ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿನ ಅನುದಾನಕ್ಕೆ ಬೇಡಿಕೆ: ಸಂಸದ ಜಿಗಜಿಣಗಿ

ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ
Last Updated 17 ಏಪ್ರಿಲ್ 2021, 13:50 IST
ಅಕ್ಷರ ಗಾತ್ರ

ವಿಜಯಪುರ:ಬುರಣಾಪುರ–ಮದಭಾವಿ ಗ್ರಾಮ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಿಗೆ ಹೆಚ್ಚಿನ ಅನುದಾನ ಒದಗಿಸುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಕೋರಲಾಗುವುದು ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು, ₹95 ಕೋಟಿ ಮೊತ್ತದಲ್ಲಿ ಪ್ರಥಮ ಹಂತದ ಕಾಮಗಾರಿಗಳು ಭರದಿಂದ ಸಾಗಿದೆ. ₹125 ಕೋಟಿ ಮೊತ್ತದ ಎರಡನೇ ಹಂತ ಹಾಗೂ ₹ 80 ರಿಂದ ₹ 90 ಕೋಟಿ ಮೊತ್ತದ ಮೂರನೇ ಹಂತದ ವಿಸ್ತರಣಾ ಕಾಮಗಾರಿಗೆ ಶೀಘ್ರ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗುವುದು ಎಂದರು.

ನಿಲ್ದಾಣವನ್ನು ಎ.ಟಿ.ಆರ್-72 ವಿಮಾನಗಳ ಹಾರಾಟಕ್ಕಾಗಿ ನಿರ್ಮಿಸಲಾಗುತ್ತಿದ್ದು, ಮುಂದೆ ಅದನ್ನು ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆಗಳಾದ ಲಿಂಬೆ, ದ್ರಾಕ್ಷಿ, ದಾಳಿಂಬೆ ಹಾಗೂ ಇತರೆ ಬೆಳೆಗಳ ರಫ್ತಿಗಾಗಿ ವಾಣಿಜ್ಯೋದ್ಯಮ ಏರ್ ಬಸ್ -320 ಗಳ ಹಾರಾಟಕ್ಕೂ ವಿಸ್ತರಿಸುವ ಅತ್ಯವಶ್ಯಕತೆ ಇದೆ ಎಂದರು.

ವಿಮಾನಗಳ ಕಾರ್ಯಾಚರಣೆ ಗಮನದಲ್ಲಿಟ್ಟುಕೊಂಡು ಕಾಮಗಾರಿಗಳು ಶೀಘ್ರಗತಿಯಲ್ಲಿ ನಡೆಯುತ್ತಿದ್ದು, ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಕಾಮಗಾರಿ 10 ತಿಂಗಳಲ್ಲಿ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಅವರು ಹೇಳಿದರು.

ಪ್ರಥಮ ಹಂತದಲ್ಲಿ₹ 95 ಕೋಟಿ ವೆಚ್ಚದಲ್ಲಿ ರನ್ ವೇ, ಟ್ಯಾಕ್ಸಿವೇ, ಏಪ್ರಾನ್ ಐಸೋಲೆಶನ್ ಬೇ, ಪಾರ್ಕಿಂಗ್‌, ವಿಮಾನ ನಿಲ್ಧಾಣ ಆವರಣದಲ್ಲಿ ಕೂಡು ರಸ್ತೆ ಹಾಗೂ ಒಳ ರಸ್ತೆಗಳು, ಫೆರಿಫೆರಲ್ ರಸ್ತೆ ಹಾಗೂ ಇತರ ಕಾಮಗಾರಿಗಳು ಭರದಿಂದ ನಡೆಯುತ್ತಿವೆ.

ಎರಡನೇ ಹಂತದಲ್ಲಿ ₹ 125 ಕೋಟಿ ವೆಚ್ಚದಲ್ಲಿ‌‌ಟರ್ಮಿನಲ್ ಕಟ್ಟಡ, ಎ.ಟಿ.ಸಿ ಟವರ್, ಸಿ.ಎಫ್.ಆರ್ ಕಟ್ಟಡ, ಸುತ್ತಲೂ ಕಂಪೌಂಡ್‌ ಗೋಡೆ ನಿರ್ಮಾಣ, ನೀರು ಸರಬರಾಜು ಮತ್ತು ನೈರ್ಮಲ್ಯ ಹಾಗೂ ರೈನ್ ವಾಟರ್‌ ಹಾರ್ವೆಸ್ಟಿಂಗ್, ನೀರು ಸಂಗ್ರಹಾಲಯ, ಪಂಪ್‌ ಹೌಸ್‌ ಮತ್ತು ಕೆಳಮಟ್ಟದ ನೀರು ಸಂಗ್ರಹಾಲಯ, ಚರಂಡಿ ವ್ಯವಸ್ಥೆ, ವಿಮಾನ ನಿಲ್ದಾಣ ಸೆಕ್ಯೂರಿಟಿ ಇಕ್ಯೂಪ್‌ಮೆಂಟ್, ಸಂಪರ್ಕ ರಸ್ತೆ, ಜಿಲ್ಲಾ ಮುಖ್ಯ ರಸ್ತೆಯಿಂದ ವಿಮಾನ ನಿಲ್ಧಾಣದ ಗಡಿಯವರೆಗೆ, ವಿದ್ಯುತ್ತೀಕರಣ, ಕೇಬಲ್‌ ಹಾಗೂ ಇತರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ.

ಲೋಕೋಪಯೊಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ ಬಿ.ಬಿ.ಪಾಟೀಲ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಆರ್.ಕೆ.ಮುಜುಮದಾರ್, ಪ್ರಕಾಶ್, ಗೋಪಾಲ ಘಟಕಾಂಬಳೆ, ಭೀಮಾಶಂಕರ್ ಹದನೂರ್, ಚಿದಾನಂದ ಚಲುವಾದಿ, ವಿಜಯ ಜೋಶಿ, ಪ್ರಥಮ ದರ್ಜೆ ಗುತ್ತಿಗೆದಾರ ಎಸ್.ಎಸ್ ಆಲೂರ, ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

***

ಲಾಕ್‌ಡೌನ್‌ ಬೇಡ: ಜಿಗಜಿಣಗಿ

ವಿಜಯಪುರ: ಕೋವಿಡ್‌ ಎರಡನೇ ಅಲೆ ನಿಯಂತ್ರಂಣ ಸಂಬಂಧ ಲಾಕ್‌ಡೌನ್ ಮಾಡಿದರೆ ಕೂಲಿಕಾರ್ಮಿಕರು, ಬಡವರು ಸಂಕಷ್ಟಕ್ಕೆ ಸಿಲುಕುವುದರಿಂದ ಲಾಕ್‌ಡೌನ್ ಬದಲು ಪರ್ಯಾಯ ಮಾರ್ಗಗಳತ್ತ ಚಿಂತನೆ ನಡೆಸಬೇಕು ಎಂದು ಸಂಸದ ರಮೇಶ ಜಿಗಜಿಣಗಿ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.

ನೆರೆಯಮಹಾರಾಷ್ಟ್ರದಲ್ಲಿ ಲಾಕ್‌ಡೌನ್ ಮಾಡಿದ್ದರೂ ಏನೂ ಪ್ರಯೋಜನವಾಗುತ್ತಿಲ್ಲ. ಎಂದಿನಂತೆ ಜನಜೀವನ ಸಾಗಿದೆ ಎಂದು ಉದಾಹರಣೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT