ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಪದಾಧಿಕಾರಿಗಳ ಸಭೆ ಇಂದು

ಜಿಲ್ಲಾ ಕಾರ್ಯಕಾರಿಣಿ 23ಕ್ಕೆ; ಎಪಿಎಂಸಿ ಚುನಾವಣೆಯಲ್ಲಿ ಸೋಲಿನ ಪರಾಮರ್ಶೆ
Last Updated 19 ಜನವರಿ 2017, 5:53 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯ ನಾಲ್ಕು ಎಪಿಎಂಸಿಗಳಲ್ಲಿ ಬಿಜೆಪಿ ಮುಖಭಂಗ ಅನುಭವಿಸಿದ್ದು, ಸೋಲಿನ ಆತ್ಮಾವಲೋಕನಕ್ಕಾಗಿ ಇದೇ 19ರ ಗುರುವಾರ ಜಿಲ್ಲಾ ಘಟಕದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಪ್ರಮುಖರ ಸಭೆ ನಡೆಯಲಿದೆ.

ಕಲಬುರ್ಗಿಯಲ್ಲಿ ಇದೇ 21, 22ರಂದು ನಡೆಯಲಿರುವ ರಾಜ್ಯ ಕಾರ್ಯಕಾರಿಣಿಯಲ್ಲಿ ಜಿಲ್ಲೆಯ ಪ್ರಮುಖ ಘಟನಾವಳಿಗಳನ್ನು ವರಿಷ್ಠರ ಗಮನಕ್ಕೆ ತರುವುದು ಸೇರಿದಂತೆ, ಪ್ರತಿ ತಿಂಗಳು ನಡೆಯುವ ಜಿಲ್ಲಾ ಕಾರ್ಯಕಾರಿಣಿಯ ಸಿದ್ಧತೆಗಳ ಚರ್ಚೆ ನಡೆಯಲಿದೆ.

ಇದೇ ಸಂದರ್ಭ ಜಿಲ್ಲಾ ಘಟಕದ ಅಧ್ಯಕ್ಷ ವಿಠ್ಠಲ ಕಟಕದೊಂಡ ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಪ್ರಮುಖ ರಿಂದ ಸೋಲಿಗೆ ಕಾರಣಗಳೇನು ಎಂಬ ಮಾಹಿತಿ ಪಡೆಯಲಿದ್ದಾರೆ ಎಂದು ಬಿಜೆಪಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಹೆಚ್ಚಿನ ಗೆಲುವು: ಕಟಕದೊಂಡ ಈ ಹಿಂದೆ ಜಿಲ್ಲೆಯ ಎಪಿಎಂಸಿಗಳಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿರಲಿಲ್ಲ. ಹಿಂದಿಗಿಂತ ಈ ಬಾರಿ ಗೆಲುವು ದಾಖಲಿಸಿದ ಬೆಂಬಲಿತರ ಸಂಖ್ಯೆ ಹೆಚ್ಚಿದೆ. ಆದರೂ ನಮ್ಮ ನಿರೀಕ್ಷಿತ ಸ್ಥಾನ ಗೆಲ್ಲಲಾಗಿಲ್ಲ. ಈ ಕುರಿತಂತೆ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಪ್ರಮುಖರಿಂದ ಗುರುವಾರ ನಡೆಯುವ ಸಭೆಯಲ್ಲಿ ಸೋಲಿನ ಆತ್ಮಾವಲೋಕನ ನಡೆಸುವ ಜತೆಗೆ, ಕಾರಣಗಳ ಕುರಿತು ಚರ್ಚಿಸಲಾಗುವುದು ಎಂದು ಜಿಲ್ಲಾ ಘಟಕದ ಅಧ್ಯಕ್ಷ ವಿಠ್ಠಲ ಕಟಕದೊಂಡ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲಾ ಘಟಕದಲ್ಲಿ ಯಾವುದೇ ಗೊಂದಲಗಳಿಲ್ಲ. ಕೆಲವರ ಸೃಷ್ಟಿ. ಹಿಂದಿ ಗಿಂತಲೂ ಬಿಜೆಪಿ ಇದೀಗ ಸದೃಢ ವಾಗಿದೆ. ಜಿಲ್ಲಾ ಕೋರ್‌ ಕಮಿಟಿ ರಚನೆಯಾಗಿಲ್ಲ. ವರಿಷ್ಠರು ಸೂಚಿಸಿದರೆ ಮಾತ್ರ ಜಿಲ್ಲೆಯ ಪ್ರಮುಖರ ಸಭೆ ಕರೆದು ಎಪಿಎಂಸಿ ಸೋಲಿನ ಆತ್ಮಾವಲೋಕನ ನಡೆಸಲಾಗುವುದು.
ಇಲ್ಲದಿದ್ದರೇ ಇದೇ 23ರಂದು ಇಂಡಿ ತಾಲ್ಲೂಕು ತಾಂಬಾದಲ್ಲಿ ನಡೆಯ ಲಿರುವ ಜಿಲ್ಲಾ ಕಾರ್ಯ ಕಾರಿಣಿಯಲ್ಲೇ ಚರ್ಚಿಸಲಾಗುವುದು ಎಂದು ಕಟಕದೊಂಡ ಹೇಳಿದರು.

‘ಕೆಜೆಪಿ’ ಕೂಟ: ಟೀಕೆ ಜಿಲ್ಲಾ ಘಟಕ ‘ಕೆಜೆಪಿ’ ಮುಖಂಡರ ಕೂಟವಾಗಿದೆ ಎಂದು ಹೆಸರು ಬಹಿರಂಗಪಡಿಸ ಲಿಚ್ಚಿಸದ ಬಿಜೆಪಿಯ ಹಿರಿಯ ಮುಖಂಡರೊಬ್ಬರು ‘ಪ್ರಜಾವಾಣಿ’ ಬಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ ಅಧ್ಯಕ್ಷರಿದ್ದ ಅವಧಿಯಲ್ಲಿ ನಡೆದ ಪ್ರಮುಖ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲು, ಎಲ್ಲರನ್ನೂ ಅವರು ವಿಶ್ವಾಸಕ್ಕೆ ತೆಗೆದುಕೊಂಡು ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳೇ ಕಾರಣವಾಗಿದ್ದವು.

ಆದರೆ ಕಟಕದೊಂಡ ಅಧ್ಯಕ್ಷರಾದ ಬಳಿಕ ಯಾವೊಬ್ಬ ಪ್ರಮುಖ ಮುಖಂಡರ ಜತೆ ಚರ್ಚಿಸದೆ, ತನ್ನದೇ ‘ಕೆಜೆಪಿ’ಯ ಕೂಟದ ಜತೆ ಮಾತ್ರ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಪಕ್ಷದ ಗೆಲುವಿಗೆ, ನಾಗಾಲೋಟಕ್ಕೆ ಮುಳುವಾಗಿದೆ ಎಂದು ಹಿರಿಯ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಎಪಿಎಂಸಿ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಂದರ್ಭವೂ ಜಿಲ್ಲೆಯ ಪ್ರಮುಖರ ಜತೆ ಚರ್ಚೆ ನಡೆಸಲಿಲ್ಲ. ಅಭ್ಯರ್ಥಿಗೆ ಎಲ್ಲ ಹೊಣೆಗಾರಿಕೆ ನೀಡಿದರು. ಯಾರೊ ಬ್ಬರನ್ನು ಸಂಪರ್ಕಿಸದೆ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡರು.

ಸಾಕಷ್ಟು ಬಾರಿ ವರಿಷ್ಠರಿಗೆ ದೂರು ಸಲ್ಲಿಸಿದರೂ ಯಾರೊಬ್ಬರೂ ಕಿವಿ ಮೇಲೆ ಹಾಕಿಕೊಳ್ಳುತ್ತಿಲ್ಲ. ಎಪಿಎಂಸಿ ಫಲಿತಾಂಶವನ್ನು ಎಚ್ಚರಿಕೆ ಗಂಟೆ ಎಂದು ಪರಿಗಣಿಸದಿದ್ದರೆ ಮುಂದಿನ ದಿನಗಳಲ್ಲಿ ಭಾರಿ ಪ್ರಮಾಣದ ಬೆಲೆ ತೆರಬೇಕಾ ಗುತ್ತದೆ ಎಂದು ಅವರು ಹೇಳಿದರು.

ಜಿಲ್ಲಾ ಘಟಕದ ಅಧ್ಯಕ್ಷರ ಕಾರ್ಯವೈಖರಿ ಕಾರ್ಯಕರ್ತರ ಆತ್ಮಸ್ಥೈರ್ಯ ಕುಸಿಯುವಂತೆ ಮಾಡಿದೆ. ಕೆಲ ವಿಭಾಗದ ಕಾರ್ಯಕರ್ತರು ನೇರವಾಗಿ ರಾಜ್ಯ ಘಟಕದ ಪ್ರಮುಖರು ಸೇರಿದಂತೆ ಸಂಘ ಪರಿವಾರದ ನಾಯಕರಿಗೆ ಪತ್ರ ಬರೆದು, ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿದ್ದಾರೆ. ಬೆರಳೆಣಿಕೆ ದಿನಗಳಲ್ಲೇ ಜಿಲ್ಲಾ ಘಟಕದಲ್ಲೂ ನಡೆದಿರುವ ‘ಪತ್ರ ಸಮರ’ ಬಹಿರಂಗಗೊಳ್ಳಲಿದೆ ಎಂದು ತಿಳಿಸಿದರು.

ಬಿಜೆಪಿಯ ಮೂಲ ಪ್ರಮುಖರನ್ನು ಕಟಕದೊಂಡ ವಿಶ್ವಾಸದಿಂದ ನೋಡುತ್ತಿಲ್ಲ. ಬೇರೆ ಪಕ್ಷದ ಪ್ರಮುಖರನ್ನು ಬಿಜೆಪಿಗೆ ಕರೆ ತರುವ ನಿಟ್ಟಿನಲ್ಲಿ ಮಗ್ನರಾಗಿದ್ದಾರೆ.

ಇಲ್ಲಿರುವ ನಾಯಕರೇ ಸೂಕ್ತ ಸ್ಥಾನಮಾನ ಸಿಗದೆ ಅಸಮಾಧಾನಗೊಂಡಿರುವ ಸಂದರ್ಭ, ಕಾಂಗ್ರೆಸ್‌–ಜೆಡಿಎಸ್ ನಾಯಕರ ಅಗತ್ಯ ಬಿಜೆಪಿಗಿಲ್ಲ ಎಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಸೂಚಿಸಿದರೂ, ಕಟಕದೊಂಡ ತನ್ನ ಹಠಮಾರಿ ಧೋರಣೆಯಿಂದ ವಿಮುಖರಾಗುತ್ತಿಲ್ಲ ಎಂದು ಮತ್ತೋರ್ವ ಹಿರಿಯ ಮುಖಂಡ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT