ಗುರುವಾರ , ಫೆಬ್ರವರಿ 9, 2023
30 °C
ಅಧ್ಯಯನಕಾರರ ಗಮನ ಸೆಳೆತ್ತಿರುವ ಇಡ್ಲೂರು ಶಂಕರಲಿಂಗೇಶ್ವರ

ಯಾದಗಿರಿ: ಗಡಿಯಲ್ಲಿದೆ ಎರಡು ಸಾವಿರ ವರ್ಷಗಳ ಗುಡಿ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಜೈಗ್ರಾಮ ಗ್ರಾಮ ಪಂಚಾಯಿತಿಯ ಇಡ್ಲೂರು ಗ್ರಾಮದ ವ್ಯಾಪ್ತಿಯಲ್ಲಿ ಪುರಾತನ ಶಂಕರಲಿಂಗೇಶ್ವರ ದೇವಸ್ಥಾನವಿದ್ದು, ತೆಲಂಗಾಣದ ಗಡಿಯಲ್ಲಿ ಭಕ್ತರ, ಶಾಸನಗಳ ಅಧ್ಯಯನಕಾರರ ಗಮನ ಸೆಳೆಯುತ್ತಿದೆ.

ದೇವಸ್ಥಾನವನ್ನು ಇಡ್ಲೂರು ಶಂಕರಲಿಂಗೇಶ್ವರ ದೇವಸ್ಥಾನ ಎಂದೇ ಕರೆಯಲಾಗುತ್ತಿದೆ.

ಶಂಕರಲಿಂಗ ದೇವರ ವಿಗ್ರಹವು ಉದ್ಭವ ಮೂರ್ತಿ. ಮನುಷ್ಯರಾರೂ ಪ್ರಾಣ ಪ್ರತಿಷ್ಠೆ ಮಾಡದ ಲಿಂಗವಾಗಿದ್ದು, ಸಾವಿರಾರು ವರ್ಷಗಳ ಇತಿಹಾಸವಿದೆ. ಈ ದೇವಸ್ಥಾನದ ಪ್ರಾಚೀನತೆ ಮತ್ತು ದೇವರ ಶಕ್ತಿಯ ಬಗ್ಗೆ ಇಲ್ಲಿನ ಜನರಲ್ಲಿ ಪ್ರಬಲ ನಂಬಿಕೆ ಇದೆ.

ದೇವಸ್ಥಾನದ ಹೊರಭಾಗದ ಹೊಸ್ತಿಲು ಪ್ರತಿ ಸಾವಿರ ವರ್ಷಗಳಿಗೆ ಒಮ್ಮೆ ಭಿನ್ನವಾಗುತ್ತದೆಯಂತೆ. ಇಲ್ಲಿಯವರೆಗೆ ಎರಡು ಬಾರಿ ಭಿನ್ನವಾಗಿದೆ. ಆದ್ದರಿಂದ ಇದು ಎರಡು ಸಾವಿರ ವರ್ಷಗಳ ಪುರಾತನ ಕಾಲದ ದೇವಸ್ಥಾನ. ದೇವಸ್ಥಾನದ ಹೊರಭಾಗ ನೋಡಿದಾಗ ಅಷ್ಟು ಪುರಾತನ ಕಾಲದ್ದಲ್ಲ ಎನ್ನಿಸಿದರೂ ಶಂಕರಲಿಂಗ ದೇವರ ಮೂರ್ತಿ ಮತ್ತು ಅದರ ತತ್ತ್ವ ಪ್ರಾಚೀನತೆಯನ್ನು ಗಮನಿಸಿದರೆ ಇದು ಎರಡು ಸಾವಿರ ವರ್ಷಗಳಿಗಿಂತಲೂ ಹಿಂದಿನ ಕಾಲದ ಮೂರ್ತಿ ಎನ್ನುವುದು ಸ್ಪಷ್ಟವಾಗುತ್ತದೆ ಎನ್ನುವುದು ಸ್ಥಳೀಯರ ಹೇಳಿಕೆ.

ದೇವಸ್ಥಾನಕ್ಕೆ ಅನತಿ ದೂರದಲ್ಲಿ ಎರಡು ಹಳ್ಳಗಳು ಸೇರಿ ಒಂದಾದ ದೊಡ್ಡದಾದ ಹಳ್ಳ ಹರಿಯುತ್ತಿದೆ‌. ಅದನ್ನು 'ಕೂರ್ಮಾನದಿ' ಎಂದು ಕರೆಯುತ್ತಾರಂತೆ. 'ಆಂಧ್ರಪುರಾಣ' ದಲ್ಲಿ ಶಂಕರಲಿಂಗೇಶ್ವರ ಮಹಾತ್ಮೆಯ ಉಲ್ಲೇಖವಿದ್ದು ಕೂರ್ಮಾನದಿಯ ದಡದಲ್ಲಿದೆ ಎನ್ನುವ ಉಲ್ಲೇಖವಿದೆಯಂತೆ. ಶಾಸನಗಳಲ್ಲಿ 'ಜಡೆಯ ಶಂಕರ ದೇವರು' ಎಂದು ಈ ದೇವರ ಕುರಿತು ಹೇಳಲಾಗಿದೆ.

ಕರ್ನಾಟಕದಲ್ಲಿ ಹಲವು ಕಡೆ ಜಡೆಯ ಶಂಕರಲಿಂಗ ದೇವಸ್ಥಾನಗಳಿದ್ದು, ಆ ದೇವಸ್ಥಾನಗಳ ಇತಿಹಾಸದೊಂದಿಗೆ ಇಡ್ಲೂರು ಶಂಕರಲಿಂಗ ದೇವಸ್ಥಾನದ ತೌಲನಿಕ ಅಧ್ಯಯನ ಮಾಡಿದಾಗ ಐತಿಹಾಸಿಕ ಸತ್ಯ ದೊರಕಬಹುದು.

ವಾಸ್ತಿಶಿಲ್ಪ: ಈ ದೇವಸ್ಥಾನವೂ ತ್ರಿಕೂಟ ಹೊಂದಿದೆ. ಪೂರ್ವಕಾಲದ ಒಂದು ಅರಸು ಮನೆತನೆದವರ ಕುಲದೇವರು ಅಥವಾ ಆರಾಧ್ಯ ದೇವರು ಜಡೆಯ ಶಂಕರಲಿಂಗ ಆಗಿದ್ದು, ಅವರ ಮನೆತನದವರು ತಮ್ಮ ಆಳ್ವಿಕೆಗೆ ಒಳಪಟ್ಟ ಭೂಭಾಗದಲ್ಲಿ ಅಲ್ಲಲ್ಲಿ ಜಡೆಯ ಶಂಕರಲಿಂಗ ದೇವಸ್ಥಾನಗಳನ್ನು ಕಟ್ಟಿಸಿರಬಹುದು ಎಂದು ಅಂದಾಜಿಸಲಾಗಿದೆ. ದೇವಸ್ಥಾನದ ಪ್ರಾಂಗಣದಲ್ಲಿ ಶಿಲಾ ಶಾಸನವೊಂದಿದೆ. ಇದರ ಇತಿಹಾಸದ ಕುರಿತು ಹೆಚ್ಚಿನ ಅಧ್ಯಯನಗಳಾಗಬೇಕು ಎನ್ನುವುದು ಗ್ರಾಮಸ್ಥರ ಆಶಯ.

ಇಡ್ಲೂರು ಶಂಕರಲಿಂಗನ ವೈಶಿಷ್ಟ್ಯ ಎಂದರೆ ಶಿವಲಿಂಗದ ಮುಂಭಾಗದಲ್ಲಿ ಶಿವನ ಮುಖವಿದೆ. ಶಿವನ ಮುಖವೇ ಶಂಕರನಾಗಿದ್ದು, ಅದು ಸಾಕಾರ ಶಿವನ ಪ್ರತೀಕ. ನಿರಾಕಾರ ಶಿವಲಿಂಗದ ಒಡಲಲ್ಲಿಯೇ ಸಾಕಾರ ಶಂಕರ ಮೂಡಿದ್ದಾನೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಜನರು ಶಂಕರನ ಮುಖದ ಮೂಲಕ ಶಿವಲಿಂಗದ ದರ್ಶನ ಮಾಡುತ್ತಾರೆ. ಶಿವರಾತ್ರಿ ವೇಳೆ ಇಲ್ಲಿ ವಿಶೇಷ ಪೂಜೆ ಕೈಕಂರ್ಯ ನಡೆಯುತ್ತದೆ.

ಈ ದೇವಸ್ಥಾನವೂ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದೆ.

ನಂದಿ ವಿಗ್ರಹ: ಈ ದೇವಸ್ಥಾನದ ಪ್ರಮುಖ ಆಕರ್ಷಣೆ ಇಲ್ಲಿನ ಕುಸುರಿ ಕೆತ್ತನೆಯ ನಂದಿ ವಿಗ್ರಹ. ಇದನ್ನು ಶಂಕರಲಿಂಗ ದೇವರ ಭಕ್ತನಾಗಿದ್ದ ದನಗಾಹಿ ಬಾಲಕನೊಬ್ಬ ನಂದಿ ವಿಗ್ರಹ ಕೆತ್ತುತಿದ್ದರು. ದಿನಕ್ಕಿಷ್ಟು ವಿಗ್ರಹ ಕೆತ್ತನೆ ಮಾಡುತ್ತಾ, ಆಕರ್ಷಕ ಕುಸುರಿ ಕೆತನ್ನೆ ಮಾಡುತ್ತಿದ್ದರು. ಒಂದು ದಿನ ದನಗಾಹಿಯ ತಾಯಿ ಮಗನನ್ನು ಹುಡುಕಿ ಬಂದು ನೋಡುತ್ತಾಳೆ. ಬಾಲಕ ತಕ್ಷಣ ಕೆತ್ತನೆಯನ್ನು ನಿಲ್ಲಿಸುತ್ತಾನೆ. ಆಗ ನಂದಿ ವಿಗ್ರಹದ ಕಿವಿಯೊಂದು ವಿರೂಪವಾಗುತ್ತದೆ ಎನ್ನುವ ಕಥೆ ಜನಜನಿತ.

ಹಿಂದೆ ನಂದಿ ವಿಗ್ರಹದ ಮೂಗಿನ ಎರಡೂ ರಂದ್ರಗಳಿಂದ ನೀರಿನ ಹನಿ ಜಿನುಗುತ್ತಿತ್ತು. ದೇವಸ್ಥಾನಕ್ಕೆ ಬಂದಿ ಭಕ್ತರು ನಿಂದೀ ದೇವರಲ್ಲಿ ತಮ್ಮ ಕಷ್ಟ ಹೇಳಿಕೊಂಡರೆ ಪರಿಹಾರವಾಗುತ್ತದೆ ಎಂಬ ನಂಬಿಕೆ ಭಕ್ತರದು ಎಂದು ದೇವಸ್ಥಾನ ಸಮಿತಿಯ ಕಾರ್ಯದರ್ಶಿ ತಾಯಪ್ಪ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು