ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ನಿಂದ ಪ್ರತ್ಯೇಕ ಪ್ರಚಾರ!

ಮೈತ್ರಿಯಾಗಿದ್ದರೂ ರೋಡ್‌ ಶೋ, ವೇದಿಕೆಗಳಲ್ಲಿ ಕಾಣಿಸದ ಮುಖಂಡರು
ಬಿ.ಜಿ.ಪ್ರವೀಣಕುಮಾರ
Published 28 ಏಪ್ರಿಲ್ 2024, 5:10 IST
Last Updated 28 ಏಪ್ರಿಲ್ 2024, 5:10 IST
ಅಕ್ಷರ ಗಾತ್ರ

ಯಾದಗಿರಿ: ಲೋಕಸಭೆ ಚುನಾವಣೆಗಾಗಿ ಬಿಜೆಪಿ–ಜೆಡಿಎಸ್‌ ಮೈತ್ರಿ ಮಾಡಿಕೊಂಡಿದ್ದು, ಸ್ಥಳೀಯ ಮಟ್ಟದಲ್ಲಿ ಅದು ಕಾಣುತ್ತಿಲ್ಲ.

ಯಾದಗಿರಿಯಲ್ಲಿ ಮಾಜಿ ಸಚಿವ ಡಾ.ಎ.ಬಿ.ಮಾಲಕರೆಡ್ಡಿ, ಗುರುಮಠಕಲ್‌ನಲ್ಲಿ ಶರಣಗೌಡ ಕಂದಕೂರ, ಶಹಾಪುರದಲ್ಲಿ ಗುರುಪಾಟೀಲ ಶಿರವಾಳ ಜೆಡಿಎಸ್‌ ಪರವಾಗಿ ಪ್ರತ್ಯೇಕ ಸಭೆಗಳನ್ನು ಮಾಡಿ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ಆದರೆ, ಬಿಜೆಪಿ ಹಮ್ಮಿಕೊಳ್ಳುವ ರೋಡ್‌ ಶೋ, ವೇದಿಕೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿಲ್ಲ. ಇದರಿಂದ ಇನ್ನೂ ಮೈತ್ರಿ ಧರ್ಮ ಪಾ‍ಲನೆ ಆಗುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ರಾಯಚೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ 5 ರಲ್ಲಿ ಕಾಂಗ್ರೆಸ್, 2ರಲ್ಲಿ ಬಿಜೆಪಿ ಮತ್ತು ದೇವದುರ್ಗ ಒಂದು ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಜಿಲ್ಲೆಯಲ್ಲಿ ಗುರುಮಠಕಲ್, ಯಾದಗಿರಿ, ಶಹಾಪುರ ಮತ್ತು ಸುರಪುರ ನಾಲ್ಕು ವಿಧಾನಸಭಾ ಕ್ಷೇತ್ರಗಳಿವೆ. ಗುರುಮಠಕಲ್ ಮತಕ್ಷೇತ್ರ ಕಲಬುರಗಿ ಲೋಕಸಭೆ ವ್ಯಾಪ್ತಿಗೆ ಒಳಪಟ್ಟಿದೆ.

ಇತ್ತೀಚೆಗೆ ಯಾದಗಿರಿಯಲ್ಲಿ ಬಿಜೆಪಿ ಪ್ರಮುಖ ಕಾರ್ಯಕರ್ತರ ಬಹಿರಂಗ ಪ್ರಚಾರ ಸಭೆ ಹಮ್ಮಿಕೊಳ್ಳಲಾಗಿತ್ತು. ಅಲ್ಲಿಯೂ ಜೆಡಿಎಸ್‌ ನಾಯಕರು ಸುಳಿದಾಟ ಇರಲಿಲ್ಲ. ಸುರಪುರ, ಹುಣಸಗಿ, ಶಹಾಪುರದಲ್ಲಿ ಬಿಜೆ‍ಪಿ ರೋಡ್‌ ಶೋ ನಡೆಸಲಾಗಿತ್ತು. ಆದರೆ ಅಲ್ಲೂ ಕೂಡ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ.

ಲೋಕಸಭಾ ಚುನಾವಣೆ, ಸುರಪುರ ಉಪಚುನಾವಣೆ ಕಾವು ದಿನೇ ದಿನೇ ಏರುತ್ತಿದ್ದರೂ ಮೈತ್ರಿ ಪಕ್ಷದ ಬಗ್ಗೆ ಮುಖಂಡರಿಗೂ ಇನ್ನೂ ಗೊಂದಲ ನಿವಾರಣೆ ಆಗಿಲ್ಲ.

ಲೋಕಸಭೆ ಕ್ಷೇತ್ರದಲ್ಲಿ ರಾಜಾ ಅಮರೇಶ್ವರ ನಾಯಕ, ಸುರಪುರ ಉಪಚುನಾವಣೆಗೆ ರಾಜೂಗೌಡ ಜತೆ ಪ್ರಚಾರದಲ್ಲಿ ಭಾಗವಹಿಸಬೇಕಿತ್ತು. ಆದರೆ, ಜೆಡಿಎಸ್‌ ನಾಯಕರು ಬಹಿರಂಗವಾಗಿ ಕಾಣಿಸುತ್ತಿಲ್ಲ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಸೇರಿದ್ದ ಮಾಜಿ ಸಚಿವ ಡಾ.ಎ.ಬಿ.ಮಾಲಕರೆಡ್ಡಿ, ಗುರುಪಾಟೀಲ ಶಿರವಾಳ ಅವರು ಜೆಡಿಎಸ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT