ಬುಧವಾರ, ಸೆಪ್ಟೆಂಬರ್ 28, 2022
27 °C

ತಾಂಬಾ: ವಾಡೆ ಜನರಿಗೆ ಆಸರೆಯಾಗದ ಪುನರ್ವಸತಿ ಕೇಂದ್ರ

ಸಿದ್ದು ಹತ್ತಳ್ಳಿ Updated:

ಅಕ್ಷರ ಗಾತ್ರ : | |

Prajavani

ತಾಂಬಾ: ಸಮೀಪದ ವಾಡೆ ಗ್ರಾಮದ ಪ್ರವಾಹ ಸಂತ್ರಸ್ತರಿಗೆ ಆಸರೆ ಆಗಬೇಕಿದ್ದ ಪುನರ್ವಸತಿ ಕೇಂದ್ರ ಮೂಲ ಸೌಲಭ್ಯಗಳಿಂದ ವಂಚಿತಗೊಂಡು, ನಿವಾಸಿಗಳು ಅತಂತ್ರವಾಗಿ ಬದುಕುವಂತಾಗಿದೆ.

ದಶಕದ ಹಿಂದೆ ಇಲ್ಲಿನ ಹಳ್ಳದ ಪ್ರವಾಹಕ್ಕೆ ಸಿಲುಕಿ ವಾಡೆ ಗ್ರಾಮ ತತ್ತರಿಸಿದ್ದಾಗ ಅಂದಿನ ಬಿಜೆಪಿ ಸರ್ಕಾರ ಈ ಗ್ರಾಮಕ್ಕೆ ಪುನರ್ವಸತಿ ಕಲ್ಪಸಿತ್ತು. ಆದರೆ, ಮೂಲಸೌಲಭ್ಯ ಕಲ್ಪಿಸದೇ ನಿರ್ಲಕ್ಷ್ಯ ತೋರಿದ್ದರಿಂದ ಗ್ರಾಮಸ್ಥರು ಪರದಾಡುವಂತಾಗಿದೆ.

ಇಲ್ಲಿನ ವಾಡೆ ಪುನರ್ವಸತಿ ಕೇಂದ್ರದಲ್ಲಿ 208 ಮನೆಗಳನ್ನು ನಿರ್ಮಿಸಲಾಗಿದ್ದು, ಮೂಲಸೌಲಭ್ಯ ಸಮಸ್ಯೆಯಿಂದ ಜನರು ವಾಸಿಸಲು ಹಿಂಜರಿಯುವಂತಾಗಿದೆ ಎಂದು ನಿವಾಸಿಗಳು ದೂರುತ್ತಾರೆ.

ಗ್ರಾಮ ಪಂಚಾಯ್ತಿ ಸೇರಿದಂತೆ ಯಾವುದೇ ಚುನಾವಣೆ ನಡೆದರೂ 5 ಕಿ.ಮೀ ದೂರದ ಹಳೆ ವಾಡೆ ಗ್ರಾಮಕ್ಕೆ ಹೋಗಿ ಮತದಾನ ಮಾಡಬೇಕು. 1680ಕ್ಕೂ ಹಚ್ಚು ಜನಸಂಖ್ಖೆ ಹೊಂದಿರುವ ಈ ಗ್ರಾಮದಲ್ಲಿ 958 ಮಾತ್ರ ಮತದಾನದ ಹಕ್ಕು ಪಡೆದುಕೊಂಡಿದ್ದಾರೆ.

ಪುನರ್ವಸತಿ ಕೇಂದ್ರದಲ್ಲಿ ನೀರು ಸಂಗ್ರಹಕ್ಕಾಗಿ ಟ್ಯಾಂಕ್ ನಿರ್ಮಿಸಿದ್ದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಮತ್ತು ಜೆ.ಎಚ್.ಸಿ. ಯೋಜನೆ ಅಡಿಯಲ್ಲಿ ಮನೆ-ಮನೆ ನಳ ಸಂಪರ್ಕ ಕಲ್ಪಿಸಿದರೂ ಕುಡಿಯುವ ನೀರಿಗೆ ತತ್ವಾರ ಪಡಬೇಕಾದ ಸ್ಥಿತಿ ಇದೆ. ಇಲ್ಲಿನ ರಸ್ತೆಗಳನ್ನು ಗುಣಮಟ್ಟದಿಂದ ನಿಮೀಸದೇ ಬರೀ ಕಲ್ಲಿನ ಖಡಿ ಹಾಕಿದ್ದಾರೆ. ಹೀಗಾಗಿ ಸಂಚರಿಸಲು ಸಹ ಜನರು ತೀವ್ರ ತೊಂದರೆ ಪಡುವಂತಾಗಿದೆ. ಗ್ರಾಮದ ಜನ ಕುಡಿಯುವ ನೀರು, ವಿದ್ಯುತ್, ರಸ್ತೆ, ಆರೋಗ್ಯ ಹೀಗೆ ಪ್ರತಿಯೊಂದಕ್ಕೂ ಪರದಾಡುವುದು ತಪ್ಪಿಲ್ಲ.

ಚುನಾವಣೆ ವೇಳೆ ಇಲ್ಲಿಗೆ ಬರುವ ರಾಜಕೀಯ ನಾಯಕರು ನಂತರ ಇತ್ತ ಮುಖ ಮಾಡುವುದೇ ಇಲ್ಲ. ಇದೆಲ್ಲವನ್ನೂ ಪುಟ್ಟ ಗ್ರಾಮದ ಜನತೆ ಸಹಿಸಿಕೊಳ್ಳುತ್ತಲೇ ಬಂದಿದ್ದಾರೆ.

ಮನೆಗಳು ಶಿಥಿಲ: ಕೆಲ ಮನೆಗಳಲ್ಲಿ ಯಾರು ವಾಸ ಮಾಡದಿರುವುರಿಂದ ಶಿಥಿಲಗೊಳ್ಳುತ್ತಿವೆ. ಈಗಾಗಲೇ ಶೌಚಾಲಯ, ನೆಲಹಾಸು ಕಿತ್ತುಹೋಗಿ ಹಾಳು ಬಿದ್ದಿವೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವುದು ನಿವಾಸಿಗಳ ಆಗ್ರಹವಾಗಿದೆ.

‘ನಿತ್ಯ ಶಾಲೆಗೆ ಮಕ್ಕಳು ನಡೆದುಕೊಂಡು ಹೋಗಬೇಕು. ರಸ್ತೆಯಲ್ಲಿ ಮುಳ್ಳುಕಂಟಿ ಬೆಳೆದಿದ್ದು, ಸಂಚರಿಸಲೂ ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಅನಾರೋಗ್ಯಕ್ಕೆ ಈಡಾದರೆ ದೂರದ ಗ್ರಾಮಗಳಿಗೆ ಚಿಕಿತ್ಸೆಗೆ ತೆರಳಬೇಕು. ಹೀಗಾಗಿ ಇಲ್ಲಿ ನಮ್ಮ ಬದುಕು ಅರಣ್ಯ ರೋಧನವಾಗಿದೆ’ ಎನ್ನುತ್ತಾರೆ ಮಲ್ಲನಗೌಡ ಬಿರಾದಾರ

ಗ್ರಾಮವು ಪ್ರಾಥಮಿಕ ಆರೋಗ್ಯ ಕೇಂದ್ರ, ಉತ್ತಮ ರಸ್ತೆ, ಗ್ರಂಥಾಲಯ, ಚರಂಡಿ, ಬಸ್ ನಿಲ್ದಾಣ, ಶೌಚಾಲಯ ವ್ಯವಸ್ಥೆ ಇಲ್ಲದೆ ವಂಚಿತವಾಗಿದೆ.  ರೈತರಿಗೆ ಮುಖ್ಯವಾಗಿ ಬೇಕಾಗಿರುವ ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಗೆ ನೀರು ಹರಿಸಬೇಕು ಎನ್ನುತ್ತಾರೆ ಅವರು.

ಪುನರ್ವಸತಿ ಕೇಂದ್ರದಲ್ಲಿ ಒಂದು ಅಂಗನವಾಡಿ ಮತ್ತು ಶಾಲೆ ಇಲ್ಲದ್ದರಿಂದ ತಾಂಬಾ ಮತ್ತು ಬಂಥನಾಳ ಗ್ರಾಮಕ್ಕೆ ಕಾಲ್ನಡಿಗೆಯಿಂದ ತೆರಳಬೇಕು ಎಂದು ತಿಳಿಸಿದರು.

ದೂರದ ಗ್ರಾಮಕ್ಕೆ ಕೆಲ ಮಕ್ಕಳು ತೆರಳುವ ಬೇಸರದಿಂದ ಶಾಲೆಯಿಂದ ಹೊರಗುಳಿಯುತ್ತಿದ್ದಾರೆ. ಇದರಿಂದ ಪಾಲಕರಲ್ಲಿ ಆತಂಕ ಮೂಡಿದೆ. ಕೂಡಲೇ ಈ ಪುನರ್ವಸತಿ ಕೇಂದ್ರದಲ್ಲಿ ಅಂಗನವಾಡಿ ಮತ್ತು ಶಾಲೆ ಸ್ಥಾಪಿಸಿ, ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಸತೀಶ ಅಡವಿ ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು