ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನಯೋಗಾಶ್ರಮದಲ್ಲಿ ಚಿಣ್ಣರ ಯೋಗ..!

ವಿಜಯಪುರ ಜಿಲ್ಲಾ ಯೋಗ ಅಸೋಸಿಯೇಷನ್‌ನಿಂದ ಸ್ಪರ್ಧೆ ಆಯೋಜನೆ
Last Updated 5 ಮೇ 2019, 15:26 IST
ಅಕ್ಷರ ಗಾತ್ರ

ವಿಜಯಪುರ:ಪ್ರಶಾಂತ ವಾತಾವರಣ... ಹಸಿರ ಸಿರಿ... ಹಕ್ಕಿಗಳ ಚಿಲಿಪಿಲಿ ಇಂಚರ... ಇದರ ನಡುವೆ ವಿದ್ಯಾರ್ಥಿ ಸಮೂಹದಿಂದ ಯೋಗ ಪ್ರದರ್ಶನ...

ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಭಾನುವಾರ ಜಿಲ್ಲಾ ಯೋಗ ಅಸೋಸಿಯೇಷನ್ ವತಿಯಿಂದ ನಡೆದ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯ ಚಿತ್ರಣವಿದು.

ಮೂಡಣದ ದಿಗಂತದಿಂದ ದಿನಕರ ತನ್ನ ಹೊಂಗಿರಣಗಳನ್ನು ಭುವಿಗೆ ಸ್ಪರ್ಶಿಸುವ ಮುನ್ನವೇ ಯೋಗಪಟುಗಳು ವಿವಿಧ ಆಸನಗಳನ್ನು ಪ್ರದರ್ಶಿಸುವ ಉಮೇದಿನಲ್ಲಿದ್ದರು.

ವಿವಿಧ ವಿಭಾಗಗಳಲ್ಲಿ ಆಯೋಜಿಸಲಾಗಿದ್ದ ಈ ಸ್ಪರ್ಧೆಯಲ್ಲಿ ಬಸವನಬಾಗೇವಾಡಿ, ಸಿಂದಗಿ, ಮುದ್ದೇಬಿಹಾಳ ಸೇರಿದಂತೆ ಹಲ ತಾಲ್ಲೂಕುಗಳ 40ಕ್ಕೂ ಹೆಚ್ಚು ಶಾಲೆಗಳಿಂದ 200ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು. ನಿರ್ಣಾಯಕರು ಸೂಚಿಸಿದ ಆಸನಗಳನ್ನು ಅತ್ಯಂತ ಆಸಕ್ತಿಯಿಂದ ಪ್ರದರ್ಶಿಸಿ ಗಮನ ಸೆಳೆದರು.

ಹುಬ್ಬಳ್ಳಿ, ದಾವಣಗೆರೆ, ಧಾರವಾಡ ಸೇರಿದಂತೆ ವಿವಿಧ ಭಾಗಗಳ ನಿರ್ಣಾಯಕರು ತೀರ್ಪುಗಾರರಾಗಿದ್ದರು. 8-11 ವರ್ಷದ ವಿಭಾಗ, 11-14 ವರ್ಷದೊಳಗಿನ ವಿಭಾಗ, 14-17 ವರ್ಷದೊಳಗಿನ ವಿಭಾಗವಾರು ಯೋಗ ಸ್ಪರ್ಧೆ ನಡೆದವು.

ವಿವಿಧ ಆಸನ ಪ್ರದರ್ಶನ:

ವಿವಿಧ ವಿಭಾಗವಾರು ಬೇರೆ ಬೇರೆ ಆಸನಗಳನ್ನು ಸ್ಪರ್ಧೆಗಾಗಿ ನಿಗದಿಗೊಳಿಸಲಾಗಿತ್ತು. ವಿದ್ಯಾರ್ಥಿಗಳು ತಮಗೆ ನೀಡಲಾದ ವಿವಿಧ ಆಸನ ಪ್ರದರ್ಶಿಸಿದರು. ಸಾರ್ವಜನಿಕರು ಸಹ ವಿದ್ಯಾರ್ಥಿಗಳಿಂದ ನಡೆದ ಯೋಗವನ್ನು ವೀಕ್ಷಿಸಿ ಆನಂದಿಸಿದರು.

8ರಿಂದ 10ವರ್ಷದೊಳಗಿನ ವಿದ್ಯಾರ್ಥಿಗಳು ಪಾದಹಸ್ತಾಸನ, ಚಕ್ರಾಸನ, ಸರ್ವಾಂಗಾಸನ ಪ್ರದರ್ಶಿಸಿದರೆ, 11-14 ವರ್ಷದೊಳಗಿನ ವಿದ್ಯಾರ್ಥಿಗಳು ಗರುಡಾಸನ, ಪಶ್ಚಿಮೋತ್ಥಾಸನ, ಬಕಾಸನ, ಪುರಾಣ ಸುಪ್ತ ವಜ್ರಾಸನ, ಏಕಪಾದ ಚಕ್ರಾಸನ, ಪೂರ್ಣ ಮತ್ಸ್ಯಾಸನ ಹಾಗೂ 14-17 ವರ್ಷದೊಳಗಿನ ವಿದ್ಯಾರ್ಥಿಗಳು ವೀರಭದ್ರಾಸನ, ಚಕ್ರಬಂಧಾಸನ, ಪೂರ್ಣ ಸುಪ್ತ ವಜ್ರಾಸನ, ಪೂರ್ಣ ಭುಜಂಗಾಸನ ಸೇರಿದಂತೆ ವಿವಿಧ ಆಸನಗಳನ್ನು ಪ್ರದರ್ಶಿಸಿ ಗಮನ ಸೆಳೆದರು.

ಯೋಗಕ್ಕೆ ಆದ್ಯತೆ

ಜಗತ್ತಿನಲ್ಲಿ ಯೋಗದ ಮಹತ್ವ ಹಾಗೂ ಪ್ರಾಧಾನ್ಯತೆ ಸದಾ ಇರುತ್ತದೆ ಎಂದು ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಹೇಳಿದರು.

ಆಶ್ರಮದ ಆವರಣದಲ್ಲಿ ನಡೆದ ಜಿಲ್ಲಾ ಮಟ್ಟದ ಎರಡನೇ ಯೋಗ ಸ್ಪರ್ಧೆಗೆ ಚಾಲನೆ ನೀಡಿ ಆಶೀರ್ವಚನ ನೀಡಿದ ಸ್ವಾಮೀಜಿ, ‘ಮಕ್ಕಳು ಯೋಗ ಕಲಿತು, ಇತರರಿಗೂ ಕಲಿಯಲು ಪ್ರೇರಣೆ ನೀಡಬೇಕು’ ಎಂದರು.

‘ಮನಸ್ಸಿಗೆ ಶಾಂತಿ ನೀಡುವಲ್ಲಿ ಯೋಗದ ಪಾತ್ರ ಪ್ರಮುಖ. ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಇದು ಸಹಕಾರಿ. ಯೋಗದಿಂದ ನಿರೋಗಿಯಾಗಿ ಬದುಕಲು ಸಾಧ್ಯ’ ಎಂದು ಹೇಳಿದರು.

ಜಿಲ್ಲಾ ಯೋಗ ಅಸೋಸಿಯೇಷನ್‌ ಅಧ್ಯಕ್ಷ ಸಿದ್ರಾಯ ತಿಗಣಿಬಿದರಿ ಮಾತನಾಡಿ, ‘ಭಾರತೀಯ ಪರಂಪರೆಯಲ್ಲಿ ಯೋಗಕ್ಕೆ ಮಹತ್ವದ ಸ್ಥಾನವಿದೆ. ನಿತ್ಯವೂ ಊಟ–ಉಪಾಹಾರ ಮಾಡುವಂತೆ ಯೋಗ ಮಾಡುವುದನ್ನು ಅಳವಡಿಸಿಕೊಂಡರೆ, ಆರೋಗ್ಯವಂತ ಜೀವನ ನಡೆಸಬಹುದಾಗಿದೆ’ ಎಂದು ತಿಳಿಸಿದರು.

ಆದಾಯ ತೆರಿಗೆ ಸಲಹೆಗಾರ ಮಹಾಂತೇಶ ಕತ್ತಿ ಮಾತನಾಡಿದರು. ಯಕ್ಸಂಬಾದ ಶಿವಯೋಗ ಮಠದ ಮಹಾಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಕೀಲ ಶ್ರೀಕಾಂತ ಬೆಂಕಿ, ನಿವೃತ್ತ ಶಿಕ್ಷಕ ಶರಣಗೌಡ ಪಾಟೀಲ, ಅಸೋಸಿಯೇಷನ್‌ನ ಉಪಾಧ್ಯಕ್ಷ ಸುರೇಶ ಬಿರಾದಾರ, ಕಾರ್ಯದರ್ಶಿ ಸುರೇಶ ಆನಂದಿ, ನಾಗರಾಜ ಪಟ್ಟಣಶೆಟ್ಟಿ, ಆನಂದ ಪಟ್ಟದ, ಸಂಜಯ ಸ್ವಾಮಿ, ರಮೇಶ ದಿನ್ನಿ, ರವೀಂದ್ರ ದಂಬಾಳಿ, ಬಸವರಾಜ ಬಿದರಿ, ಶ್ರೀಧರ ಜೋಶಿ. ಶ್ರೀಶೈಲ ಕಮ್ಮಾರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT