ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದನೇ ತರಗತಿವರೆಗೆ ಮಾತೃ ಭಾಷೆ ಕಡ್ಡಾಯ

Last Updated 15 ಅಕ್ಟೋಬರ್ 2012, 5:20 IST
ಅಕ್ಷರ ಗಾತ್ರ

ವಿಜಾಪುರ: `ಇಂಗ್ಲಿಷ್‌ನ ವ್ಯಾಮೋಹದಿಂದ ಹಲವಾರು ಭಾಷೆಗಳು ನಶಿಸುತ್ತಿವೆ. ಇದನ್ನು ತಡೆಯಲು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದು 1ರಿಂದ 5ನೇ ತರಗತಿಯವರೆಗೆ ಮಾತೃ ಭಾಷೆಯ ಶಿಕ್ಷಣ ಕಡ್ಡಾಯಗೊಳಿಸಬೇಕು~ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ~ ಚಂದ್ರು ಹೇಳಿದರು.

ಮಹಾರಾಷ್ಟ್ರದ ಸೋಲಾಪುರ ನಗರದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನಾಗನಸೂರ ಗ್ರಾಮದ ಗುರು ಬಮಲಿಂಗೇಶ್ವರ ಕಲ್ಯಾಣ ಕೇಂದ್ರದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಹಾರಾಷ್ಟ್ರದಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

`ನಾವು ಮರಾಠಿಯವರ ವಿರೋಧಿ ಅಲ್ಲ. ಕನ್ನಡಿಗರು ಮಹಾರಾಷ್ಟ್ರದಲ್ಲಿ ಅಲ್ಪಸಂಖ್ಯಾತರು. ಆದರೆ, ನಮ್ಮ ಮಾತೃ ಭಾಷೆಯನ್ನು ಬಳಸಿ-ಬೆಳೆಸುವುದು ಎಲ್ಲರ ಕನ್ನಡಿಗರ ಕರ್ತವ್ಯ~ ಎಂದರು.`ಮಹಾರಾಷ್ಟ್ರದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ.ಯನ್ನು ಕನ್ನಡ ಮಾಧ್ಯಮದಲ್ಲಿ ಪೂರೈಸಿ ಅತಿ ಹೆಚ್ಚು ಅಂಕ ಪಡೆದಿರುವ 312 ವಿದ್ಯಾರ್ಥಿಗಳಿಗೆ (ಪ್ರತಿ ಶಾಲಾ-ಕಾಲೇಜುಗಳಿಗೆ ಪ್ರಥಮ ರೂ.8000,  ದ್ವೀತಿಯ ರೂ.7000 ಹಾಗೂ ತೃತೀಯ ರೂ. 6000 ನಗದು) ನಗದು ಬಹುಮಾನ, ಸ್ಮರಣಿಕೆ, ಪ್ರಮಾಣ ಪತ್ರ, ಕೈಗಡಿಯಾರ, ಬ್ಯಾಗ್, ಕನ್ನಡ-ಕನ್ನಡ ಹಾಗೂ ಕನ್ನಡ-ಇಂಗ್ಲೀಷ್ ನಿಘಂಟು, ಪೆನ್ ವಿತರಿಸಲಾಗುತ್ತಿದೆ~ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಸೋಲಾಪುರ ನಗರ ಶಾಸಕ ವಿಜಯಕುಮಾರ ದೇಶಮುಖ, `ಗಡಿ ಭಾಗದಲ್ಲಿರುವ ನಾವು ಯಾವುದೇ ಭಾಷೆ ಮಾತನಾಡಿದರೂ ನಮ್ಮ ಮಾತೃ ಭಾಷೆ ಮರೆಯಬಾರದು. ಕೆಲ ಕಿಡಿಗೇಡಿಗಳು ಮಹಾರಾಷ್ಟ್ರ-ಕರ್ನಾಟಕ ಎಂದು ದ್ವೇಷ ಬೆಳೆಸಲು ಕುಮ್ಮಕ್ಕು ನೀಡುತ್ತಿದ್ದಾರೆ. ಅದಕ್ಕೆ ಯಾರೂ ಕಿವಿಗೊಡಬೇಡಿ~ ಎಂದರು. ಸೋಲಾಪುರದ ಮಾಜಿ ಶಾಸಕ ವಿಶ್ವನಾಥ ಚಾಕೋತೆ, ಸೋಲಾಪುರ ವಿದ್ಯಾಪೀಠದ ನಿವೃತ್ತ ಕುಲಪತಿ ವೀರೇಶ ಸ್ವಾಮಿ ಮಾತನಾಡಿದರು.

ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಂಚಾಲಕ ರಂಗಾರೆಡ್ಡಿ ಕೋಡಿರಾಂಪುರ, ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಯುವರಾಜ ಚುಂಬಳಕರ, ಸಿದ್ದರಾಮ ಸಾಬಡೆ, ಅಶೋಕ ಭಾಂಜೆ, ಎನ್.ಆರ್. ಕುಲಕರ್ಣಿ, ಕನ್ನಡ ಹೋರಾಟಗಾರ ಅಂಕಲಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಜಾಪುರದ ಸಹಾಯಕ ನಿರ್ದೇಶಕ ಸೋಮಶೇಖರ ವಾಲಿ  ಇತರರು ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT