ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಖಾಸಗಿ ಕ್ಲಿನಿಕ್ ಮೇಲೆ ದಾಳಿ

Last Updated 24 ಆಗಸ್ಟ್ 2022, 10:04 IST
ಅಕ್ಷರ ಗಾತ್ರ

ವಿಜಯಪುರ(ಬೆಂ.ಗ್ರಾಮಾಂತರ): ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಯಿಂದ ಅಧಿಕೃತವಾಗಿ ಪರವಾನಗಿ ಪಡೆಯದೆ ನಡೆಸುತ್ತಿದ್ದ ಖಾಸಗಿ ಪಾಲಿ ಕ್ಲಿನಿಕ್ ಮೇಲೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಂಜಯ್ ಅವರ ತಂಡ ಬುಧವಾರ ದಾಳಿ ನಡೆಸಿದೆ.

ಪಟ್ಟಣದ ಸಂತೆ ಮೈದಾನದ ಬಳಿ ನಡೆಯುತ್ತಿದ್ದ ಐ.ಎಚ್.ಐ ಆಸ್ಪತ್ರೆ, ಹಾಗೂ ಶ್ರೀನಿವಾಸ ಪಾಲಿ ಕ್ಲಿನಿಕ್ ಗೆ ಬೀಗ ಜಡಿದಿದ್ದಾರೆ.

ಕೋಲಾರ ರಸ್ತೆಯಲ್ಲಿರುವ ಮದೀನಾ ಕ್ಲಿನಿಕ್ ಗೆ ದಾಳಿ ನಡೆಸಿದಾಗ, ವೈದ್ಯರು ಕ್ಲಿನಿಕ್ ನ ಬಾಗಿಲು ಮುಚ್ಚಿಕೊಂಡು ಹೋಗಿದ್ದರು.

ಐ.ಎಚ್.ಐ ಆಸ್ಪತ್ರೆಯಲ್ಲಿ ಎಂ.ಬಿ.ಬಿ.ಎಸ್ ವೈದ್ಯರಿದ್ದರೂ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಯಿಂದ ಅಧಿಕೃತವಾಗಿ ಪರವಾನಗಿ ಪಡೆಯದೇ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು.

ಇದನ್ನು ಗಮನಿಸಿದ ಅಧಿಕಾರಿಗಳು, ರೋಗಿಗಳು ಹಾಗೂ ಇಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನು ಹೊರಗೆ ಕಳುಹಿಸಿ, ಆಸ್ಪತ್ರೆಗೆ ಬೀಗ ಜಡಿದರು.

ಶ್ರೀನಿವಾಸ ಪಾಲಿ ಕ್ಲಿನಿಕ್ ಗೆ ದಾಳಿ ನಡೆಸಿದಾಗ ವೈದ್ಯರು ಇರಲಿಲ್ಲ, ಒಬ್ಬರು ನರ್ಸ್ ಮಾತ್ರ ಇದ್ದರು. ಇಲ್ಲಿನ ವೈದ್ಯರು ಆಯುಷ್ ವೈದ್ಯರಾಗಿದ್ದರೂ ಪಾಲಿಕ್ಲಿನಿಕ್ ನಲ್ಲಿ ಶಸ್ತ್ರಚಿಕಿತ್ಸಾ ಕೊಠಡಿಯಿದೆ. ಎಕ್ಸ್ ರೇ ಕೊಠಡಿ ಮಾಡಿದ್ದಾರೆ. ಮಕ್ಕಳು, ಮಹಿಳೆಯರು, ಸೇರಿದಂತೆ ಎಲ್ಲರಿಗೂ ಆಲೋಪತಿ ಚಿಕಿತ್ಸೆ ನೀಡುತ್ತಿದ್ದಾರೆ. ಆಲೋಪತಿ ಚಿಕಿತ್ಸೆ ನೀಡಲು ಆಯುಷ್ ವೈದ್ಯರಿಗೆ ಅನುಮತಿಯಿಲ್ಲ. ರೋಗಿಗಳ ಕೈಗಳಿಗೆ ಡ್ರಿಪ್ ಹಾಕಿದ್ದಾರೆ. ಪಾರ್ಮಸಿಯಲ್ಲಿ ಎಲ್ಲಾ ಆಲೋಪತಿ ಔಷಧಿಗಳಿಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆ. ಆದರೆ, ಫಾರ್ಮಸಿಸ್ಟ್ ಇಲ್ಲ. ರೋಗಿಗಳನ್ನು ವಿಚಾರಣೆ ನಡೆಸಿದಾಗ ಡಾ.ಚಂದ್ರಕಾಂತ್ ಅವರು ಚಿಕಿತ್ಸೆ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಆದ್ದರಿಂದ ಕ್ಲಿನಿಕ್ ಸೀಜ್ ಮಾಡಿದ್ದೇವೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ತಿಳಿಸಿದರು.

ಮದೀನಾ ಕ್ಲಿನಿಕ್ ನ ವೈದ್ಯರು ಬಾಗಿಲು ಹಾಕಿಕೊಂಡು ಹೋಗಿದ್ದರಿಂದ ಅವರಿಗೆ ನೊಟೀಸ್ ಜಾರಿಗೊಳಿಸಿದ್ದು, ಈ ಕುರಿತು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿ ಮುಂದಿನ ಕ್ರಮಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದರು.

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು: ಇಲ್ಲಿನ ವೈದ್ಯರು ಎಂ.ಬಿ.ಬಿ.ಎಸ್ ಮಾಡಿಕೊಂಡಿಲ್ಲ. ಇವರು ಆಯುಷ್ ವೈದ್ಯರು, ಇವರಿಂದ ನೀವು ಆಲೋಪತಿ ಚಿಕಿತ್ಸೆ ಪಡೆಯಬಾರದು ಎಂದು ಇಲ್ಲಿ ಕೇವಲ ಆಯುರ್ವೇದ ಚಿಕಿತ್ಸೆಯನ್ನಷ್ಟೇ ಪಡೆಯಬೇಕು ಎಂದು ಸಾರ್ವಜನಿಕರಿಗೆ ಅಧಿಕಾರಿಗಳು ಹೇಳುತ್ತಿದ್ದಂತೆ, 'ನಮಗೆ ಕಾಯಿಲೆ ಬಂದಾಗ ಆಸ್ಪತ್ರೆಯಿದೆ. ಇಲ್ಲಿ ಚಿಕಿತ್ಸೆ ಪಡೆಯೋಣ ಎಂದು ಇಲ್ಲಿಗೆ ಬರ್ತೀವಿ. ವೈದ್ಯರಿಗೆ ನೀವು ಎಂಬಿಬಿಎಸ್ ಮಾಡಿದ್ದೀರಾ ಎಂದು ಪ್ರಶ್ನೆ ಮಾಡಲಿಕ್ಕೆ ಆಗುತ್ತಾ, ಎಷ್ಟು ಮಂದಿ ಓದಿರ್ತಾರೆ ಬೋರ್ಡ್ ನೋಡಿಕೊಂಡು ಬರೋಕೆ, ಇಲ್ಲಿಗೆ ಬಂದಾಗ ಚಿಕಿತ್ಸೆ ಕೊಡ್ತಾರೆ. ನಮಗೆ ಮೇಲಾಗುತ್ತೆ, ಅಧಿಕಾರಿಗಳು ನೀವು ಬಂದು ಆಗಾಗ ತಪಾಸಣೆ ಮಾಡಿ, ಏನು ಚಿಕಿತ್ಸೆ ಕೊಡ್ತಿದ್ದಾರೆ ಅಂತಾ ಪರೀಕ್ಷೆ ಮಾಡಬೇಕು, ಅದನ್ನು ಬಿಟ್ಟು ನಮಗೆ ಹೇಳಿದರೆ ಹೇಗೆ?' ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

'ನಮ್ಮ ಸರ್ಕಾರಿ ಆಸ್ಪತ್ರೆ ಇದೆ. ನಿಮಗೆ ಎಲ್ಲಾ ಚಿಕಿತ್ಸೆ ಉಚಿತವಾಗಿ ಸಿಗುತ್ತೆ ಅಲ್ಲಿಗೆ ಹೋಗಿ ಎಂದಾಗ, 2 ಕಿ.ಮೀ.ದೂರ ಹೋಗಬೇಕು, ಸರ್ಕಾರಿ ಆಸ್ಪತ್ರೆ ನ್ಯಾಯವಾಗಿದ್ದರೆ ನಾವ್ಯಾಕೆ ಇಲ್ಲಿಗೆ ಬರ್ತಿವಿ ಎಂದು ತರಾಟೆಗೆ ತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT