್ಯೆ ಸುಮಾರು 50 ಸಾವಿರ ಗಡಿಯಲ್ಲಿದ್ದರೂ ನೆಮ್ಮದಿಯ ವಿಹಾರಕ್ಕಾಗಿ ಒಂದು ತಾಣ ಇಲ್ಲದಂತಾಗಿದ್ದು, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸದಿರುವುದು ವಿಪರ್ಯಾಸ.

ಪಟ್ಟಣದಲ್ಲಿ ಹೊಸದಾಗಿ 165 ನೂತನ ಬಡಾವಣೆಗಳು ತಲೆ ಎತ್ತಿದ್ದು, ಸರ್ಕಾರಿ ನಿಯಮಾವಳಿಯಂತೆ ಉದ್ಯಾನ ಹಾಗೂ ನಾಗರಿಕ ಮೂಲ ಸೌಕರ್ಯಕ್ಕಾಗಿ ಜಾಗ ಮೀಸಲು ಇಡಲಾಗಿದೆ. ಆದರೆ, ಉದ್ಯಾನಗಳನ್ನು ಪುರಸಭೆ ಅಧಿಕಾರಿಗಳು ಅಭಿವೃದ್ಧಿ ಮಾಡುವುದಕ್ಕೆ ಮುಂದಾಗುತ್ತಿಲ್ಲ.

ಉದ್ಯಾನದ ಜಾಗ ಸಂರಕ್ಷಿಸಿಕೊಳ್ಳಲು ಗಮನ ಹರಿಸದ ಕಾರಣ ಅತಿಕ್ರಮಣಕ್ಕೆ ಆಹ್ವಾನ ನೀಡಿದಂತಾಗಿದೆ. ಲವು ಉದ್ಯಾನವನಗಳು ಕೊಳಚೆ ಪ್ರದೇಶಗಳಾಗಿ ಮಾರ್ಪಟ್ಟಿವೆ. 165 ಉದ್ಯಾನವನಗಳ ಪೈಕಿ ಪಟ್ಟಣದ ಮಧ್ಯಭಾಗದಲ್ಲಿರುವ ಕೆಲವು ಉದ್ಯಾನವನಗಳಿಗೆ ಪುರಸಭೆ ಕಂಪೌಂಡ್‌ ನಿರ್ಮಿಸಿದೆ, ಆದರೆ ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ. ಕೆಲವು ಉದ್ಯಾನವನಗಳಲ್ಲಿ ಜೋಕಾಲಿ, ಜಾರುಗುಂಡಿ ಅಳವಡಿಸಿದ್ದರೂ ಉಪಯೋಗಕ್ಕೆ ಬಾರದಂತೆ ಮುರಿದುಕೊಂಡು ಹೋಗಿವೆ.

ಉದ್ಯಾನವನ ಸ್ಥಳಗಳಲ್ಲಿ ನೀರಿನ ವ್ಯವಸ್ಥೆ, ಹುಲ್ಲು ಹಾಸಿಗೆಯಿಲ್ಲ, ಹೂವಿನ ಗಿಡಗಳಿಲ್ಲ. ಕಣ್ಣಿಗೆ ಮುದ ನೀಡುವ ಯಾವುದೇ ಕೆಲಸಗಳು ಆಗಿಲ್ಲ. ಕೆಲವು ಉದ್ಯಾನವನಗಳ ಸ್ಥಳಗಳಲ್ಲಿ ಅರಣ್ಯ ಇಲಾಖೆ ಕೆಲವು ಗಿಡಗಳನ್ನು ನೆಟ್ಟು ಹೋಗಿದ್ದಾರೆ. ಅವುಗಳ ಸಂರಕ್ಷಣೆ ಆಗಿಲ್ಲ. ಶಾಲಾ ವಿದ್ಯಾರ್ಥಿಗಳು ನಿರಾಸೆಗೀಡಾಗಿದ್ದಾರೆ. ರಸ್ತೆಗಳಲ್ಲಿಯೇ ಆಟವಾಡುವ ಪರಿಸ್ಥಿತಿ ಇದೆ.

ವಾಹನಗಳ ವಿಪರೀತ ಓಡಾಟ ಇರುವುದರಿಂದ ರಸ್ತೆಯಲ್ಲಿ ಆಟ ಆಡುವುದಕ್ಕೆ ಪಾಲಕರು ಅನುಮತಿ ನೀಡುತ್ತಿಲ್ಲ. ಹೀಗಾಗಿ ಬಹುತೇಕ ಮಕ್ಕಳು ಮನೆಯೊಳಗೆ ಮುದುರಿಕೊಂಡಿರಬೇಕಿದೆ. ಮಕ್ಕಳ ಆಟಕ್ಕೆ ಪೂರಕವಾಗಬೇಕಿದ್ದ ಉದ್ಯಾನಗಳೆಲ್ಲವೂ ಖಾಲಿ ಬಿದ್ದಿವೆ. 

ಪಟ್ಟಣದಲ್ಲಿ 1 ರಿಂದ 5 ನೇ ತರಗತಿಯವರೆಗೆ ಓದುತ್ತಿರುವ 67 ಪ್ರಾಥಮಿಕ ಶಾಲೆಗಳಿದ್ದು, ಇವುಗಳಲ್ಲಿ 6 ರಿಂದ 10 ವರ್ಷದೊಳಗಿನ 6850 ಮಕ್ಕಳು ಓದುತ್ತಿದ್ದಾರೆ. ಈ ಶಾಲೆಗಳಲ್ಲಿ ತಕ್ಕಮಟ್ಟಿನ ಆಟದ ಮೈದಾನ ಬಿಟ್ಟರೆ ಇನ್ನಾವುದೇ ವ್ಯವಸ್ಥೆಯಿಲ್ಲ. ಪಟ್ಟಣದಲ್ಲಿ ಇಂತಹ ಸುಮಾರು 10 ಸಾವಿರ ಮಕ್ಕಳಿದ್ದು, ಇವರಿಗೆ ಪಟ್ಟಣದಲ್ಲಿ ಅಭಿವೃದ್ಧಿಗೊಂಡಿರುವ ಉದ್ಯಾನವನವಿಲ್ಲ.

ಇಂಡಿ ಪಟ್ಟಣಕ್ಕೆ ಭೀಮಾ ನದಿಯಿಂದ ₹98 ಕೋಟಿ ವೆಚ್ಚದಲ್ಲಿ 24*7 ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಉದ್ಯಾನವನಗಳಿಗೆ ನೀರು ಒದಗಿಸುವುದಕ್ಕೆ ಯಾವುದೇ ಸಮಸ್ಯೆಯಿಲ್ಲ. ಆದರೂ ಯಾವುದೇ ಉದ್ಯಾನವನದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಒಂದು ಹೂವಿನ ಗಿಡಗಳಿಲ್ಲ, ಹುಲ್ಲಿನ ಹಾಸಿಗೆಯಿಲ್ಲ. ಕೂಡಲೇ ಉದ್ಯಾನಗಳನ್ನೆಲ್ಲ ಹಸಿರುಮಯ ಮಾಡುವುದಕ್ಕೆ ಪುರಸಭೆ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ಇತ್ತೀಚೆಗೆ ಉದ್ಯಾನವನಗಳನ್ನು ಪುರಸಭೆಯ ವ್ಯಾಪ್ತಿಗೆ ತೆಗೆದುಕೊಳ್ಳಲಾಗಿದ್ದು ಮುಂದಿನ ದಿನಗಳಲ್ಲಿ ಉದ್ಯಾನವನಗಳನ್ನು ಅಭಿವೃದ್ಧಿ ಮಾಡಲಾಗುವುದು
ಶಿವಾನಂದ ಹಂಗರಗಿ ಪುರಸಭೆಯ ಮುಖ್ಯಾಧಿಕಾರಿ 
ಪಟ್ಟಣದಲ್ಲಿ ಉದ್ಯಾನವನಗಳಲ್ಲಿ ಎಂಬುದು ನನ್ನ ಗಮನಕ್ಕೂ ಬಂದಿದೆ. ಈ ಬಗ್ಗೆ ಶೀಘ್ರದಲ್ಲಿಯೇ ಕ್ರಮ ಜರುಗಿಸಲಾಗುವುದು
ಅಬೀದ್ ಗದ್ಯಾಳ ಉಪವಿಭಾಗಾಧಿಕಾರಿ 
ಪಟ್ಟಣದಲ್ಲಿ ಉದ್ಯಾನವನಗಳ ಅಭಿವೃದ್ಧಿಗಾಗಿಯೇ ಬಜೆಟ್ ತೆಗೆದಿಟ್ಟಿದ್ದು ಶೀಘ್ರದಲ್ಲಿ ಉದ್ಯಾನವನಗಳನ್ನು ಅಭಿವೃದ್ಧಿ ಮಾಡಲಾಗುವುದು
ಅನೀಲಗೌಡ ಬಿರಾದಾರ ಪುರಸಭೆಯ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT