ಸುರಪುರ: ‘ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೃಷಿ ಸಂಬಂಧಿತ ಯೋಜನೆಗಳ ಬಗ್ಗೆ ರೈತರಿಗೆ ಸಮರ್ಪಕ ಮಾಹಿತಿ ದೊರಕುತ್ತಿಲ್ಲ. ಹಾಗಾಗಿ ಯೋಜನೆಗಳ ಕುರಿತ ಪೋಸ್ಟರ್‌ಗಳನ್ನು ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಅಂಟಿಸಬೇಕು’ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಸೂಚನೆ ನೀಡಿದರು.
ತಾಲ್ಲೂಕಿನ ಕವಡಿಮಟ್ಟಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ಆಡಳಿತ ಭವನ ಮತ್ತು ರೈತರ ವಸತಿ ನಿಲಯ ಉದ್ಘಾಟಿಸಿ ಅವರು ಮಾತನಾಡಿದರು.
‘ಕೃಷಿ ವಿಜ್ಞಾನ ಕೇಂದ್ರ, ಕೃಷಿ ವಿಶ್ವ ವಿದ್ಯಾಲಯಗಳು ಸೇರಿದಂತೆ ಎಲ್ಲ ಕೃಷಿ ಸಂಬಂಧಿತ ಕಚೇರಿಗಳು ಕಟ್ಟಕಡೆಯ ರೈತನಿಗೂ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡಬೇಕು’ ಎಂದು ತಿಳಿಸಿದರು.
‘ಕೇಂದ್ರ ಸರ್ಕಾರ ಕೃಷಿಗೆ ₹ 1.25 ಲಕ್ಷ ಕೋಟಿ ಹಣ ಮೀಸಲಿಟ್ಟಿದೆ. ಕೇಂದ್ರ ಸರ್ಕಾರದ ಅನುದಾನದಲ್ಲಿ ₹ 80 ಲಕ್ಷ ವೆಚ್ಚದ ಆಡಳಿತ ಭವನ, ₹ 70 ಲಕ್ಷ ವೆಚ್ಚದಲ್ಲಿ ರೈತರ ವಸತಿ ನಿಲಯವನ್ನು ಉದ್ಘಾಟಿಸಿದ್ದೇವೆ. ಈ ಭಾಗದಲ್ಲಿ ಕೃಷಿ ಸಂಬಂಧ ಯಾವುದೇ ಕಾಮಗಾರಿಗಳ ಪ್ರಸ್ತಾವ ಸಲ್ಲಿಸಿದಲ್ಲಿ ಶೀಘ್ರ ಮಂಜೂರು ಮಾಡಲಾಗುವುದು’ ಎಂದು ಆಶ್ವಾಸನೆ ನೀಡಿದರು.
‘ಪ್ರತಿ ಹೋಬಳಿ ವಿಭಾಗದಲ್ಲಿ ಕೃಷಿ ಯಂತ್ರೋಪಕರಣಗಳ ಕೇಂದ್ರ ತೆರೆಯುವ ಉದ್ದೇಶ ಇದೆ. ಕೃಷಿಯಲ್ಲಿ ಡ್ರೋನ್ ಬಳಕೆಗೆ ಉತ್ತೇಜನ ನೀಡಲಾಗುವುದು. ಡ್ರೋನ್ ಚಾಲನೆ ಮಾಡಲು ಮಹಿಳೆಯರಿಗೆ ಆದ್ಯತೆ ನೀಡಲಾಗುವುದು’ ಎಂದರು.
‘ಆಯಾ ಪ್ರದೇಶದ ಹವಾಗುಣಕ್ಕೆ ಅನುಗುಣವಾಗಿ ಬೆಳೆಯುವ 1200 ಕ್ಕೂ ಹೆಚ್ಚು ತಳಿಗಳನ್ನು ನಮ್ಮ ವಿಜ್ಞಾನಿಗಳು ಆವಿಷ್ಕರಿಸಿದ್ದಾರೆ. ರೈತರು ಈ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಬೆಲೆ ಏರಿಳಿತದಿಂದ ನಷ್ಟ ಅನುಭವಿಸದಿರಲು ಮಿಶ್ರ ಬೇಸಾಯ ಪದ್ಧತಿ ಅನುಸರಿಸಬೇಕು’ಎಂದು ಸಲಹೆ ನೀಡಿದರು.
‘ನಮ್ಮದು ಈಗ ಅತ್ಮ ನಿರ್ಭರವಾಗಿ ಬೆಳೆಯುತ್ತಿದೆ. ಹಿಂದೆ ಸಾಕಷ್ಟು ಅಹಾರ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದ್ದೆವು. ಈಗ 340 ಮಿಲಿಯನ್ ಮೆಟ್ರಿಕ್ ಟನ್ ಆಹಾರ ಧಾನ್ಯ, 240 ಮಿಲಿಯನ್ ಮೆಟ್ರಿಕ್ ಟನ್ ಹಣ್ಣು ಮತ್ತು ತರಕಾರಿ ಬೆಳೆಯುತ್ತಿದ್ದೇವೆ. ರಫ್ತಿನಲ್ಲಿ ನಮ್ಮ ದೇಶ ವಿಶ್ವದಲ್ಲಿ 8ನೇ ಸ್ಥಾನದಲ್ಲಿದೆ ಎಂದು ಹೇಳಲು ಹೆಮ್ಮೆಯಾಗುತ್ತದೆ’ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿ, ‘ಈ ಭಾಗದ ರೈತರು ನೀರಾವರಿ ಸೌಲಭ್ಯ ಹೊಂದಿದ ಪುಣ್ಯವಂತರು. ಆದರೂ ನೀರಾವರಿ ವಂಚಿತ ರೈತರು ಬಾಳು ಹಸನಾಗಿಲ್ಲ. ಎಲ್ಲಿಯವರೆಗೆ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರಕುವುದಿಲ್ಲವೋ ಅಲ್ಲಿಯವರೆಗೆ ರೈತನ ಸ್ಥಿತಿ ಸುಧಾರಿಸುವುದಿಲ್ಲ’ ಎಂದು ವಿಷಾದಿಸಿದರು.
ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಂ. ಹನುಮಂತಪ್ಪ ಮಾತನಾಡಿದರು. ಐಸಿಎಆರ್ ಅರ್ಟಾನಿ ಡೈರೆಕ್ಟರ್ ವಿ.ವೆಂಕಟಸುಬ್ರಹ್ಮಣ್ಯ, ಕೃಷಿ ವಿ.ವಿ.ಕುಲಸಚಿವ ಎಂವೀರನಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ನಿಂಗಪ್ಪ ಕೆಂಗೂರಿ, ತಹಶೀಲ್ದಾರ್ ಕೆ. ವಿಜಯಕುಮಾರ, ತಾ.ಪಂ ಇಒ ಬಸವರಾಜ ಸಜ್ಜನ್ ಇದ್ದರು.
ಕೃಷಿ ವಿವಿ ವಿಸ್ತರಣಾಧಿಕಾರಿ ಎಸ್.ಬಿ.ಗೌಡಪ್ಪ ಸ್ವಾಗತಿಸಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಮುತ್ತುರಾಜ ವಂದಿಸಿದರು.
‘ಕಾರ್ಯಕ್ರಮದ ಕುರಿತು ಸಂಬಂಧಿಸಿದ ಇಲಾಖೆ ಪ್ರಚಾರ ಮಾಡಿಲ್ಲ. ಈ ಬಗ್ಗೆ ಸುತ್ತಮುತ್ತಲಿನ ರೈತರಿಗೂ ಗೊತ್ತಿಲ್ಲ. ಕೇಂದ್ರ ಸಚಿವರು ಭಾಗವಹಿಸಿರುವ ಇಂತಹ ಕಾರ್ಯಕ್ರಮ ರೈತರಿಲ್ಲದೆ ಸಪ್ಪೆಯಾಯಿತು’ ಎಂದು ರೈತ ವಿಶ್ವನಾಥರೆಡ್ಡಿ ಬೋನ್ಹಾಳ ಅಸಮಾಧಾನ ವ್ಯಕ್ತಪಡಿಸಿದರು.
‘ಮಹಿಷ ದಸರಾ ಬೇಡ’
‘ಮೈಸೂರು ದಸರಾ ವಿಶ್ವ ಪ್ರಸಿದ್ಧ. ಇದಕ್ಕೆ ಮಸಿ ಬಡಿಯುವ ಉದ್ದೇಶದಿಂದ ಕೆಲವರು ಮಹಿಷ ದಸರಾ ಆಚರಿಸಲು ಹೊರಟಿರುವುದು ಸರಿಯಲ್ಲ. ಇದನ್ನು ಕೈಬಿಡಬೇಕು’ ಎಂದು ಕಾರ್ಯಕ್ರಮದ ನಂತರ ಸಚಿವೆ ಶೋಭಾ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ‘ಕೇಂದ್ರ ಸರ್ಕಾರ ಎನ್‍ಡಿಆರ್‌ಎಫ್ ನಿಯಮಾವಳಿ ಪ್ರಕಾರ ರೈತರಿಗೆ ಪರಿಹಾರ ಧನ ವಿತರಿಸುತ್ತಿದೆ. ರಾಜ್ಯ ಸರ್ಕಾರ ಕೇಂದ್ರದ ಮೇಲೆ ಗೂಬೆ ಕೂರಿಸಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ’ ಎಂದು ಆರೋಪಿಸಿದರು. ‘ರಾಜ್ಯದಲ್ಲಿ ವಿದ್ಯುತ್ ಅಭಾವ ಸೃಷ್ಟಿಯಾಗಿದೆ. ಅಗತ್ಯ ಬಿದ್ದಲ್ಲಿ ರಾಜ್ಯ ಸರ್ಕಾರ ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿಸಬೇಕು. ಗ್ಯಾರಂಟಿಗಳಿಗೆ ಅನಗತ್ಯ ಹಣ ವ್ಯಯಿಸಿ ರಾಜ್ಯವನ್ನು ಕತ್ತಲೆಯತ್ತ ದೂಡುತ್ತಿದೆ’ ಎಂದು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.