ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರ ಮಹಿಳೆಯ ‘ವೀರಗಲ್ಲು’ ವೈಶಿಷ್ಟ್ಯ..!

Last Updated 23 ಜೂನ್ 2018, 10:15 IST
ಅಕ್ಷರ ಗಾತ್ರ

ಪ್ರಾಚೀನ ಐತಿಹ್ಯ ಹೊಂದಿರುವ ವಿಜಯಪುರ ಜಿಲ್ಲೆಯ ವಿವಿಧೆಡೆ ‘ವೀರಗಲ್ಲು’ಗಳಿವೆ. ಇವು ಆಯಾ ಕಾಲಮಾನದ, ಪ್ರದೇಶದ ಹೋರಾಟಗಾರರನ್ನು ಸ್ಮರಿಸುವ ಸ್ಮಾರಕಗಳಾಗಿವೆ. ಬೆರಳೆಣಿಕೆಯಷ್ಟು ಸುಸ್ಥಿತಿಯಲ್ಲಿದ್ದರೆ, ಹಲವು ವಿನಾಶದಂಚಿನಲ್ಲಿವೆ.

ಮುದ್ದೇಬಿಹಾಳ, ಸಿಂದಗಿ, ಬಸವನಬಾಗೇವಾಡಿ ತಾಲ್ಲೂಕು ವ್ಯಾಪ್ತಿಯಲ್ಲಿ ಈ ‘ವೀರಗಲ್ಲು’ಗಳ ಸಂಖ್ಯೆ ಹೆಚ್ಚಿದೆ. ಗ್ರಾಮಗಳ ಗುಡಿ–ಗುಂಡಾರ, ದೇಗುಲಗಳ ಮುಂಭಾಗ ಇವು ಆಶ್ರಯ ಪಡೆದಿದ್ದು, ಸಂರಕ್ಷಣೆಯಿಲ್ಲದೆ ಅನಾಥ ಸ್ಥಿತಿಯಲ್ಲಿವೆ. ಇವುಗಳ ಮಹತ್ವ, ಐತಿಹ್ಯವೂ ಸ್ಥಳೀಯರಿಗಿಲ್ಲವಾಗಿದೆ.

‘ಅವಿಭಜಿತ ವಿಜಯಪುರ ಜಿಲ್ಲೆಯ ಇತಿಹಾಸವನ್ನು ಅವಲೋಕಿಸಿದಾಗ ಒಂಭತ್ತನೇ ಶತಮಾನದಿಂದ ಈಚೆಗೆ ವೀರಗಲ್ಲು ಸ್ಥಾಪನೆಯಾದ ಮಾಹಿತಿ ಲಭ್ಯವಿದೆ. ಇದಕ್ಕೂ ಹಿಂದಿನ ನಿಖರ ಮಾಹಿತಿ ದೊರಕಿಲ್ಲ. ಬಹುತೇಕ ವೀರಗಲ್ಲುಗಳ ಅಧ್ಯಯನ ನಡೆಸಿದಾಗ ರಾಷ್ಟ್ರಕೂಟರ ಆಳ್ವಿಕೆಯವು ಎಂಬುದು ಪುರಾತನ ಸಾಕ್ಷ್ಯಾಧಾರಗಳಿಂದ ಸಾಬೀತುಪಟ್ಟಿವೆ’ ಎಂದು ಸಂಶೋಧಕ, ಸಿಕ್ಯಾಬ್‌ ಬಾಲಕರ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಎ.ಎಲ್‌.ನಾಗೂರ ‘ಪ್ರಜಾವಾಣಿ’ಗೆ ತಿಳಿಸಿದರು.

ಹೋರಾಟಗಾರರ ನೆನಪು...

‘ಹೋರಾಟದಿಂದ ಮಡಿದವರ ಸ್ಮರಣೆಗಾಗಿ ವೀರಗಲ್ಲು ಸ್ಥಾಪಿಸುವ ಪರಂಪರೆ ಈ ಹಿಂದೆ ರಾಜರ ಆಳ್ವಿಕೆಯಲ್ಲಿತ್ತು. ಇಲ್ಲಿಯ ತನಕ 20ರಿಂದ 25 ವೀರಗಲ್ಲುಗಳನ್ನು ಪತ್ತೆ ಹಚ್ಚಿ ಅಭ್ಯಸಿಸಿರುವೆ. ಅವುಗಳಲ್ಲಿ ಬಹುತೇಕವು ಶಿಥಿಲಾವಸ್ಥೆಯಲ್ಲಿವೆ. ರಕ್ಷಣೆಯಿಲ್ಲದೆ ಹಾಳಾಗಿವೆ. ಕೆಲವೊಂದು ಕಡೆ ದೇಗುಲದ ಅವಶೇಷಗಳಲ್ಲಿ ಮುಚ್ಚಿ ಹೋಗಿವೆ’ ಎಂದು ನಾಗೂರ ವಿಷಾದಿಸಿದರು.

‘ಮುದ್ದೇಬಿಹಾಳ ತಾಲ್ಲೂಕಿನ ಹಂಗರಗೊಂಡ, ಬಸವನಬಾಗೇವಾಡಿ ತಾಲ್ಲೂಕಿನ ಇಂಗಳೇಶ್ವರ, ಸಿಂದಗಿ ತಾಲ್ಲೂಕಿನ ಕೊಂಡಗೂಳಿ ಸೇರಿದಂತೆ ಹಲವೆಡೆ ವೀರಗಲ್ಲುಗಳ ಕುರಿತಂತೆ ಅಧ್ಯಯನ ನಡೆಸಿರುವೆ. ಆದರೆ ನಾಲತವಾಡ ಪಟ್ಟಣದ ರಡ್ಡೇರಪೇಟೆಯ ಹಿರೋಡ್ಯಾ ದೇವಸ್ಥಾನದ ಪಕ್ಕದಲ್ಲಿ ಪತ್ತೆಯಾದ ಅಜ್ಞಾತ ವೀರಗಲ್ಲು ವಿಶೇಷತೆಯನ್ನೊಳಗೊಂಡಿದೆ’ ಎಂದು ಮಾಹಿತಿ ನೀಡಿದರು.

‘ಇದೂವರೆಗೆ ದೊರೆತಿದ್ದ ವೀರಗಲ್ಲುಗಳು ಪುರುಷರ ಸಾಹಸಗಾಥೆಯನ್ನು ಬಿಂಬಿಸಿದ್ದವು. ಇದೀಗ ನಾಲತವಾಡದಲ್ಲಿ ದೊರೆತ ವೀರಗಲ್ಲು ವೀರ ಮಹಿಳೆಗೆ ಸಂಬಂಧಿಸಿದ್ದಾಗಿದೆ.

ಮೂರು ಅಡಿ ಎತ್ತರ ಹೊಂದಿರುವ ಈ ವಿಶೇಷ ವೀರಗಲ್ಲು ನಾಲ್ಕು ಪಟ್ಟಿಕೆಗಳನ್ನೊಳಗೊಂಡಿದೆ. ಕೆಳಭಾಗದ ಮೊದಲ ಪಟ್ಟಿಕೆಯಲ್ಲಿ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ಆಳೆತ್ತರದ ಬಿಲ್ಲು ಹಿಡಿದು ವೀರಾವೇಶದಿಂದ ಹೋರಾಡುತ್ತಿರುವ ವೀರ ಮಹಿಳೆ, ಸಹ ಬಿಲ್ದಾರಿ ಮತ್ತು ಎದುರಾಳಿ ಪಕ್ಷದ ಖಡ್ಗಧಾರಿ ಮಹಿಳೆಯರ ಚಿತ್ರಗಳಿವೆ.

ಎರಡನೇ ಪಟ್ಟಿಕೆಯಲ್ಲಿ ಗಂಟು ಹೊತ್ತ ನಾಲ್ಕು ಕತ್ತೆಗಳ ಚಿತ್ರಗಳಿವೆ. ವೀರಗಲ್ಲಿನಲ್ಲಿ ಕತ್ತೆಯ ಚಿತ್ರ ಬಿಂಬಿಸಿರುವುದು ಅಪರೂಪ. ಮೂರನೇ ಪಟ್ಟಿಕೆಯಲ್ಲಿ ಹೋರಾಟದಲ್ಲಿ ಮಡಿದ, ಎರಡು ಕೇದಗೆ ಹೂವುಗಳನ್ನು ಮುಡಿದ ವೀರ ಮಹಿಳೆಯನ್ನು ಸ್ವರ್ಗಕ್ಕೆ ಕರೆದೊಯ್ಯುತ್ತಿರುವ ಇಬ್ಬರು ಚಾಮರಧಾರಿಣಿಯರ ಚಿತ್ರಗಳಿವೆ. ನಾಲ್ಕನೇ ಪಟ್ಟಿಕೆ ಅಂದರೇ ವೀರಗಲ್ಲಿನ ಮೇಲ್ಭಾಗದ ಪಟ್ಟಿಕೆಯಲ್ಲಿ ವೀರ ಮಹಿಳೆ ಶಿವಸಾಯಜ್ಯ ಪಡೆದ ಚಿತ್ರವಿದೆ.

ಕತ್ತೆಗಳ ಮೇಲೆ ಸರಕು ಹೇರಿಕೊಂಡು ಊರೂರು ಸಂಚರಿಸಿ ವ್ಯಾಪಾರ ಮಾಡುತ್ತಿದ್ದ ಮಹಿಳೆ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ದಾರಿಗಳ್ಳರೊಡನೆ ಹೋರಾಡಿ ಮಗುವಿನ ಸಹಿತ ವೀರ ಮರಣ ಹೊಂದಿರಬೇಕು. ಈ ಕಾರಣಕ್ಕೆ ಮೂರನೇ ಪಟ್ಟಿಕೆಯಲ್ಲಿ ಆಕೆ ಎರಡು ಕೇದಗೆ ಹೂವು ಮುಡಿದುದನ್ನು ವೀರಗಲ್ಲಿನಲ್ಲಿ ತೋರಿಸಲಾಗಿದೆ. ಒಂದು ಕೇದಗೆ ಆಕೆಯದ್ದಾಗಿದ್ದರೆ, ಇನ್ನೊಂದು ಮಗುವಿನದ್ದಾಗಿರಬಹುದಾದ ಸಾಧ್ಯತೆ ಹೆಚ್ಚಿವೆ’ ಎಂದು ನಾಗೂರ ವೀರಗಲ್ಲಿನ ಕುರಿತಂತೆ ತಮ್ಮ ವಿಶ್ಲೇಷಣೆ ಬಿಚ್ಚಿಟ್ಟರು.

‘ಹೆಳವರ ದಾಖಲೆಗಳ ಪ್ರಕಾರ ವೀರಗಲ್ಲಿನಲ್ಲಿ ಚಿತ್ರಿಸಲಾಗಿರುವ ಈ ವೀರ ಮಹಿಳೆಯ ಹೆಸರು ನೀಲಮ್ಮ. ಬೀದರಿನಲ್ಲಿದ್ದ ಈಕೆ ಆ ಪ್ರದೇಶದ ಅರಸರ ಕಿರುಕುಳಕ್ಕೆ ಬೇಸತ್ತು, ನಾಲತವಾಡಕ್ಕೆ ವಲಸೆ ಬಂದು ಉಪ ಜೀವನಕ್ಕಾಗಿ ವ್ಯಾಪಾರ ಮಾಡುತ್ತಿದ್ದಳು.

ಕತ್ತೆಗಳ ಮೇಲೆ ಸರಕು ಹೇರಿಕೊಂಡು ಊರೂರು ತಿರುಗುತ್ತಿದ್ದಳು ಮತ್ತು ಹೆಗ್ಗಣದೊಡ್ಡಿಯ ಸೋಮನಾಥನ ಭಕ್ತೆಯಾಗಿದ್ದಳೆಂದು’ ಈಕೆಯ ವಂಶಸ್ಥರೆಂದು ಹೇಳಿಕೊಳ್ಳುವ ಅಶೋಕ ಗಾದಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT